ಪೈಚಾರು : ನೆರಳು ಚೆಲ್ಲುವ ಬಾದಾಮಿ ಮರವನ್ನು ಬುಡ ಸಮೇತ ಉರುಳಿಸಿದ ಮೆಸ್ಕಾಂ

0

ರೆಂಬೆಗಳನ್ನು ತೆರವುಗೊಳಿಸುವ ಬದಲು ಮರವನ್ನೇ ತೆರವುಗೊಳಿಸಿದ ಮೆಸ್ಕಾಂ ವಿರುದ್ಧ ಸ್ಥಳೀಯರ ಆಕ್ರೋಶ

ಸುಳ್ಯ ಮೆಸ್ಕಾಂ ವತಿಯಿಂದ ಮರದ ಗೆಲ್ಲುಗಳ ತೆರವು ಕಾರ್ಯಚರಣೆ ನಡೆಯುತ್ತಿದ್ದು, ಪೈಚಾರು ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ವಿದ್ಯುತ್ ಕಂಬಗಳ ಕೆಳಭಾಗದಲ್ಲಿದ್ದ ಬಾದಾಮಿ ಮರವನ್ನು ಬುಡ ಸಮೇತ ಕಡಿದು ಹಾಕಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ 7 ವರ್ಷಗಳ ಮೊದಲು ಸ್ಥಳೀಯ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ನೆರಳಿಗಾಗಿ ರಸ್ತೆ ಬದಿಯಲ್ಲಿ ಬಾದಾಮಿ ಗಿಡಗಳನ್ನು ನೆಡಲಾಗಿತ್ತು.ಈ ಗಿಡವು ದೊಡ್ಡದಾಗಿ ಬೆಳೆದಿದ್ದು ಈ ಪರಿಸರದ ಜನತೆಗೆ ವಿಶ್ರಮಿಸಲು ನೆರಳು ನೀಡುತ್ತಿತ್ತು.


ಆದರೆ ಕಳೆದ ಕೆಲವು ತಿಂಗಳ ಹಿಂದೆ ಇದೇ ಮರದ ಬದಿಯಲ್ಲಿ ಮೆಸ್ಕಾಂ ಇಲಾಖೆಯಿಂದ ಎಚ್ ಟಿ ಲೈನ್ ಸಾಗುವ ವಿದ್ಯುತ್ ಕಂಬವನ್ನು ಅಳವಡಿಸಲಾಗಿದ್ದು, ಇದೀಗ ಇಲಾಖೆ ವತಿಯಿಂದ ಮುಂಗಾರು ಪೂರ್ವಸಿದ್ಧತೆ ಕಾರ್ಯದಲ್ಲಿ ಮರದ ರೆಂಬೆಗಳನ್ನು ತೆರೆವು ಗೊಳಿಸುವಲ್ಲಿ ಇಡೀ ಮರವನ್ನೇ ಬುಡ ಸಮೇತ ಕತ್ತರಿಸಿ ಹಾಕಲಾಗಿದೆ.

ಇದನ್ನು ನೋಡಿದ ಸ್ಥಳೀಯರು ಇಲಾಖೆಯ ಸಿಬ್ಬಂದಿಗಳೊಂದಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಡಾ.ಆರ್ ಬಿ ಬಶೀರ್ ರವರು ಕೂಡಲೆ ಮೆಸ್ಕಾಂ ಅಧಿಕಾರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.


ಈ ವೇಳೆ ಸುದ್ದಿಯೊಂದಿಗೆ ಮಾತನಾಡಿರುವ ಬಶೀರ್ ರವರು ಅರಣ್ಯ ಇಲಾಖೆಯವರು, ಮತ್ತು ಬೇರೆ ಬೇರೆ ಅಧಿಕಾರಿಗಳು ಮಳೆಗಾಲ ಬಂದಾಗ ನಾನಾ ರೀತಿಯ ಗಿಡಗಳನ್ನು ತಂದು ಸ್ಥಳೀಯ ಸಂಘ ಸಂಸ್ಥೆಗಳೊಂದಿಗೆ ಸೇರಿ ರಸ್ತೆ ಬದಿಯಲ್ಲಿ ಇನ್ನಿತರ ಜಾಗದಲ್ಲಿ ಗಿಡಗಳನ್ನು ನೆಡುತ್ತಾರೆ. ಆದರೆ ಆ ಗಿಡಗಳು ಬೆಳೆದು ಮರವಾದಾಗ ಬೇರೆ ಇಲಾಖೆಯವರು ಬಂದು ಈ ರೀತಿ ಕಡಿದು ಹಾಕುತ್ತಾರೆ.

ಇದರಿಂದ ಪ್ರಯೋಜನವಾದರೂ ಏನು? ನೆರಳು ಕೊಡುವಂತಹ ಈ ರೀತಿಯ ದೊಡ್ಡ ಮರಗಳನ್ನು ವೈಜ್ಞಾನಿಕವಾಗಿ ರೆಂಬೆಗಳನ್ನು ತೆರೆವುಗೊಳಿಸಿದ್ದಲ್ಲಿ ಗಿಡಗಳನ್ನು ನೆಟ್ಟುದ್ದಕ್ಕೂ ಸಾರ್ಥಕವಾಗುತ್ತದೆ. ರಸ್ತೆಯಲ್ಲಿ ನಡೆದಾಡುವ ಜನತೆಗೆ ಬಿಸಿಲಿನ ಸಂದರ್ಭದಲ್ಲಿ ನೆರಳು ನೀಡಿ ಆಶ್ರಯವಾಗುತ್ತಿದೆ.


ಆದ್ದರಿಂದ ಈ ರೀತಿ ಏಕಾಏಕಿ ಬಂದು ಮರವನ್ನು ಬುಡದಿಂದಲೇ ಕತ್ತರಿಸಿದ್ದು ಸರಿಯಲ್ಲ ಎಂದು ಹೇಳಿದ್ದಾರೆ.