ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಡಾ.ಕೇನಾಜೆ ನಿರ್ದೇಶನದ “ಪುರ್ಸ ಕಟ್ಟುನೆ” ಸಾಕ್ಷ್ಯಚಿತ್ರ ಆಯ್ಕೆ

0

2024ರ ಜನವರಿ 5 ರಿಂದ 9ರ ವರೆಗೆ ಕೇರಳದ ತ್ರಿಶೂರಿನಲ್ಲಿ ನಡೆಯುವ 7ನೇ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಡಾ.ಸುಂದರ ಕೇನಾಜೆ ಚಿತ್ರಕತೆ ಬರೆದು ನಿರ್ದೇಶನ ಮಾಡಿ ಇತ್ತೀಚಿಗೆ ಬಿಡುಗಡೆಗೊಳಿಸಿದ ತುಳು ಸಾಕ್ಷ್ಯಚಿತ್ರ “ಪುರ್ಸ ಕಟ್ಟುನೆ: ಇನಿ-ಕೋಡೆ- ಎಲ್ಲೆ” ಆಯ್ಕೆಯಾಗಿದೆ.


ತುಳು ವಿಕಿಪೀಡಿಯ ಫೌಂಡೇಶನ್ ತಯಾರಿಸಿದ ಈ ಸಾಕ್ಷ್ಯಚಿತ್ರದ ನಿರ್ಮಾಣವನ್ನು ಸುಳ್ಯದವರೇ ಆದ ಭರತೇಶ ಅಲಸಂಡೆಮಜಲು ಹಾಗೂ ಡಾ.ವಿಶ್ವನಾಥ ಬದಿಕಾನ ಮಾಡಿದ್ದರು. ಭಾರತದ ಬೇರೆಬೇರೆ ಭಾಷೆಗಳಿಂದ ಆಯ್ಕೆಯಾದ 70 ಸಾಕ್ಷ್ಯಚಿತ್ರ ಹಾಗೂ ಜಗತ್ತಿನ ಬೇರೆಬೇರೆ ದೇಶಗಳಿಂದ ಆಯ್ಕೆಯಾದ 310 ಚಲನ ಚಿತ್ರಗಳು ಈ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ಅದರಲ್ಲಿ ತುಳು ಭಾಷೆಯ ಜಾನಪದ ವಿಭಾಗದಲ್ಲಿ ಈ ಸಾಕ್ಷ್ಯಚಿತ್ರವನ್ನು ಆಯ್ಕೆ ಮಾಡಲಾಗಿದೆ.
ಪುರ್ಸ ಕಟ್ಟುನ ಸಾಕ್ಷ್ಯಚಿತ್ರ ತುಳುನಾಡಿನ ಅದರಲ್ಲೂ ಮುಖ್ಯವಾಗಿ ಬೆಳ್ತಂಗಡಿ ಭಾಗದಲ್ಲಿ ಪ್ರಚಲಿತವಿರುವ ಪುರ್ಸ ಕುಣಿತ ಹಾಗೂ ಸುಳ್ಯ ತಾಲೂಕಿನ ಕೆಲವು ಕಡೆ ಪ್ರಚಲಿತವಿದ್ದ ಸಿದ್ದವೇಷ ಕುಣಿತಕ್ಕೆ ಸಂಬಂಧಿಸಿದ್ದಾಗಿದೆ. ಒಟ್ಟು 40 ನಿಮಿಷದ ಈ ಸಾಕ್ಷ್ಯಚಿತ್ರ ಕರಾವಳಿಯಲ್ಲಿ ಪ್ರಚಲಿತವಿದ್ದ ತಾಂತ್ರಿಕ ಪಂಥ ಮತ್ತು ಜನಪದ ಕುಣಿತಕ್ಕೆ ಸಂಬಂಧಿಸಿದ್ದಾಗಿದೆ. ಕರಾವಳಿಯ ಘಟನಾವಳಿ ಹಾಗೂ ವಿದ್ವಾಂಸರ ವಿಶ್ಲೇಷಣೆಯೊಂದಿಗೆ ಮೈಸೂರಿನ ಕನ್ನಡಿ ಕ್ರಿಯೇಷನ್ ತಯಾರಿಸಿದ ಈ ಸಾಕ್ಷ್ಯಚಿತ್ರ ಯೂಟ್ಯೂಬ್ ಮತ್ತು ವಿಕಿಮೀಡಿಯ ಮೂಲಕ ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ.