ತಾಲೂಕಿನ 60 ಶಿಕ್ಷಕರಿಗೆ ಸನ್ಮಾನ
ಪ್ರಣವ ಫೌಂಡೇಶನ್ ಬೆಂಗಳೂರು ಇದರ ನೇತೃತ್ವದಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ ಇದರ ಸಹಕಾರದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಸೆ.೩೦ರಂದು ಗುರುವಂದನಾ ಕಾರ್ಯಕ್ರಮ ಸುಳ್ಯದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಸಲಾಗುವುದು. ಸಮಾರಂಭದಲ್ಲಿ ೬೦ ಶಿಕ್ಷಕರನ್ನು ಸನ್ಮಾನಿಸಲಾಗುವುದು ಎಂದು ಪ್ರಣವ ಫೌಂಡೇಶನ್‌ನ ಸ್ಥಾಪಕ ಕಾರ್ಯದರ್ಶಿ ನಾಗರಾಜ್ ಹೆಬ್ಬಾಳ್ ಹಾಗೂ ಸುಳ್ಯದ ಮಹೇಶ್ ರೈ ಮೇನಾಲ ಹೇಳಿದರು.
ಸೆ.೧೮ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹೇಶ್ ರೈ ಮೇನಾಲರು “ಪ್ರಣವ ಫೌಂಡೇಶನ್ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಈ ಬಾರಿ ಶಿಕ್ಷಕರನ್ನು ಗೌರವಿಸುವ ನಿಟ್ಟಿನಲ್ಲಿ ಸುಳ್ಯ ಕ್ಷೇತ್ರದಲ್ಲಿ ಅನುದಾನಿತ, ಅನುದಾನರಹಿತ, ಸರಕಾರಿ ಶಾಲೆ ಸೇರಿ ಒಟ್ಟು ೨೦ ಶಿಕ್ಷಕರನ್ನು, ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ೨೦ ಮಂದಿ ಅಂಗನವಾಡಿ ಕಾರ್ಯಕರ್ತೆಯವರನ್ನು, ೨೦ ಮಂದಿ ವಿಕಲಾಂಗಚೇತನ ಶಿಕ್ಷಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವುದು. ಶಾಸಕಿ ಭಾಗೀರಥಿ ಮುರುಳ್ಯ ಸಹಿತ ಹಲವು ಮಂದಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ೨೦ ಮಂದಿ ಶಿಕ್ಷಕರನ್ನು ಶಿಕ್ಷಣ ಇಲಾಖೆಯವರೇ ಗುರುತಿಸಲಿದ್ದಾರೆ ಎಂದವರು ವಿವರ ನೀಡಿದರು.
ಸ್ಥಾಪಕ ಕಾರ್ಯದರ್ಶಿ ನಾಗರಾಜ್ ಹೆಬ್ಬಾಳ್ ಮಾತನಾಡಿ ಕೊರೊನಾ ಕಾಲದಲ್ಲಿ ಸಂದರ್ಭದಲ್ಲಿ ನಮ್ಮ ಫೌಂಡೇಶನ್ ಆರಂಭವಾಯಿತು. ಅಲ್ಲಿಂದ ನಿರಂತರ ಸಮಾಜಮುಖಿಯಾಗಿ ತೊಡಗಿಸಿಕೊಂಡಿzವೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡುತ್ತಿದ್ದು, ಕೊರೊನಾ ಸಂದರ್ಭದಲ್ಲಿ ಸುಳ್ಯ ಭಾಗದಲ್ಲಿ ಮೆಡಿಸಿನ್ ಕಿಟ್, ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಗಿದೆ. ಆಹಾರ ಕಿಟ್‌ಗಳನ್ನು ವಿತರಿಸಲಾಗಿದೆ. ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿ ಮೆಷಿನ್ ಕೊಡುಗೆಯಾಗಿ ನೀಡಲಾಗಿದ್ದು ಹಲವರು ಇದರ ಪ್ರಯೋಜನ ಪಡೆಯುವಂತಾಗಿದೆ. ಶಾಲೆಗಳಿಗೆ ಲ್ಯಾಪ್ ಟಾಪ್ ಸಹಿತ, ಡಿಜಿಟಲ್ ಶಿಕ್ಷಣಕ್ಕೆ ಬೇಕಾದ ಸೌಲಭ್ಯವನ್ನು ಕೊಡಿಸಲಾಗಿದೆ ಎಂದವರು ವಿವರ ನೀಡಿದರು.
ಆಸ್ಪತ್ರೆ ನಿರ್ಮಾಣ : ಪ್ರಣವ ಸಂಸ್ಥೆಯಿಂದ ಆಸ್ಪತ್ರೆ ನಿರ್ಮಿಸುವ ಯೋಜನೆ ಇದೆ. ಸುಮಾರು ೨೫ ಬೆಡ್‌ನ ಸುಸಜ್ಜಿತ ಆಸ್ಪತ್ರೆ ನಿಂತಿಕಲ್ಲಿನಲ್ಲಿ ನಿರ್ಮಿಸಲು ಯೋಜನೆ ಇದೆ. ಅದಕ್ಕಾಗಿ ಜಾಗ ಗುರುತಿಸಿದ್ದು ಶಾಸಕರ ನೇತೃತ್ವದಲ್ಲಿ ಕೆಲಸ ನಿರ್ವಯಿಸಲು ಚಿಂತನೆ ನಡೆಸಲಾಗಿದೆ ಎಂದು ಮಹೇಶ್ ರೈ ಮೇನಾಲ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಣವ ಫೌಂಡೇಶನ್‌ನ ಟ್ರಸ್ಟಿ ಮಂಜುನಾಥ ಭಟ್ ಇದ್ದರು.