ಕುಡೆಕಲ್ಲು ಮಹಮ್ಮಾಯಿ ದೇವಸ್ಥಾನದ ಬ್ರಹ್ಮಕಲಶೋತ್ಸವ -ಧಾರ್ಮಿಕ ಸಭೆ

0

ಧಾರ್ಮಿಕ ಶ್ರದ್ಧಾ ಕೇಂದ್ರಗಳ ಜೀರ್ಣೋದ್ಧಾರವಾದರೆ ಪರಿಸರದಲ್ಲಿ ಸ್ವಯಂ ಪರಿವರ್ತನೆಗೆ ಪ್ರೇರಣೆಯಾಗುವುದು : ರವೀಶ್ ತಂತ್ರಿ

ಆಲೆಟ್ಟಿ ಗ್ರಾಮದ ಕುಡೆಕಲ್ಲು ಶ್ರೀ ಮಹಮ್ಮಾಯಿ ದೇವಿ ಹಾಗೂ ಪರಿವಾರ ದೈವಗಳ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಯವರ ಮಾರ್ಗದರ್ಶನದಲ್ಲಿ ಮೇ.28 ಮತ್ತು 29 ರಂದು ಜರುಗಿತು.


ಮೇ.29 ರಂದು ಪ್ರಾತ:ಕಾಲ ಗಣಪತಿ ಹವನವಾಗಿ ಶ್ರೀ ಮಹಮ್ಮಾಯಿ ದೇವಿಯ ಮತ್ತು ಪರಿವಾರ ದೈವಗಳ ಪ್ರತಿಷ್ಠಾ ಕಾರ್ಯ ನಡೆದು ಬ್ರಹ್ಮಕಲಾಶಭಿಷೇಕವಾಯಿತು.


ಬಳಿಕ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎನ್.ಎ.ರಾಮಚಂದ್ರ ರವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆಯು ನಡೆಯಿತು. ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಯವರು ಮಾತನಾಡಿ ” ಧಾರ್ಮಿಕ ಚಿಂತನೆಯ ಅರಿವು ಸಿಗಬೇಕಾದರೆ ಮಕ್ಕಳಿಗೆ ಧರ್ಮ ಬೋಧನೆಯ ಹಾಗೂ ಸಂಸ್ಕಾರ ಆಚಾರ ವಿಚಾರಗಳ ಅರಿವಿನ ಶಿಕ್ಷಣ ನೀಡಬೇಕು. ಸಮುದಾಯದಲ್ಲಿ ಆಂತರಿಕ ಸಮಸ್ಯೆಗಳ ನಿವಾರಣೆಗೆ ಪರಿಸರದಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಜೀರ್ಣೋದ್ಧಾರಗೊಂಡು ದೀಪ ಬೆಳಗಿದರೆ ಪ್ರೇರಣೆಯಾಗುವುದು. ಇದರಿಂದ ವ್ಯಕ್ತಿಯು ಸ್ವಯಂ ಪ್ರೇರಿತರಾಗಿ ಪರಿವರ್ತನೆಯಾಗಲು ಸಾಧ್ಯ.
ಜಾತಿ ಸಮುದಾಯದ ಭೇದ ತೊರೆದು ಏಕ ಮನಸ್ಸಿನಿಂದ ಮಹಮ್ಮಾಯಿ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ಕೈಗೊಂಡಿರುವುದು ಶ್ಲಾಘನೀಯ. ಭಾರತ ದೇಶ ವಿಶ್ವಗುರು ಎಂದೆನಿಸಿಕೊಳ್ಳುವ ಕಾಲ ಸನ್ನಿಹಿತವಾಗಿದೆ. ರಾಜಕೀಯ ನಾಯಕರುಗಳು ಅಧ್ಯಾತ್ಮಿಕ ಚಿಂತನೆ ಯನ್ನಿರಿಸಿಕೊಂಡು ಸಂಸತ್ ಭವನ ಪ್ರವೇಶಿಸಿದರೆ ದೇಶದ ವಾತಾವರಣದ ಚಿತ್ರಣವನ್ನು ಬದಲಾಯಿಸಲು ಸಾಧ್ಯವಿದೆ ಎಂದು ಅವರು ಹೇಳಿದರು.


ಮುಖ್ಯ ಆಭ್ಯಾಗತರಾಗಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ‌ ರವರು ಮಾತನಾಡಿ “ನಂಬಿಕೆ ವಿಶ್ವಾಸವನ್ನಿರಿಸಿಕೊಂಡು ಕೆಲಸ ನಿರ್ವಹಿಸಿದರೆ ಇಂತಹ ಪುಣ್ಯ ಕಾರ್ಯಗಳು ಸುಸೂತ್ರವಾಗಿ ನಡೆಯಬಲ್ಲುದು.
ನನ್ನ ಸಮುದಾಯ ಬಾಂಧವರೊಂದಿಗೆ ಕೈ ಜೋಡಿಸಿ ಬ್ರಹ್ಮಕಲಶೋತ್ಸವ ಕಾರ್ಯ ಯಶಸ್ಸು ಗೊಳಿಸಿರುವುದು ಅಭಿನಂದನೀಯ. ಮಕ್ಕಳಿಗೆ ದಿನ ನಿತ್ಯ ಸಂಸ್ಕಾರದ ಶಿಕ್ಷಣ ಹಾಗೂ ಬದಲಾವಣೆಗೆ ಭಜನೆಯನ್ನು ರೂಢಿಸಿಕೊಳ್ಳುವಂತಾಗಬೇಕು. ಈ ಪರಿಸರದ ಮೂಲ ಭೂತ ಅಭಿವೃದ್ಧಿಗೆ ಪೂರಕವಾಗಿ ಸಹಕಾರ ನೀಡುವ ಬಗ್ಗೆ ಅವರು ಭರವಸೆ ನೀಡಿದರು.
ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಾಸುದೇವ ಗೌಡ ಕುಡೆಕಲ್ಲು, ಕುಡೆಕಲ್ಲು ವಿಷ್ಣುಮೂರ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ವಿಶ್ವನಾಥ ಗೌಡ ಕುಡೆಕಲ್ಲು, ಆಲೆಟ್ಟಿ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ, ಆಲೆಟ್ಟಿ ಪಂಚಾಯತ್ ಸದಸ್ಯೆ ವೀಣಾ ವಸಂತ ಆಲೆಟ್ಟಿ, ಶಿವಾನಂದ ರಂಗತ್ತಮಲೆ, ಆಡಳಿತ ಮೊಕ್ತೇಸರ ಮಲ್ಲೇಶ್ ಕುಡೆಕಲ್ಲು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ
ಶಾಸಕಿಯಾಗಿ ಪ್ರಥಮ ಬಾರಿಗೆ ಆಲೆಟ್ಟಿಗೆ ಭೇಟಿ ನೀಡಿದ ಶಾಸಕಿ ಕು.ಭಾಗೀರಥಿ ಮುರುಳ್ಯ ರವರನ್ನು ಹಾಗೂ ಮಹಮ್ಮಾಯಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ವೈಯುಕ್ತಿಕ ವಾಗಿ ರೂ.2.5 ಲಕ್ಷದಷ್ಟು ವೆಚ್ಚ ಭರಿಸಿದ ಗುತ್ತಿಗೆದಾರ ತೀರ್ಥಕುಮಾರ್ ಕುಂಚಡ್ಕ ರವರನ್ನು ದೇವಸ್ಥಾನದ ಸಮಿತಿಯ ಪರವಾಗಿ ಸನ್ಮಾನಿಸಲಾಯಿತು.


ರೂ.5 ಸಾವಿರಕ್ಕಿಂತ ಹೆಚ್ಚಿನ ದೇಣಿಗೆ ನೀಡಿದ ಎಲ್ಲರನ್ನೂ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕು.ವೈಷ್ಣವಿ ಪ್ರಾರ್ಥಿಸಿದರು. ಪ್ರಾಸ್ತಾವಿಕ ಮಾತಿನೊಂದಿಗೆ ಕೋಶಾಧಿಕಾರಿ ಕೃಪಾಶಂಕರ ತುದಿಯಡ್ಕ ಸ್ವಾಗತಿಸಿದರು. ಕಾರ್ಯದರ್ಶಿ ಕೆ.ರತ್ನಾಕರ ಗೌಡ ಕುಡೆಕಲ್ಲು ವಂದಿಸಿದರು.
ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಆಗಮಿಸಿದ ಸರ್ವರಿಗೂ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.
ಜೀರ್ಣೋದ್ಧಾರ ಸಮಿತಿ ಸದಸ್ಯರು, ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರು, ಆಡಳಿತ ಸಮಿತಿ ಸದಸ್ಯರು ಹಾಗೂ ಕುಡೆಕಲ್ಲು ಮನೆತನದ ಕುಟುಂಬದ ಸದಸ್ಯರು, ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು, ಕುಡೆಕಲ್ಲು ಮಹಮ್ಮಾಯಿ ದೇವಸ್ಥಾನದ ಆಡಳಿತ ಸಮಿತಿ ಮತ್ತು ಮಹಿಳಾ ಸಮಿತಿಯ ಸದಸ್ಯರು ಸ್ವಯಂ ಸೇವಕರಾಗಿ ಸಹಕರಿಸಿದರು.