ಬಿದ್ದು ಸಿಕ್ಕಿದ 50 ಸಾವಿರ ರೂ. ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಶಿಕ್ಷಕ ಚಂದ್ರಶೇಖರ ಕೆ.ಎಸ್.

0

ಸುಳ್ಯ ಸರಕಾರಿ ಪದವಿಪೂರ್ವ ಕಾಲೇಜಿನ ಶಿಕ್ಷಕ ಚಂದ್ರಶೇಖರ ಕೆ.ಎಸ್. ರವರು ತನಗೆ ರಸ್ತೆಯಲ್ಲಿ ಬಿದ್ದು ಸಿಕ್ಕಿದ ರೂ.50 ಸಾವಿರವನ್ನು ಅದರ ಮಾಲಕರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.


ಅ.27 ರಂದು ಪುರೋಹಿತ ನಾಗರಾಜ ಭಟ್ ರವರು 50 ಸಾವಿರ ರೂ.ಗಳ ಕಟ್ಟನ್ನು ತನ್ನ ಅಂಗಿ ಕಿಸೆಯಲ್ಲಿರಿಸಿಕೊಂಡು ತಾನು ಸಾಮಾಗ್ರಿ ಖರೀದಿಸುವ ಅಂಗಡಿಗೆ ಕೊಡಲೆಂದು ಬರುತ್ತಿದ್ದರು. ಸುಳ್ಯ ತಾಲೂಕು ಕಚೇರಿಯ ಎದುರುಗಡೆ ಈ ಕಟ್ಟು ಬಿದ್ದು ಹೋಗಿತ್ತು. ಅದು ಅದೇ ದಾರಿಯಲ್ಲಿ ನಡೆದುಕೊಂಡು ಬಂದ ಜೂನಿಯರ್ ಕಾಲೇಜ್ ಶಿಕ್ಷಕ ಚಂದ್ರಶೇಖರ್ ಕೆ.ಎಸ್.ರವರಿಗೆ ದೊರೆಯಿತು. ಈ ವಿಷಯವನ್ನು ಅವರು ತನ್ನ ಪತ್ನಿಗೆ ಫೋನ್ ಮಾಡಿ ತಿಳಿಸಿದಾಗ ಅವರು, ” ಅದನ್ನು ಸುದ್ದಿ ಕಚೇರಿಗೆ ತಲುಪಿಸಿ. ಅವರು ಯಾರದೆಂದು ಪರಿಶೀಲಿಸಿ ಕೊಟ್ಟಾರು” ಎಂದು ಹೇಳಿದರೆನ್ನಲಾಗಿದೆ. ಅದರಂತೆ ಚಂದ್ರಶೇಖರ ಮಾಸ್ಟ್ರು ತನ್ನ ಸಹೋದ್ಯೋಗಿ ಡಾ.ಸುಂದರ ಕೇನಾಜೆಯವರಿಗೆ ವಿಷಯ ತಿಳಿಸಿದಾಗ ಅವರು ಸುದ್ದಿಯವರಿಗೆ ವಿಷಯ ತಿಳಿಸಿದರಲ್ಲದೆ, ಇಬ್ಬರೂ ಸುದ್ದಿ ಕಚೇರಿಗೆ ಬಂದರು. ಬಳಿಕ ‘ ಹಣ ಬಿದ್ದು ಸಿಕ್ಕಿರುವ ಬಗ್ಗೆ ಸುದ್ದಿ ಆನ್ಲೈನ್ ನ್ಯೂಸ್ ನಲ್ಲಿ ಸುದ್ದಿ ಮಾಡಲಾಯಿತು.


ಇತ್ತ 50 ಸಾವಿರ ರೂ. ನಗದು ಕಳೆದುಕೊಂಡಿದ್ದ ಪುರೋಹಿತ ನಾಗರಾಜ ಭಟ್ಟರು ಪೋಲೀಸ್ ಠಾಣೆಗೆ ಹೋಗಿ ವಿಷಯ ತಿಳಿಸಿದ್ದರು. ” ಇಂದು ಹುಡುಕಿ. ಸಿಗದಿದ್ದರೆ ನಾಳೆ ಬಂದು ಲಿಖಿತ ದೂರು ನೀಡಿ ” ಎಂದು ಪೋಲೀಸರು ತಿಳಿಸಿದ್ದರೆನ್ನಲಾಗಿದೆ. ದೊಡ್ಡ ಮೊತ್ತ ಕಳೆದುಕೊಂಡ ಚಿಂತೆಯಲ್ಲಿ ರಾತ್ರಿ ಶಾರದೋತ್ಸವದ ಶಾರದಾಮೂರ್ತಿಯೆದುರು ಕುಳಿತಿದ್ದ ನಾಗರಾಜ ಭಟ್ಟರು ಸುದ್ದಿ ಆನ್ಲೈನ್ ನ್ಯೂಸ್ ನೋಡುತ್ತಿರುವಾಗ ಹಣ ಬಿದ್ದು ಸಿಕ್ಕಿರುವ ಬಗ್ಗೆ ಅದರಲ್ಲಿ ನ್ಯೂಸ್ ಬಂದಿರುವುದನ್ನು ಗಮನಿಸಿ, ಸುದ್ದಿಯವರನ್ನು ಸಂಪರ್ಕಿಸಿ ತನ್ನ ಹಣ ಕಳೆದುಹೋಗಿರುವ ವಿಷಯ ತಿಳಿಸುತ್ತಾರೆ.


ಇಂದು ಬೆಳಿಗ್ಗೆ ಚಂದ್ರಶೇಖರ ಕೆ.ಎಸ್. ಹಾಗೂ ಡಾ.ಸುಂದರ ಕೇನಾಜೆಯವರು ಹಣದೊಂದಿಗೆ ಸುದ್ದಿಕಚೇರಿಗೆ ಬಂದರು. ನಾಗರಾಜ ಭಟ್ ರವರು ಕೂಡ ಬಂದರು. ರಸ್ತೆಯಲ್ಲಿ ಬಿದ್ದು ಸಿಕ್ಕಿದ್ದ ಹಣ ನಾಗರಾಜ ಭಟ್ಟರದೇ ಎಂದು ಖಚಿತಪಡಿಸಿಕೊಂಡು ಆ 50 ಸಾವಿರ ರೂ.ಗಳನ್ನು ಸುದ್ದಿಯ ಹರೀಶ್ ಬಂಟ್ವಾಳ್, ಯಶ್ವಿತ್ ಕಾಳಮ್ಮನೆ ಹಾಗೂ ಕೃಷ್ಣ ಬೆಟ್ಟರವರ ಸಮಕ್ಷಮ ನಾಗರಾಜ ಭಟ್ ರಿಗೆ ಹಸ್ತಾಂತರಿಸಲಾಯಿತು.