ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ ಶ್ರದ್ಧಾಂಜಲಿ ಸಭೆ

0

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸುಳ್ಯ ಘಟಕದಲ್ಲಿ ಸುಮಾರು 24 ವರ್ಷಗಳ ಕಾಲ ಘಟಕಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಜಯಂತ್ ಶೆಟ್ಟಿಯವರು ಜೂ. 27ರಂದು ನಿಧನರಾಗಿದ್ದು, ಅವರಗೆ ಶ್ರದ್ಧಾಂಜಲಿ ಸಭೆಯನ್ನು ಜೂ. 28ರಂದು ಮೇರಿಹಿಲ್‍ನಲ್ಲಿರುವ ಜಿಲ್ಲಾ ಗೃಹರಕ್ಷಕದಳದ ಕಛೇರಿಯಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಮಾದೇಷ್ಠರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಮಾತನಾಡಿ ಜಯಂತ್ ಶೆಟ್ಟಿಯವರು 1999 ರಲ್ಲಿ ಸೇರಿ ಸುಮಾರು 24 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, 2008 ರಲ್ಲಿ ಇವರು ಘಟಕಾಧಿಕಾರಿಯಾಗಿ ಭಡ್ತಿಹೊಂದಿದ್ದರು.

ಇವರಿಗೆ 2012ರಲ್ಲಿ ಮಾನ್ಯ ಮುಖ್ಯ ಮಂತ್ರಿಗಳ ಪದಕ ಲಭಿಸಿರುತ್ತದೆ. ಇವರು ಓರ್ವ ದಕ್ಷ, ಪ್ರಾಮಾಣಿಕ ಘಟಕಾಧಿಕಾರಿಯಾಗಿದ್ದು, ಇವರ ಅವಧಿಯಲ್ಲಿ ಅನೇಕ ಬಂದೋಬಸ್ತ್ ಕರ್ತವ್ಯ, ಚುನಾವಣಾ ಕರ್ತವ್ಯಗಳನ್ನು ಮಾಡಿರುತ್ತಾರೆ, ಗೃಹರಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ದೇವರು ಇವರ ಆತ್ಮಕ್ಕೆ ಶಾಂತಿ ಕರುಣಿಸಲಿ, ಅವರ ಕುಟುಂಬಕ್ಕೆ ಅವರ ಅಗಲುವಿಕೆಯ ನೋವನ್ನು ಮರೆಯುವ ಶಕ್ತಿಯನ್ನು ಆ ದೇವರು ಕರುಣಿಸಲೆಂದು ನಾವೆಲ್ಲರೂ ಪ್ರಾರ್ಥಿಸೋಣ ಎಂದರು. ಉಪಸಮಾದೇಷ್ಟರಾದ ರಮೇಶ್ ಮಾತನಾಡಿ ನನ್ನ ಸೇವಾ ಅವಧಿಯಲ್ಲಿ ಇವರ ಸೇವೆಯನ್ನು ಅನೇಕ ಬಾರಿ ಗುರುತಿಸಿದ್ದು, ಇವರ ಸೇವೆಯು ನಮಗೆಲ್ಲಾ ಮಾದರಿ ಎಂದರು.

ಬಳಿಕ ಅಗಲಿದ ಆತ್ಮಕ್ಕೆ ಶಾಂತಿ ಸಿಗಲೆಂದು ಒಂದು ನಿಮಿಷ ಮೌನ ಪ್ರಾರ್ಥನೆಯನ್ನು ಮಾಡಲಾಯಿತು. ಶ್ರಧ್ದಾಂಜಲಿ ಕಾರ್ಯಕ್ರಮದಲ್ಲಿ ಕಛೇರಿ ಅಧೀಕ್ಷಕಿ ಶ್ರೀಮತಿ ಕವಿತಾ ಕೆ.ಸಿ, ಪ್ರಥಮ ದರ್ಜೆ ಸಹಾಯಕಿ ಅನಿತಾ ಟಿ.ಎಸ್, ಮೀನಾಕ್ಷಿ, ಗೃಹರಕ್ಷಕರಾದ ಕನಕಪ್ಪ, ಪ್ರಸಾದ್, ನಿಖಿಲ್, ವಿಜಯೇಂದ್ರ, ಅರವಿಂದ್, ರಂಜಿತ್, ಸುಲೋಚನಾ, ಜಯಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.