ಗೋಪಾಲ ಪೆರಾಜೆ ಕೊಳಂಗಾಯ
ಮಾನವ ಚರಿತ್ರೆಯ ಬೆಳವಣಿಗೆಗಳಲ್ಲಿ ಯುದ್ಧಗಳು, ಆಕ್ರಮಣಗಳು, ಹಿಂಸೆ, ಕ್ರೌರ್ಯ, ಹೊಸ ನೆಲೆಗಳ ಹುಡುಕಾಟ ಸ್ಥಾಪನೆಗಳದ್ದೇ ದೊಡ್ಡ ಪಾಲು. ಅವುಗಳೆಲ್ಲವನ್ನು ತನ್ನ ಗರ್ಭದಲ್ಲಿ ಹುಗಿದಿಟ್ಟುಕೊಂಡರು ಅದು ಮನುಕುಲದ ಬೆಳವಣಿಗೆಗೆ ನೀಡಿದ ಕೊಡುಗೆ ಅಪಾರ. ಅದು ಕಲೆ ಸಾಹಿತ್ಯ, ಸಂಸ್ಕೃತಿ, ವಿಜ್ಞಾನ ಎಲ್ಲವನ್ನು ಪಸರಿಸಿಕೊಂಡು ಪ್ರೇರೇಪಿಸಿಕೊಂಡು ಬಂದಿದೆ. ಅಂದಿನ ರೀತಿ ಒಂದು ಇಂದಿನ ಪರಿಸ್ಥಿತಿಯೇ ಮತ್ತೊಂದು. ಒಂದಂತು ಸತ್ಯ ಇತಿಹಾಸ ನಿಂತ ನೀರಲ್ಲ. ಅದು ಸದಾ ಚಲನಶೀಲವಾದುದು. ಆದರೆ ಮುನುಕುಲದ ಸವಾಲು ಇರುವುದು. ಹಿಂಸೆ ಕ್ರೌರ್ಯ ಗಳ ಬದಿಗೆ ಸರಿಸಿ ಮಾನವ ಕುಲ ಒಂದೇ ಎನ್ನುವುದನ್ನು ಸಾರುವುದರಲ್ಲಿದೆ.
ಜಾಗತಿಕ ಮಧ್ಯಯುಗದ ಚರಿತ್ರೆ ಆಕ್ರಮಣ ಯುದ್ಧಗಳಿಂದ ತುಂಬಿಹೋಗಿದ್ದರು ನಮ್ಮ ಮೆಲಿನ ಆಕ್ರಮಣವನ್ನು ನಾವು ಸಹಿಸೆವು ಎಂಬ ಸ್ವಾಭಿಮಾನದ ಹೋರಾಟಗಳಿಗೂ ಸಾಕ್ಷಿಯಾಗಿದೆ. ಅಂತಹ ನೂರಾರು ಹೋರಾಟಗಳಲ್ಲಿ ಪಾಲ್ಗೊಂಡ ಜನ ಸಾಮಾನ್ಯರು ಕೂಡ ದೌರ್ಜನ್ಯಗಳ, ದಬ್ಬಾಳಿಕೆಗಳ ವಿರುದ್ಧ ಬಂಡೆದ್ದರು. ಸಾವು ನೋವು ಬಲಿದಾನಗಳಿಗೆ ಕಾರಣರಾದರು. ನಮ್ಮ ಕಾಲಬುಡದಲ್ಲೇ ಅಂತಹ ಒಂದು ಘಟನೆ. ೧೮೩೪ರ ಅಂದಿನ ಕೊಡಗು ರಾಜ್ಯ ಮತ್ತು ಅವಿಭಜಿತ ದಕ್ಷಿಣ ಕನ್ನಡದಲ್ಲಿ ಇದರ ತಯಾರಿ ಸೂತ್ರಗಳು ನಡೆದ ಪರಿಣಾಮವೇ ೧೮೩೭ರ ಮಾರ್ಚ್- ಎಪ್ರಿಲ್ ತಿಂಗಳಲ್ಲಿ ಈ ಭಾಗದ ಜನ ಬ್ರಿಟಿಷರ ವಿರುದ್ಧ ತೋಳೆತ್ತಿ ನಿಂತರು. ಕ್ಷಣಿಕ ಜಯವನ್ನು ಕಂಡು ಅವರರಾದರು. ಮಾತ್ರವಲ್ಲ ತಮ್ಮದೇ ರೀತಿಯ ಕಾಣಿಕೆಯೊಂದನ್ನು ಭಾರತದ ಸ್ವಾತಂತ್ರ್ಯ ಚಳವಳಿಗೆ ನೀಡಿ ಮರೆಯಾದರು. ಇದು ನಮ್ಮೂರಿನ ನಮ್ಮ ಸ್ವಾಭಿಮಾನದ ಸಂಕೇತ.
೧೮೩೭ರಲ್ಲಿ ನಡೆದ ಈ ಐತಿಹಾಸಿಕ ಘಟನೆಯನ್ನು ಇತಿಹಾಸಕಾರರು ತಮ್ಮದೇ ಹೆಸರುಗಳಿಂದ ಗುರುತಿಸಿ ಬರೆದಿದ್ದಾರೆ. ಇಂಗ್ಲೀಷರ ತಮ್ಮ ದಾಖಲೆಗಳಲ್ಲಿ ಇದನ್ನು ‘ಕೆನರಾ ಬಂಡಾಯ’ ಎಂಬುದಾಗಿ ಗುರುತಿಸಿದ್ದಾರೆ. ಸ್ಥಳೀಯ ಚರಿತ್ರೆಕಾರರು ‘ಅಮರ ಸುಳ್ಯ ದಂಗೆ, ಅಮರ ಸುಳ್ಯ ರೈತ ಹೋರಾಟ, ಅಮರ ಸುಳ್ಯ ಸ್ವಾತಂತ್ರ್ಯ ಸಮರ ಎಂಬೆಲ್ಲ ಸಿರೋನಾಮೆ ಅಡಿಯಲ್ಲಿ ಬರೆದರೆ ಈ ಘಟನೆಯನ್ನು ಆರಂಭದ ಕಾಲದಲ್ಲಿ ಗುರುತಿಸಿದವರು ಅದನ್ನು ಕಲ್ಯಾಣಪ್ಪನ ಕಾಟುಕಾಯಿ ಎಂದೇ ಚಿತ್ರಿಸಿದ್ದಾರೆ. ಘಟನೆಗೆ ಕಾರಣವಾದ ಪ್ರೇರಣೆ ಮಾರ್ಗದರ್ಶನ ನೀಡಿದ ಕೈಗಳು ಕೊಡಗಿನಾದ್ಯಂತ ಕಂಡು ಬಂದರೂ ಅದರ ಕೇಂದ್ರ ಸ್ಥಳ ಅಂದಿನ ಅಮರ ಸುಳ್ಯ ಇಂದಿನ ಸುಳ್ಯವಾಗಿತ್ತು. ಬಲವಾದ ಜನಾಂಗೀಯ ಒಳಾಡಳಿತ ವ್ಯವಸ್ಥೆಯೊಂದನ್ನು ಹೊಂದಿದ್ದ ಈ ಭಾಗದ ಅರೆಭಾಷಿಕ ಗೌಡರೇ ಅದರ ನೇತೃತ್ವ ವಹಿಸಿರುವುದು ಸತ್ಯ. ಅಂದಿನ ಕೂಜುಗೋಡು ಕಟ್ಟೆಮನೆ ಅದರಲ್ಲಿ ಖಂಡಿತಾ ಪ್ರಮುಖವಾಗಿದ್ದರಲೇ ಬೇಕು. ಇದು ಅಧ್ಯಯನಕ್ಕೆ ಸಂಬಂಧಪಟ್ಟ ಸಂಗತಿ.
೧೮೩೦ರ ಹೊತ್ತಲ್ಲಿ ಕರ್ನಾಟಕದಲ್ಲಿ ಕೆಲಭಾಗಗಳಲ್ಲಿ ತೀವ್ರ ರೈತ ಬಂಡಾಯಗಳು ನಡೆಯುತ್ತಿರುತ್ತದೆ. ಇವೆಲ್ಲ ಜನ ಸಾಮಾನ್ಯರು ನಡೆಸಿದ ಹೋರಾಟಗಳಾಗಿವೆ. ಭೂ ಒಡೆತನ ಮತ್ತು ಕಂದಾಯ ಕುರಿತಂತೆ ಜಾರಿ ಬಂದ ಹೊಸ ಕಾನೂನು ಕ್ರಮಗಳನ್ನು ರೈತರು ವಿರೋಧಿಸಿದರು. ಸರಿ ಸುಮಾರು ಅದೇ ಸಮಯದಲ್ಲಿ ಅಂದರೆ ೧೮೩೪ರಲ್ಲಿ ಕೊಡಗು ಅರಸು ಚಿಕ್ಕವೀರ ರಾಜೇಂದ್ರನ ಪತನವಾಗುತ್ತದೆ. ಬ್ರಿಟಿಷರ ಮೋಸದಾಟ ಈ ಭಾಗದ ಜನ ಸಾಮಾನ್ಯರ ತೀವ್ರ ಅಸಹನೆಗೆ ಕಾರಣವಾಗಿದೆ. ಅವರು ಈ ಹಿಂದೆಯೇ ಹೇಳಿದಂತೆ ಕಂದಾಯ, ಭೂ ಒಡೆತನ ತೆರಿಗೆ ಪದ್ಧತಿಗಳನ್ನು ಪ್ರತಿರೋದಿಸುತ್ತಾ ೧೮೩೭ರಲ್ಲಿ ಬ್ರಿಟೀಷ್ ವಿರುದ್ದ ಯುದ್ದವನ್ನೇ ಸಾರಿದರು. ಮಾತ್ರವಲ್ಲ ಸುಳ್ಯದಿಂದ ಹೊರಟ ದಂಡು ಎಪ್ರಿಲ್ ೫ ರಂದು ಬ್ರಿಟಿಷ್ ಕಂಪೆನಿಯ ಒಡೆತನದಲ್ಲಿದ್ದ ಮಂಗಳೂರನ್ನು ಸ್ವಂತಂತ್ರಗೊಳಿಸಿತು. ಅಂದಿನ ದಿನ ಮಂಗಳೂರಿನ ಬಾವುಟ ಗುಡ್ಡದಲ್ಲಿ ಹಾರಾಡುತ್ತಿದ್ದ ಬ್ರಿಟೀಷ್ ಕಂಪೆನಿ ಧ್ವಜವನ್ನು ಕೆಳಗಿಸಿ ಕೊಡಗರಸರ ಹಾಲೇರಿ ವಂಶ ಧ್ವಜವನ್ನು ಹಾರಿಸಿ ವಿಜಯದಿಂದ ಬೀಗಿತು. ಈ ಸಮಯದಲ್ಲಿ ಮುಂಚೂಣಿಯ ನಾಯಕರು ಅಂದು ಕರೆದಿದ್ದ ಜನ ಸಾಮಾನ್ಯರ ಸಭೆಯಲ್ಲಿ ೧೨,೦೦೦ ಜನ ಭಾಗಿಯಾಗಿದ್ದರಂತೆ ತಮ್ಮ ಮುಂದಿನ ಆಡಳಿತಕ್ಕೆ ಅವರು ಹಲವು ನಿರ್ಣಯಗಳನ್ನು ಇಲ್ಲಿ ಘೋಷಿಸಿದ್ದಾರೆ.
೧೬೦೩ರಲ್ಲಿ ಬ್ರಿಟಿಷರು ಅಂದರೆ ಯುರೋಪಿನ ಒಂದು ವ್ಯಾಪಾರಿ ವರ್ಗ ಅಂದಿನ ಭಾರತದ ಪ್ರಮುಖ ಬಂದರು ಆಗಿದ್ದ ಸೂರತ್ತಿನಲ್ಲಿ ಬಂದಿಳಿದರು. ಬ್ರಿಟಿಷರಿಗೆ ೧೬೧೩ರಲ್ಲಿ ಮೊಘಲ್ ಚಕ್ರವರ್ತಿ ಜಹಂಗೀರ್ ಕೋಟಿಯೊಂದನ್ನು ಕಟ್ಟಿಕೊಳ್ಳಲು ಅನುಮತಿ ಕೊಟ್ಟಿದ್ದಾನೆ. ಅಂದಿನಿಂದ ಈಸ್ಟ್ ಇಂಡಿಯಾ ಕಂಪೆನಿ ತನ್ನದಲ್ಲದ ನಾಡಿನಲ್ಲಿ ರಾಜ್ಯವನ್ನು ಕಟ್ಟಿ ವಿಸ್ತರಣೆಗೆ ತೊಡಗಿದೆ. ಇವರ ಕುಟಿಲ ನೀತಿಗಳ ವಿರೋಧಿಸಿ ದೇಶದ ಅನೇಕ ಕಡೆಗಳಲ್ಲಿ ಅಂದಿನಿಂದ ಸ್ಥಳೀಯ ರಾಜರುಗಳು ಯುದ್ಧಗಳನ್ನು ನಡೆಸಿದರು.ಅಮರ ಸುಳ್ಯ ಕದನ ಕೂಡ ಇವುಗಳೆಲ್ಲದರ ಒಂದು ಭಾಗವಷ್ಟೆ. ಸೋಲು ಗೆಲವುಗಳ ಜತೆ ಬೆಳೆಯುತ್ತಲೇ ಬಂದ ಬ್ರಿಟೀಷರನ್ನು ಸರಿಸುಮಾರು ೨೩೦ ವರ್ಷಗಳ ನಂತರ ನಮ್ಮ ಹಿರಿಯರನ್ನು ಎದುರಿಸಿದ್ದಾರೆ. ಅಂದರೆ ೧೮೩೭ರಲ್ಲಿ ನಡೆದ ಈ ಪ್ರತಿರೋಧಕ್ಕೆ ಇಂದಿಗೆ ೧೮೮ ವರ್ಷಗಳು ಕಳೆದಿವೆ. ಈ ಘಟನೆಯ ಗಂಭೀರತೆ ಬಗ್ಗೆ ಕಾಟನ್ ಎಂಬ ಬ್ರಿಟಿಷ್ ಅಧಿಕಾರಿ ಅಂದಿನ ಮೈಸೂರು ಸಂಸ್ಥಾನದ ಕಮೀಷನರಾಗಿದ್ದ ಮಾರ್ಕ್‌ಕಬ್ಬನ್ ಎನ್ನುವ ಮೇಲಾಧಿಕಾರಿಗೆ ಬರೆದ ಪತ್ರದ ಆಧಾರದಲ್ಲಿ ಕಬ್ಬನ್ ಪ್ರಕರಣದ ಬಗ್ಗೆ ಹೀಗೆ ಪ್ರತಿಕ್ರಿಯಿಸುತ್ತಾನೆ. ಅವರ ಗುರಿ ಬ್ರಿಟಿಷ್ ಅಧಿಕಾರವನ್ನು ಕಿತ್ತೊಗೆದು ತಮ್ಮದನ್ನು ಸ್ಥಾಪಿಸುವುದೇ ಆಗಿತ್ತೇ ಹೊರತು ಜನರನ್ನು ಕೊಳ್ಳೇ ಹೊಡೆಯುವುದಲ್ಲ…… ಅಂದರೆ ನಮ್ಮ ಜನ ಸ್ವಾತಂತ್ರ್ಯ ಸ್ವಾಭಿಮಾನವನ್ನು ಒಟ್ಟಿಗೆ ಎತ್ತಿ ಹಿಡಿದರು ತೊಳೆತ್ತಿದರು.
ಇತಿಹಾಸಕಾರರು ಈ ಹೋರಾಟ ಮತ್ತು ಅದರ ಪರಿಣಾಮಗಳ ಬಗ್ಗೆ ವಿವರವಾಗಿ ದಾಖಲಿಸಿದ್ದಾರೆ. ಅದರಂತೆ ೧೯೩೭ ಮಾರ್ಚ್ ಕೊನೆ ಮತ್ತು ಎಪ್ರಿಲ್ ತಿಂಗಳ ಮೊದಲ ದಿನಗಳು ನಿರ್ಣಾಯಕವಾಗಿದ್ದವು. ಸುಳ್ಯದ ಪೂಮಲೆ ಬೆಟ್ಟದಡಿ ಮತ್ತು ಉಬರಡ್ಕದ ಮದುವೆ ಗದ್ದೆಯಲ್ಲಿ ಯುದ್ಧ ತಯಾರಿ ನಡೆಸಿ ಹೋರಾಟ ದಂಡು ಬೆಳ್ಳಾರೆ ತಲುಪಿ ಅಲ್ಲಿದ್ದ ಬ್ರಿಟಿಷ್ ಖಜಾನೆಯನ್ನು ಮೊದಲಿಗೆ ಕೈವಶಮಾಡಿಕೊಳ್ಳುತ್ತದೆ ನಂತರ ಹೋರಾಟಗಾರರನ್ನು ನಾಲ್ಕು ವಿಭಾಗಗಳನ್ನಾಗಿ ಅದರಂತೆ ಮೂರು ಕವಲುಗಳು. ೧) ಬೆಳ್ಳಾರೆ- ಪುತ್ತೂರು- ಫರಂಗಿಪೇಟೆ ಮಂಗಳೂರು, ೨) ವಿಟ್ಲ- ಕುಂಬ್ಳೆ- ಕಾಸರಗೋಡು- ಮಂಜೇಶ್ವರ ಮಂಗಳೂರು, ೩) ಬಂಟ್ವಾಳ- ಕಾರ್ಕಳ- ಮಂಗಳೂರು. ಇವುಗಳು ಮಂಗಳೂರನ್ನು ಜಯಿಸಲು ನಿಯೋಜನೆಗೊಂಡರೆ ನಾಲ್ಕನೇ ಕವಲು ಉಪ್ಪಿನಂಗಡಿ- ಬಿಸಿಲೆ- ಮಡಿಕೇರಿ ಜಯಿಸುವುದಾಗಿತ್ತು. ಮೊದಲ ಮೂರು ಕವಲು ನಿರ್ಧಿಷ್ಟ ದಿನದಂದು ಮಂಗಳೂರು ತಲುಪಿ ತನ್ನ ವಿಜಯ ಧ್ವಜವನ್ನು ಹಾರಿಸಿದೆ. ನಾಲ್ಕನೇ ಕವಲಿಗೆ ತನ್ನ ಗುರಿಮುಟ್ಟಲಾಗದೆ ಸೋಲನ್ನು ಕಂಡಿತು. ಮಂಗಳೂರಲ್ಲಿ ೧೭ ದಿನ ತನ್ನ ಆಡಳಿತವನ್ನು ನಡೆಸಿದ ಯೋಧರ ತಂಡ ಬ್ರಿಟೀಷ್ ಪಡೆಗಳ ತೀವ್ರ ಕಾರ್ಯಾಚರಣೆಗಳ ನಂತರ ಹಿನ್ನೆಡೆ ಕಂಡಿದೆ. ನಂತರದ ಬೆಳವಣಿಗೆಗಳು ವಿಚಾರಣೆಗಳಲ್ಲಿ ಬಂಡಾಯದ ನಾಯಕರು ತೀವ್ರ ಶಿಕ್ಷೆಗೆ ಒಳಪಟ್ಟರು.
ಯುದ್ಧದ ನಾಯಕರಾದ ಲಕ್ಷಪ್ಪ ಬಂಗರಸ ೧೮೩೭ರ ಮೇ ೨೩ಕ್ಕೆ ಉಪ್ಪಿನಂಗಡಿ ಮಂಜ ಮೇ ೩೦ಕ್ಕೆ, ಪುಟ್ಟಬಸಪ್ಪ, (ಕಲ್ಯಾಣಸ್ವಾಮಿ) ಜೂನ್ ೧೪ಕ್ಕೆ ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಗಲ್ಲಿಗೇರಿಸಲ್ಪಟ್ಟರು. ಮತ್ತೊಬ್ಬ ಯೋಧ ಗುಡ್ಡೆ ಮನೆ ಅಪ್ಪಯ್ಯ ಗೌಡರನ್ನು ಮಡಿಕೇರಿ ಕೋಟೆಯೊಳಗೆ ಸಾರ್ವಜನಿಕವಾಗಿ ಅಕ್ಟೋಬರ್ ೩೧ರಂದು ಗಲ್ಲಿಗೆ ಹಾಕಲಾಯಿತು. ಈ ಯುದ್ಧದಲ್ಲಿ ಪಾಲ್ಗೊಂಡವರು ವಿವಿಧ ಶಿಕ್ಷೆಗಳಿಗೆ ಒಳಪಟ್ಟರು. ಕುತ್ತಿಗೆಗೆ ನೇಣು ಬಿಗಿಯಲ್ಪಟ್ಟವರು, ಜೈಲುಗಳೊಳಗೆ ವಿವಿಧ ಅವಧಿಯ ಶಿಕ್ಷೆಗೆ ಒಳಪಟ್ಟವರು, ದೇಶಾಂತರಿಸಲ್ಪಟ್ಟವರ ವಿವರಗಳನ್ನು ಚರಿತ್ರೆಕಾರರು ವಿವರವಾಗಿ ದಾಖಲಿಸಿದ್ದಾರೆ. ಕೆದಂಬಾಡಿ ರಾಮಯ್ಯ ಗೌಡ, ಹುಲಿಕಡಿದ ನಂಜಯ್ಯ, ಹೆಮ್ಮನೆ ಪುಟ್ಟ ಬಸಪ್ಪ, ಬೀರಣ್ಣ ಬಂಟ, ಗುಡ್ಡೆಮನೆ ಅಪ್ಪಯ್ಯ ಗೌಡ, ಕುಡೆಕಲ್ಲು ಪುಟ್ಟ ಗೌಡ, ಕೂಜುಗೋಡು ಕಟ್ಟೆಮನೆ ಅಪ್ಪಯ್ಯ ಗೌಡ-ಮಲ್ಲಪ್ಪ ಗೌಡ ಇನ್ನೀತರ ಕೆಲವರು ಇದರ ಮುಂಚೂಣಿ ನಾಯಕರಾಗಿದ್ದರು.
ಈ ಹೋರಾಟದಲ್ಲಿ ಪ್ರಧಾನವಾಗಿ ನೇತೃತ್ವ ವಹಿಸಿದವರಲ್ಲಿ ಸುಳ್ಯದ ಅರೆಭಾಷಿಕ ಗೌಡರು ಪ್ರಮುಖರಾಗಿದ್ದಾರೆ. ಉಳಿದಂತೆ ಲಿಂಗಾಯತರು, ಬಂಟರು, ಮಲೆಕುಡಿಯರು, ಮುಸಲ್ಮಾನರು ಬ್ರಾಹ್ಮಣರು ಸೇರಿದಂತೆ ಇತರ ವರ್ಗದವರು ಪಾಲ್ಗೊಂಡ ಸಾಮೂಹಿಕ ಹೋರಾಟ ಅದಾಗಿದ್ದು. ಎಲ್ಲಾ ಜಾತಿಗಳು ಒಂದಾಗಿ ಸೇರಿ ನಡೆಸಿದ ಐತಿಹಾಸಿಕ ಯುದ್ಧವಾಗಿತ್ತು.
ಈ ಎಲ್ಲವನ್ನು ಗಮನಿಸಿ ನಾನು ನಿರಂತರವಾಗಿ ಈ ಕುರಿತು ನೆನಪಿನ ಸ್ಮಾರಕಗಳು ನಿರ್ಮಾಣ ಆಗಬೇಕೆಂದು ಪ್ರಯತ್ನಿಸುತ್ತಲೇ ಬಂದೆ. ಅದರ ಮೊದಲ ಹೆಜ್ಜೆಯಾಗಿ ೧೯೯೭ ಆಗಷ್ಟ್ ನಲ್ಲಿ ಸಾರ್ವಜನಿಕ ವಿಚಾರ ಗೋಷ್ಟಿಯನ್ನು ಉಬರಡ್ಕದ ಜನಾರ್ಧನ ಗೌಡರ ಅಧ್ಯಕ್ಷತೆಯಲ್ಲಿ ಸಭೆಯೊಂದನ್ನು ಉಬರಡ್ಕದ ಅಮೈಮಡಿಯಾರು ಶಾಲೆಯಲ್ಲಿ ನಡೆಸಿದೆ. ಸಭೆಯಲ್ಲಿ ದಿ| ಬೋಜಪ್ಪ ಗೌಡ ಮದುವೆಗದ್ದೆ ಕೆದಂಬಾಡಿ ಮನೆತನದ ಹಿರಿಯರಾದ ದಿ| ಕೃಷ್ಣಪ್ಪ ಗೌಡ ಇನ್ನಿತರರು ಭಾಗಿಯಾಗಿದ್ದು ವಿದ್ಯಾಧರ ಕುಡೆಕಲ್ಲು ಮಾಹಿತಿದಾದರಾಗಿ ಆಗಮಿಸಿದ್ದರು. ಬಹಳ ದಿನ ಊರವರು ಅಂದು ಹಾಜರಿದ್ದರು. ಪ್ರಯತ್ನದ ಮತ್ತೊಂದು ಮಜಲು ಎಂಬಂತೆ ೨೦೧೫ ರಲ್ಲಿ ಸುಳ್ಯದಲ್ಲಿ ಸಾರ್ವಜನಿಕ ಸಭೆಯೊಂದನ್ನು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಅಂದಿನ ಸುಳ್ಯ ಶಾಸಕರಾಗಿದ್ದ ಅಂಗಾರರ ಅಧ್ಯಕ್ಷತೆಯಲ್ಲಿ ನಡೆಸಿ ಸ್ಮಾರಕ ನಿರ್ಮಾಣ ಸಮಿತಿಯೊಂದನ್ನು ರಚಿಸಲಾಯಿತು. ಇದಾಗಿ ಐದಾರು ಸಭೆಯ ನಂತರ ಸಭೆಗಳಿಗೆ ಯಾರು ಉತ್ಸಾಹ ತೋರದೆ ಏಕಾಂಗಿಯಾಗಿ ಪ್ರಯತ್ನಗಳ ಮುಂದುವರೆಸಿದೆ. ಅದೇ ಹೊತ್ತಲ್ಲಿ ಮಂಗಳೂರು ಬಾವುಟ ಗುಡ್ಡದ ಹೆಸರು ಬದಲಾಯಿಸುವ ಯತ್ನವೊಂದು ನಡೆದು ದೊಡ್ಡ ಮಟ್ಟದ ವಾದ ವಿವಾದಗಳಿಗೆ ಕಾರಣವಾಯಿತು. ಸುಳ್ಯದಿಂದ ನನ್ನನ್ನು ಮತ್ತು ದಿ| ದೇವಿಪ್ರಸಾದ್ ಸಂಪಾಜೆಯವರನ್ನು ಮಂಗಳೂರು ಜಿಲ್ಲಾ ಕಛೇರಿಯಲ್ಲಿ ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ವಿವಧ ಸಂಘಟನೆಗಳ ಅಹವಾಲು ಸಭೆಗೆ ಸುಳ್ಯದ ಕಲಾವಿದರ ಬರಹಗಾರ ಒಕ್ಕೂಟ ಪರವಾಗಿ ಕಳುಹಿಸಿಕೊಟ್ಟರು. ಆ ಹೊತ್ತಲ್ಲಿ ಸುಳ್ಯದಲ್ಲಿ ಚರಿತ್ರೆಯಲ್ಲಿ ನಡೆದು ಹೋದ ಘಟನೆಯೊಂದರ ಎಲ್ಲರ ಗಮನಕ್ಕೆ ತಂದೆವು ಇದಾದ ಕೆಲ ದಿನಗಳ ನಂತರ ಮಂಗಳೂರಿನ ಒಕ್ಕಲಿಗ ಸಂಘದ ಸದಸ್ಯರ ನೆರವಿನಿಂದ ಮಂಗಳೂರು ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿಯೊಂದನ್ನು ನಡೆಸಿ ಅಮರ ಸುಳ್ಯ ದಂಗೆ ಮತ್ತು ಯುದ್ಧಸ್ಮಾರಕ ನಿಮಾರ್ಣಕ್ಕಾಗಿ ಬೇಡಿಕೆ ಇಟ್ಟೆವು. ಮಾತ್ರವಲ್ಲ ಜಿಲ್ಲಾಧಿಕಾರಿ ಕಛೇರಿ, ನಗರ ಪಾಲಿಕೆ, ಕನ್ನಡ ಸಂಸ್ಕೃತಿ ಇಲಾಖೆಗಳಿಗೆ ಮನವಿ ಮಾಡಿಕೊಂಡ ಪರಿಣಾಮವಾಗಿ ಸರಕಾರ ಬಾವುಟ ಗುಡ್ಡದಲ್ಲಿ ರಾಮಯ್ಯ ಗೌಡರ ಪ್ರತಿಮೆಯೊಂದನ್ನು ಸ್ಥಾಪಿಸಿತು.



ಸುಳ್ಯದಲ್ಲಿ ಯುದ್ಧ ಸ್ಮಾರಕ ನಿರ್ಮಾಣ ಮತ್ತು ಬೆಳ್ಳಾರೆ ಬಂಗ್ಲೆಗುಡ್ಡೆಯಲ್ಲಿ ಥೀಮ್ ಪಾರ್ಕ್ ರಚನೆ ಬಗ್ಗೆ ನಿರಂತರ ಬೇಡಿಕೆಗಳನ್ನು ಮುಂದಿರಿಸುತ್ತಲೇ ಬಂದೆ. ಹಿಂದಿನ ಮಾನ್ಯ ಯಡಿಯೂರಪ್ಪ, ಮಾನ್ಯ ಬೊಮ್ಮಾಯಿ, ಮಾನ್ಯ ಸಿದ್ಧರಾಮಯ್ಯ ಅಂದರೆ ಆಗಿನ ಮುಖ್ಯ ಮಂತ್ರಿಗಳಿಗೆ ಸಂಸ್ಕೃತಿ ಸಚಿವರುಗಳಿಗೆ, ಉಸ್ತುವಾರಿ ಮಂತ್ರಿಗಳಿಗೆ, ಕೊಡಗು -ದ.ಕ ಜಿಲ್ಲಾಧಿಕಾರಿಗಳಿಗೆ ವಿವಿಧ ರಾಜಕೀಯ ಮುಖಂಡರುಗಳಿಗೆ ಪತ್ರಗಳನ್ನು ಬರೆದೆ, ಸ್ಥಳೀಯ ರಾಜಕೀಯ ಪಕ್ಷಗಳ ಮುಂದಾಳುಗಳಿಗೆ ಮನವಿ ಸಲ್ಲಿಸಿದ್ದೆ. ಅವರ ಪ್ರತಿಕ್ರಿಯೆ ಮಾತ್ರ ಶೂನ್ಯ. ಸರಕಾರ ಜಿಲ್ಲಾಧಿಕಾರಿಗಳು, ಸಂಸ್ಕೃತಿ ಇಲಾಖೆಗಳ ಬಂದ ಹಿಂಪತ್ರಗಳು ಮತ್ತು ಹಲವು ದಾಖಲೆಗಳು ನನ್ನಲ್ಲಿ ಇವೆ. ಈ ಬಗ್ಗೆ ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್‌ನಲ್ಲಿ ನಾಲ್ಕು ಜನ ಸಂವಾದ ಕಾರ್‍ಯಕ್ರಮ, ಸುಳ್ಯದಲ್ಲಿ ಮೂರು ಪತ್ರಿಕಾಗೋಷ್ಠಿ ನಡೆಸಿದೆವು. ಇದಲ್ಲದೇ ಸುಳ್ಯದ ವಿವಿಧ ಶಾಲಾ ಕಾಲೇಜುಗಳಲ್ಲಿ ವಿಷಯ ತಜ್ಞರಿಂದ ಉಪನ್ಯಾಸ ಕೂಡಾ ನಡೆಸಲಾಯಿತು.
ಸುಳ್ಯದಲ್ಲಿ ಯುದ್ಧ ಸ್ಮಾರಕ ನಿರ್ಮಾಣಕ್ಕಾಗಿ ಹಲವು ಮನವಿಗಳ ನಂತರ ಹಿಂದಿನ ಸರಕಾರ ೩೦ ಲಕ್ಷ ಅನುದಾನ ನೀಡಿರಬೇಕು. ಆಗಿನ ಸಂಸ್ಕೃತಿ ಸಚಿವರಾಗಿದ್ದ ಮಾನ್ಯ ಸುನಿಲ್ ಕುಮಾರ್ ಅವರಿಗೂ ಪತ್ರ ಬರೆದಿದ್ದೆ ಅವರು ತೆಗೆದುಕೊಂಡ ಕ್ರಮ ಇದಾಗಿರಬಹುದು. ಬಂದಿರುವ ಹಣ ಹಾಗೇಯೇ ಲೋಕೋಪಯೋಗಿ ಇಲಾಖೆಯಲ್ಲಿ ಸ್ಮಾರಕ ನಿರ್ಮಾಣಕ್ಕೆ ಕಂದಾಯ ಇಲಾಖೆ ಸರಿಯಾದ ಜಾಗ ಗುರುತು ಮಾಡದೆ ನೆನೆಗುದಿಗೆ ಬಿದ್ದಿದೆ. ಈ ಬಗ್ಗೆ ಮತ್ತೆ ಪತ್ರಿಕಾ ಗೋಷ್ಟಿ ನಡೆಸಿ ಇಲಾಖೆಗಳ ಗಮನ ಸೆಳೆದಿದ್ದೇನೆ ಪ್ರಯತ್ನ ಸಾಗಿದೆ.
ಒಂದು ಕಾಲದಲ್ಲಿ ಸೂರ್ಯ ಮುಳುಗದ ನಾಡನ್ನೆ ಕಟ್ಟಿದ್ದೇವೆ ಎಂದು ಬೀಗುತ್ತ ಜಗದಾದ್ಯಂತ ಸಾಮ್ರಾಜ್ಯ ಕಟ್ಟಿದ್ದ ಬ್ರಿಟಿಷರನ್ನು ೧೩ ದಿನಗಳ ಕಾಲ ಕತ್ತಲಿಗೆ ತಳ್ಳಿದ ತುಳು ನಾಡಿನ ಅದರಲ್ಲು ಸುಳ್ಯದ ಅಮರ ವೀರರು ಸದಾ ಸ್ಮರಣೀಯರು ಮಾತ್ರವಲ್ಲ ಕೋಮುವಾದ, ಜಾತಿವಾದಗಳ ನೆಲೆಯಲ್ಲಿ ನಲಿಗುತ್ತಿರುವ ಇಂದಿನ ತುಳುನಾಡಿಗೆ ಅಂದಿನ ಜನ ನಡೆಸಿದ ಜಾತಿ ಧರ್ಮಗಳ ಮೀರಿದ ಹೋರಾಟ ಸದಾ ಮಾದರಿಯಾಗಿ ನಿಂತಿದೆ. ಈ ಘಟನೆಯನ್ನು ಸಾಮೂಹಿಕತೆಯ ಪ್ರತಿನಿಧಿಸುವ ಸ್ಮಾರಕವೊಂದು ಸುಳ್ಯ ನಗರದಲ್ಲಿ ಆದಷ್ಟು ಬೇಗ ನಿರ್ಮಾಣವಾಗಲಿ. ಇದೊಂದು ಎಲ್ಲರಿಗೂ ಹತ್ತಿರದಲ್ಲಿದ್ದು, ಅಂದಿನ ಘಟನೆಯ ನೆನಪಿನೊಂದಿಗೆ ವಿವಿಧ ರಾಷ್ಟ್ರೀಯ ಹಬ್ಬಗಳ ಸಂದರ್ಭಗಳಲ್ಲಿ ಸರಕಾರಿ ಇಲಾಖೆಗಳು, ಶಾಲಾ ಕಾಲೇಜುಗಳು, ಸಂಘ ಸಂಸ್ಥೆಗಳಿಗೆ ಯಾವತ್ತು ಲಭ್ಯವಿರುವಂತಾಗಲಿ ಎಂದು ಹಾರೈಸೋಣ.