ದ.25, 26 ರಂದು ಅದ್ದೂರಿಯ ಕೆ.ವಿ.ಜಿ. ಸುಳ್ಯ ಹಬ್ಬ

0

ಡಾ.ಯು.ಪಿ.ಶಿವಾನಂದ, ಎಸ್.ಎಂ.ಬಾಪೂ ಸಾಹೇಬ್‌ರಿಗೆ ಕೆ.ವಿ.ಜಿ. ಸಾಧನಾಶ್ರೀ ಪ್ರಶಸ್ತಿ

ಐವರು ಯುವ ಸಾಧಕರಿಗೆ ಕೆ.ವಿ.ಜಿ. ಯುವ ಪ್ರಶಸ್ತಿ

ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ದಶಂಬರ 25 ಮತ್ತು 26 ರಂದು ಸುಳ್ಯದಲ್ಲಿ ನಡೆಯಲಿರುವ ಕೆ.ವಿ.ಜಿ. ಸುಳ್ಯ ಹಬ್ಬವನ್ನು ಅದ್ದೂರಿಯಾಗಿ ನಡೆಸಲಾಗುವುದು ಎಂದು ಕೆ.ವಿ.ಜಿ. ಸುಲ್ಯ ಹಬ್ಬ ಸಮಾಜ ಸೇವಾ ಸಮಿತಿಯ ಅಧ್ಯಕ್ಷ ಕೆ.ಟಿ.ವಿಶ್ವನಾಥ್ ತಿಳಿಸಿದ್ದಾರೆ.
ಡಿ.೧೩ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಕಾರ್ಯಕ್ರಮದ ವಿವರ ನೀಡಿದರು.


ದ.೨೫ ರಂದು ಬೆಳಿಗ್ಗೆಯಿಂದ ಕ್ರೀಡಾ ಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಚೆನ್ನಕೇಶವ ದೇವಸ್ಥಾನದ ಮುಂಭಾಗದ ಮೈದಾನದಲ್ಲಿ ಆಯೋಜಿಸಲಾಗಿದೆ. ಈ ಬಾರಿ ವೇದಿಕೆಯನ್ನು ಕೂಡ ಶಾರದಾಂಬಾ ಉತ್ಸವದ ವೇದಿಕೆ ಅಳವಡಿಸುವ ಜಾಗದಲ್ಲೇ ಅಳವಡಿಸಲಾಗುತ್ತಿದೆ. ಸಂಜೆ ಸಭಾ ಕಾರ್ಯಕ್ರಮಕ್ಕೂ ಮೊದಲು ಮನೋರಂಜನಾ ಕಾರ್ಯಕ್ರಮವಾಗಿ ಸ್ಥಳೀಯ ಕಲಾವಿದರಿಂದ ಸಂಗೀತ ರಸಮಂಜರಿ ನಡೆಯುವುದು.


ಸಭಾ ಕಾರ್ಯಕ್ರಮದಲ್ಲಿ ಡಾ.ಕಿಶನ್ ರಾವ್ ಬಾಳಿಲ (ವೈದ್ಯಕೀಯ), ಮಯೂರ್ ಅಂಬೆಕಲ್ಲು (ಸಿನಿಮಾ ರಂಗ), ರಮೇಶ್ ಮೆಟ್ಟಿನಡ್ಕ (ಜನಪದ ಸಾಂಸ್ಕೃತಿಕ), ಹರ್ಷಿತ್ ಪಡ್ರೆ (ಮಾಧ್ಯಮ), ಕು.ಜಸ್ಮಿತಾ ಕೊಡೆಂಕಿರಿ (ಕ್ರೀಡೆ) ಯವರನ್ನು ಕೆ.ವಿ.ಜಿ. ಯುವ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಟಿ. ವಿಶ್ವನಾಥ್ ವಹಿಸಲಿದ್ದಾರೆ. ಮಂಗಳೂರು ವಿವಿ ಉಪಕುಲಪತಿ ಡಾ| ಪಿ.ಎಲ್. ಧರ್ಮ ಅಭಿನಂದನ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ| ಕೆ.ವಿ. ರೇಣುಕಾಪ್ರಸಾದ್ ಭಾಗವಹಿಸಲಿದ್ದಾರೆ. ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್ ಗೌರವ ಉಪಸ್ಥಿತರಿರುವರು.


ಡಿ.೨೬ರಂದು ಬೆಳಿಗ್ಗೆ ಸುಳ್ಯ ಹಬ್ಬ ಸಮಿತಿಯಿಂದ ನೀಡಲಾಗುವ ಒಂದು ಲಕ್ಷ ರೂ. ನೆರವಿನಿಂದ ಮನೆಯನ್ನು ಪೂರ್ಣಗೊಳಿಸಿರುವ ಜಟ್ಟಿಪಳ್ಳದ ಕಮಲರವರ ಮನೆಯ ಉದ್ಘಾಟನೆ ನಡೆಯುವುದು. ಸುಳ್ಯ ಜೂನಿಯರ್ ಕಾಲೇಜ್ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸುಳ್ಯದ ಅನೇಕ ಪ್ರತಿಭೆಗಳಿಗೆ ಬೆಳಗಲು ಅವಕಾಶ ನೀಡಿ ಬೆಳೆಸಿದ ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಮಾಧ್ಯಮ ಸಂಸ್ಥೆಯ ಮುಖ್ಯಸ್ಥರಾದ ಡಾ.ಯು.ಪಿ.ಶಿವಾನಂದರಿಗೆ ಹಾಗೂ ೫೦ ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಕೊಂಡು ಇಂದಿಗೂ ಸಕ್ರಿಯರಾಗಿರುವ ಎಸ್.ಎಂ.ಬಾಪೂ ಸಾಹೇಬರಿಗೆ ಕೆ.ವಿ.ಜಿ. ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಡಾ| ಕೆ.ವಿ.ಚಿದಾನಂದರು ವಹಿಸಲಿದ್ದಾರೆ. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ| ಸಿ.ಸೋಮಶೇಖರ ಸಂಸ್ಮರಣಾ ಭಾಷಣ ಮಾಡಲಿದ್ದಾರೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಗೌರವ ಉಪಸ್ಥಿತರಿರುವರು.


ರಾತ್ರಿ ೮.೩೦ ರಿಂದ ದೇವದಾಸ್ ಕಾಪಿಕಾಡುರವರ ಪುದರ್ ದೀತಿಜಿ ಎಂಬ ತುಳು ನಾಟಕ ಪ್ರದರ್ಶನವಾಗಲಿದೆ ಎಂದು ವಿವರ ನೀಡಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಹರೀಶ್ ಬಂಟ್ವಾಳ್, ನಿಕಟಪೂರ್ವ ಅಧ್ಯಕ್ಷ ಡಾ.ಎನ್.ಎ.ಜ್ಞಾನೇಶ್, ಖಜಾಂಚಿ ಶ್ರೀಮತಿ ಚಂದ್ರಾವತಿ ಬಡ್ಡಡ್ಕ, ಚಂದ್ರಶೇಖರ ಪೇರಾಲು, ಪಿ.ಎಸ್.ಗಂಗಾಧರ್, ಪಿ.ಎಂ.ರಂಗನಾಥ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.