▶️ ಗಾಲಿ ಕುರ್ಚಿಯಲ್ಲೇ ಕೃಷಿ ಕಾಯಕ ಮಾಡುತ್ತಿದ್ದಾರೆ ಈ ಯುವಕ
✍️ ದುರ್ಗಾಕುಮಾರ್ ನಾಯರ್ ಕೆರೆ
ದೈಹಿಕ ನ್ಯೂನ್ಯತೆಗಳನ್ನು ಕಷ್ಟವೆಂದು ಪರಿತಪಿಸುತ್ತಾ ಬಾಳು ನಡೆಸುತ್ತಿರುವವರ ಮಧ್ಯೆ ಇಲ್ಲೋರ್ವ ಯುವಕ ಇದನ್ನೇ ಸವಾಲಾಗಿ ಸ್ವೀಕರಿಸಿ, ಮೆಟ್ಟಿಲಾಗಿಸಿ ಸ್ವಾವಲಂಬಿಯಾಗಿ ಬದುಕು ನಡೆಸುತ್ತಿರುವ ಪಾಸಿಟಿವ್ ಕಥೆಯಿದು.
ಇವರು ಮುರುಳ್ಯ ಗ್ರಾಮದ ನವೀನ್ ಕಳತ್ತಜೆ. ಕಳತ್ತಜೆಯ ದಿ. ವಸಂತ ಗೌಡ ಮತ್ತು ಕಮಲಾ ದಂಪತಿಯ ಐವರು ಪುತ್ರರು ಮತ್ತು ಓರ್ವ ಪುತ್ರಿಯ ಪೈಕಿ ಕಿರಿಯವರು.
ಎಸ್ಎಸ್ಎಲ್ಸಿ ವಿದ್ಯಾಭ್ಯಾಸದ ಬಳಿಕ ಐಟಿಐ ಪೂರೈಸಿ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಮನೆಯಲ್ಲಿದ್ದ ಸಹೋದರಿಗೆ ಮದುವೆಯಾದ ಬಳಿಕ ತಂದೆ ತಾಯಿಯನ್ನು ನೋಡಿಕೊಳ್ಳಲು ಮತ್ತೆ ಊರಿಗೆ ಬಂದರು. ತನ್ನ ಖರ್ಚಿಗೆಂದು ಪಿಕಪ್ ಚಾಲಕನಾಗಿ, ಲಾರಿ ಚಾಲಕನಾಗಿ ಕೆಲಸ ಮಾಡಿದರು. ಜೊತೆಯಲ್ಲಿಯೇ ಮನೆಯಲ್ಲಿ ಕೃಷಿ ಕಾಯಕ ನೋಡಿಕೊಂಡಿದ್ದರು.
ಇದರ ಜೊತೆಗೆ ಸಮೀಪದ ತೋಟಗಳಿಗೆ ಮದ್ದು ಬಿಡುವ ಕೆಲಸಕ್ಕೂ ಹೋಗತೊಡಗಿದರು.
ಅದೊಂದು ದಿನ ಪರಿಸರದ ತೋಟವೊಂದರ ಅಡಿಕೆ ಮರಗಳಿಗೆ ಔಷಧಿ ಬಿಡಲೆಂದು ಮರವೇರಿದ್ದರು. ಈ ಸಂದರ್ಭ ಆಯ ತಪ್ಪಿ ಕೆಳಕ್ಕೆ ಬಿದ್ದು ಬೆನ್ನು ಹುರಿಗೆ ತೀವ್ರ ಏಟಾಯಿತು.
ಅಲ್ಲಿಂದ ನವೀನ್ ಅವರ ಯಾತನಾಮಯ ದಿನಗಳು ಶುರು. ಚಿಕಿತ್ಸೆಗಾಗಿ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಶಸ್ತ್ರ ಚಿಕಿತ್ಸೆಯಾಯಿತು. ಅಲ್ಲಿಂದ ಮನೆಗೆ ಮರಳಿದರಾದರೂ ಎದ್ದು ನಡೆಯುವ ಸ್ಥಿತಿ ಇರಲಿಲ್ಲ. ಸೊಂಟದಿಂದ ಕೆಳಗೆ ಸ್ಪರ್ಶ ಜ್ಞಾನವೇ ಇರಲಿಲ್ಲ. ಮಲಗಿದ್ದಲ್ಲೇ ಬದುಕು. ಮಾನಸಿಕವಾಗಿಯೂ ಖಿನ್ನತೆಯೂ ಉಂಟಾಯಿತು.
ಹೀಗಿರುತ್ತಾ ಬೆಡ್ಸೋರ್ ಬಾಧಿಸಿತು. ಹೀಗಾಗಿ ಮತ್ತೆ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಮೂರು ತಿಂಗಳು ಆಸ್ಪತ್ರೆಯ ಸಹವಾಸ. ಗಾಯ ಗುಣವಾಗುವವರೆಗೆ ಮತ್ತೆ ಚಿಕಿತ್ಸೆ. ಮರಳಿ ಮನೆಗೆ ಬಂದು ಮತ್ತೆ ಹಾಸಿಗೆಯಲ್ಲೇ ಜಗತ್ತು. ಮಲ, ಮೂತ್ರ ಹೋಗುವುದೂ ಗೊತ್ತಾಗುತ್ತಿರಲಿಲ್ಲ.
ಆಸ್ಪತ್ರೆಯ ಚಿಕಿತ್ಸೆಗೆಂದೇ ಹಲವು ಲಕ್ಷ ವ್ಯಯವಾಯಿತು. ಸಹೋದರರು, ಗೆಳೆಯರು, ಊರವರು ಸಹಾಯ ಮಾಡಿದರು.
ಮೂರ್ನಾಲ್ಕು ವರ್ಷ ಹೀಗೇ ಕಳೆಯಿತು. ಮನೆಯಲ್ಲಿ ಸಾಥ್ ಆಗಿದ್ದುದು ವಯೋವೃದ್ಧರಾದ ತಂದೆ ಮತ್ತು ತಾಯಿ ಮಾತ್ರ. ಹೀಗಾಗಿ ವಿವಾಹವಾಗಿ ಬೆಂಗಳೂರಿನಲ್ಲಿದ್ದ ಸಹೋದರಿ ಮನೆಗೆ ಬಂದು ಸಹೋದರನ ಆರೈಕೆ ಮಾಡತೊಡಗಿದರು. ಬೆಂಗಳೂರಿನಲ್ಲಿದ್ದ ಸಹೋದರ ಕೂಡಾ ಊರಿಗೆ ಬಂದರು.
ಈ ಮಧ್ಯೆ ಎಲ್ಲರ ಸಹಕಾರದಿಂದ ಹೊಸ ಮನೆ ನಿರ್ಮಾಣವಾಯಿತು. ಅದಾದ ಬಳಿಕ ಸಹೋದರ ಕರುಣಾಕರ ಅವರ ಸಲಹೆ ಮೇರೆಗೆ ಬೆನ್ನು ಹುರಿಯ ಫಿಸಿಯೋಥೆರಪಿ ಮತ್ತು ಸ್ವಾವಲಂಬಿ ಬದುಕಿನ ಮಾಹಿತಿಗಾಗಿ ಕೊಕ್ಕಡದ ಸೇವಾಧಾಮ ಕೇಂದ್ರಕ್ಕೆ ದಾಖಲಾದರು. ಮೂರು ತಿಂಗಳ ಕಾಲ ಇಲ್ಲಿ ತರಬೇತಿ ಪಡೆದರು.
ಅಲ್ಲಿ ಬೆನ್ನು ಹುರಿಯ ಸಮಸ್ಯೆ ಇರುವವರು ಯಾವ ರೀತಿ ಸ್ವಾವಲಂಬಿಯಾಗಿ ಬದುಕು ನಡೆಸಬಹುದು, ಗಾಲಿ ಕುರ್ಚಿಯನ್ನು ಹೇಗೆ ಬಳಸಬಹುದು ಎಂಬಿತ್ಯಾದಿ ತರಬೇತಿಗಳನ್ನಲ್ಲದೆ, ಜೇನು ಸಾಕಾಣಿಕೆಯಂತಹ ಸ್ವ ಉದ್ಯೋಗವನ್ನೂ ಹೇಗೆ ನಡೆಸಬಹುದು ಎಂಬ ಮಾಹಿತಿಯನ್ನೂ ಪಡೆದರು.
ಅಲ್ಲಿ ಫಿಟ್ ನೆಸ್ ಮತ್ತು ಕೌಶಲ್ಯ ಪಡೆದು ಮನೆಗೆ ಮರಳಿದ ನವೀನ್ ಅವರಲ್ಲಿ ನವೀನ ಬದುಕಿನ ಕನಸುದಿಸಿತು. ಸೇವಾಧಾಮದಿಂದ ದೊರೆತ ಓಡಾಡುವ ಗಾಲಿ ಕುರ್ಚಿಯನ್ನೇ ಸಾಧನೆಯ ಮೆಟ್ಟಿಲಾಗಿಸಿದರು.
ಕೃಷಿ ಕಾಯಕಕ್ಕೆ ಮುಂದಾದರು. ತರಕಾರಿ ಬೆಳೆಸತೊಡಗಿದರು. ವೀಳ್ಯದೆಲೆ ನೆಟ್ಟರು.
ಅಲ್ಲಿಂದೀಚೆಗೆ ತೋಟದ ಬಹುತೇಕ ಕೆಲಸಗಳನ್ನು ನವೀನ್ ಅವರೇ ನಿರ್ವಹಿಸುತ್ತಾರೆ. ತೋಟದಲ್ಲಿ ಹುಲ್ಲು ಕತ್ತರಿಸುವುದು, ಸೊಪ್ಪು ಕತ್ತರಿಸುವುದು, ಬುಡ ಬಿಡಿಸುವುದು, ಸ್ಲರಿ ಹಾಯಿಸುವುದು, ಗೊಬ್ಬರ ಹಾಕಿಸುವುದು ಎಲ್ಲವನ್ನೂ ಅವರೇ ಮಾಡುತ್ತಾರೆ. ತೋಟದ ಮಧ್ಯೆ ಅವರ ಗಾಲಿ ಕುರ್ಚಿ ಸಾಗಲು ತಾತ್ಕಾಲಿಕವಾದ ದಾರಿಯೊಂದನ್ನೂ ನಿರ್ಮಿಸಲಾಗಿದೆ. ಸ್ವಲ್ಪ ದೂರದಲ್ಲೇ ಇರುವ ಮತ್ತೊಂದು ಜಾಗದಲ್ಲೂ 500 ರಷ್ಟು ಅಡಿಕೆ ಗಿಡ ನೆಡಲಾಗಿದ್ದು, ಅಲ್ಲಿಗೂ ರಿಕ್ಷಾದಲ್ಲಿ ತೆರಳಿ ತೋಟದ ಕೆಲಸ, ಬೇಲಿಯ ಕೆಲಸ ಮತ್ತಿತರ ಕೃಷಿ ಕೆಲಸಗಳನ್ನು ನಿರ್ವಹಿಸುತ್ತಾರೆ.
ವೀಳ್ಯ ಕೃಷಿಯ ಜತೆಗೆ ತೊಂಡೆಕಾಯಿ, ಬೆಂಡೆಕಾಯಿ, ಅಲಸಂಡೆ,ಹೀರೇಕಾಯಿ, ಸೌತೆ, ಹರಿವೆ, ಮೆಣಸು ಸೇರಿದಂತೆ ತರಕಾರಿಯನ್ನೂ ಬೆಳೆಸುತ್ತಿದ್ದಾರೆ. ಮನೆಯ ಉಪಯೋಗ ಕಳೆದು ಮಿಕ್ಕಿದ್ದನ್ನು ಇತರರಿಗೆ ನೀಡುತ್ತಾರೆ.
ಕೃಷಿ ಮತ್ತು ತೋಟದ ಕೆಲಸವನ್ನಷ್ಟೇ ಅಲ್ಲ, ಮನೆಯೊಳಗಿನ ಬಹುತೇಕ ಕೆಲಸವನ್ನು ಕೂಡಾ ನವೀನರು ನಿರ್ವಹಿಸುತ್ತಾರೆ. ನೆಲ ಒರೆಸುವುದು, ಗುಡಿಸುವುದು, ಅಕ್ಕಿ ರುಬ್ಬುವುದು, ಅಡುಗೆ ಮಾಡುವುದು ಸಹಿತ ಎಲ್ಲಾ ಕೆಲಸಗಳು ಅವರಿಗೆ ಗೊತ್ತಿದೆ. ಮನೆಯೊಳಗೆ ಹೋಗಿ ಬರಲು ವೀಲ್ ಚೇರ್ ಗೆಂದು ಪ್ರತ್ಯೇಕ ದಾರಿ ನಿರ್ಮಾಣ ಮಾಡಲಾಗಿದೆ.
ಜೇನು ಕೃಷಿ ನವೀನರ ಮತ್ತೊಂದು ಕಾಯಕ. ಕೊಕ್ಕಡದ ಸೇವಾ ಧಾಮದಲ್ಲಿ ಕಲಿತು ಅಲ್ಲಿಂದ ನೀಡಲಾಗಿದ್ದ ಜೇನು ಪೆಟ್ಟಿಗೆಗಳ ಮೂಲಕ ಜೇನು ಕೃಷಿ ನಡೆಸಿದ ಅವರಲ್ಲಿ 14 ಜೇನು ಪೆಟ್ಟಿಗೆಗಳಿವೆ. ವರ್ಷದಲ್ಲಿ 65 ಕೆಜಿಯಷ್ಟು ಜೇನನ್ನು ಉತ್ಪಾದಿಸಿ ಅವರು ಮಾರಾಟ ಮಾಡುತ್ತಾರೆ.
ನವೀನರ ತಂದೆ ಮೂರು ವರ್ಷದ ಹಿಂದಷ್ಟೇ ತೀರಿಕೊಂಡಿದ್ದಾರೆ. ಮನೆಯಲ್ಲಿರುವ ತಾಯಿ ಕಮಲ ಮಗನ ಕೃಷಿ ಕಾರ್ಯಗಳಿಗೆ ಸಹಾಯ ಮಾಡುತ್ತಾರೆ. ವಯೋಸಹಜವಾಗಿ ಅವರ ಒಂದು ಕಣ್ಣಿನ ದೃಷ್ಟಿ ಕ್ಷೀಣವಾಗಿದೆ. ಆದರೂ ನವೀನ್ ಅವರಿಗೆ ತೋಟದಲ್ಲಿ ಹೋಗಲು ಸಾಧ್ಯವಾಗದ ಕಡೆ ಅವರೇ ಕೃಷಿ ಕಾಯಕ ಮಾಡುತ್ತಾರೆ. ಹೈನುಗಾರಿಕೆಯನ್ನೂ ನಡೆಸುತ್ತಾರೆ.
ಮುರುಳ್ಯ ಗ್ರಾಮ ಪಂಚಾಯತ್ ನಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯಾಗಿರುವ ಶ್ರೀಮತಿ ರಂಜಿನಿಯವರು, ನವೀನ್ ಅವರ ಕೃಷಿ ಕಾಯಕ್ಕೆ ಪ್ರೇರೇಪಣೆ ನೀಡುತ್ತಿದ್ದಾರೆ. ಅವರಿಗೆ ವೀಲ್ ಚೆಯರ್ ನೀಡುವಲ್ಲಿಂದ ಅನೇಕ ಎನ್.ಜಿ.ಓ.ಗಳ ಸಂದರ್ಶನದವರೆಗೆ ಅವರು ನವೀನ್ ಮತ್ತು ಕುಟುಂಬದ ಬೆಂಬಲಕ್ಕಿದ್ದಾರೆ. ” ನವೀನ್ ಅವರ ಸ್ವಾವಲಂಬಿ ಬದುಕಿನ ಉತ್ಸಾಹ ಎಲ್ಲರಿಗೂ ಪ್ರೇರಣೆ ” ಎನ್ನುತ್ತಾರೆ ರಂಜಿನಿ.
ಹೀಗೆ ಸ್ವಾವಲಂಬಿ ಬದುಕಿನಲ್ಲಿ ಹೊಸ ಹಾದಿ ಹಿಡಿದಿರುವ ನವೀನ್ ಕಳತ್ತಜೆಯವರ ಬದುಕು ವಿಶೇಷವೂ, ಮಾದರಿಯೂ ಆಗಿದೆ.