ತನಿಖೆಯಲ್ಲಿ ಪೊಲೀಸರ ಅಲ್ಪ ಪ್ರಗತಿ
ಬ್ಯಾನರ್ ಹರಿದವ ಮಾನಸಿಕ ಅಸ್ವಸ್ಥನೇ?
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆಗೆ ಶುಭ ಕೋರಿ ಸುಳ್ಯ ಬಸ್ ನಿಲ್ದಾಣದ ಬಳಿ ರಿಕ್ಷಾ ಚಾಲಕರು ಅಳವಡಿಸಿದ್ದ ಬ್ಯಾನರನ್ನು ಹರಿದು ಹಾಕಿರುವ ಘಟನೆಗೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಪೋಲೀಸರು ಅಲ್ಪ ಪ್ರಗತಿ ಸಾಧಿಸಿದ್ದಾರೆಂದು ತಿಳಿದುಬಂದಿದೆ. ಓರ್ವ ಮಾನಸಿಕ ಅಸ್ವಸ್ಥನಂತೆ ಕಾಣುವ ವ್ಯಕ್ತಿ ಹರಿದ ಬ್ಯಾನರಿನ ತುಂಡನ್ನು ಹೊದ್ದುಕೊಂಡು ಹೋಗುತ್ತಿರುವ ದೃಶ್ಯ ಸಿ.ಸಿ.ಕ್ಯಾಮರಾದಲ್ಲಿ ಪತ್ತೆಯಾಗಿದೆ.
ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ, ಸುಳ್ಯ ಆಟೋ ರಿಕ್ಷಾ ಸಂಘದ ವತಿಯಿಂದ ಅಳವಡಿಸಿದ್ದ ಬ್ಯಾನರ್ನ ಮಧ್ಯಬಾಗವನ್ನು, ಯಾರೋ ಹರಿದು ತೆಗೆದುಕೊಂಡು ಹೋಗಿರುವ ಬಗ್ಗೆ ಜ. 6ರಂದು ಆಟೊ ರಿಕ್ಷಾ ಸಂಘದ ಅದ್ಯಕ್ಷರು ಸುಳ್ಯ ಪೊಲೀಸರಿಗೆ ದೂರು ನೀಡಿದ್ದರು. ಜ. ೫ರಂದು ರಾತ್ರಿ ಬ್ಯಾನರ್ ಹರಿದ ಘಟನೆ ನಡೆದಿತ್ತು. ಈ ದೂರನ್ನು ದಾಖಲಿಸಿಕೊಂಡು ಕೃತ್ಯವೆಸಗಿದವರ ಪತ್ತೆಗಾಗಿ, ಸುಳ್ಯದಲ್ಲಿರುವ ಸುಮಾರು ೪೦ ಸಿಸಿ ಕ್ಯಾಮರಾಗಳ ಫೂಟೇಜ್ಗಳನ್ನು ಪರಿಶೀಲನೆ ಮಾಡಿದಾಗ, ಜ. 5ರಂದು ಮಧ್ಯರಾತ್ರಿ ಮಾನಸಿಕ ಅಸ್ವಸ್ಥನಂತೆ ಕಂಡುಬರುತ್ತಿರುವ ಅಪರಿಚಿತ ವಯಸ್ಸಾದ ವ್ಯಕ್ತಿಯೋರ್ವ, ಬಸ್ ನಿಲ್ದಾಣದ ಬಳಿ ಹರಿಯಲ್ಪಟ್ಟಿದ್ದ ಬ್ಯಾನರನ್ನು ತನ್ನ ಕೈಯಲ್ಲಿ ಹಿಡಿದುಕೊಂಡು, ಸುಳ್ಯ ಪೇಟೆಯಲ್ಲಿ ಸುತ್ತಾಡಿರುವುದು ತಿಳಿದುಬಂದಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿರುವ ಪೊಲೀಸರು ‘ವಿವೇಕಾನಂದ ಸರ್ಕಲ್ ಬಳಿ ಅದೇ ವ್ಯಕ್ತಿ ಬ್ಯಾನರ್ ಹರಡಿ ಕುಳಿತ ವಿಚಾರ ತನಿಖೆಯಿಂದ ದೃಢಪಟ್ಟಿದ್ದು, ಆ ವ್ಯಕ್ತಿಯ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದೇವೆ. ಅಲ್ಲಿ ಸಿಕ್ಕಿದ ಹರಿದ ಬ್ಯಾನರ್ ತುಂಡನ್ನು ಪರಿಶೀಲಿಸಲಾಗಿ ಅಯೋಧ್ಯೆಯ ಪೋಟೋಗಾಗಲಿ ಹಾಗೂ ಶ್ರೀರಾಮನ ಪೋಟೋಗಾಗಲಿ ಯಾವುದೇ ರೀತಿಯ ಹಾನಿಯಾಗಿರುವುದು ಕಂಡುಬಂದಿರುವುದಿಲ್ಲ. ತನಿಖೆ ಮುಂದುವರಿಯುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಸುಳ್ಯದ ವಿವೇಕಾನಂದ ಸರ್ಕಲ್ ಬಳಿ ಹರಿದ ಬ್ಯಾನರ್ ತುಂಡನ್ನು ಹೊದ್ದುಕೊಂಡು ಬಂದು ರಸ್ತೆಯ ಬದಿಯಲ್ಲಿ ಇಟ್ಟು ಅದರ ಮೇಲೆ ಕುಳಿತು ರಾಮ ಜಪ ಮಾಡಿದ್ದನ್ನು ಸಾರ್ವಜನಿಕರು ನೋಡಿದ್ದಾರೆನ್ನಲಾಗಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜ. ೬ರಂದು ಪೂರ್ವಾಹ್ನ ೧೦ ಗಂಟೆ ಹೊತ್ತಿಗೆ ವಿವೇಕಾನಂದ ಸರ್ಕಲ್ ಬಳಿಯ ಹಾಸ್ಟೆಲ್ನ ಪಕ್ಕದಿಂದ ಮುಖ್ಯ ರಸ್ತೆಗೆ ಬರುವ ಕಾಲುದಾರಿಯ ಮೂಲಕ ಬ್ಯಾನರ್ನ ತುಂಡನ್ನು ಹೊದ್ದುಕೊಂಡು ಬಂದ ವ್ಯಕ್ತಿ ಕಂದಾಯ ನಿರೀಕ್ಷಕರ ಕಚೇರಿಯ ಸಮೀಪದ ರಸ್ತೆಯ ಬದಿಯಲ್ಲಿ ಆ ಬ್ಯಾನರ್ ತುಂಡನ್ನು ಹಾಸಿ ಅದರಲ್ಲಿ ಕುಳಿತು ರಾಮಜಪ ಮಾಡಿ ಮತ್ತೆ ಅಲ್ಲಿಂದ ಎದ್ದು ಬ್ಯಾನರ್ ಅನ್ನು ಅಲ್ಲಿಯೇ ಬಿಟ್ಟು ತಾನು ಬಂದಿದ್ದ ದಾರಿಯಲ್ಲೇ ಹಿಂತಿರುಗಿ ಹೋಗುವುದು ಸಿಸಿ ಕ್ಯಾಮರಾದಲ್ಲಿ ಕಂಡು ಬಂದಿದೆ. ಸಿಸಿ ಕ್ಯಾಮರಾದ ಫೂಟೇಜ್ನಲ್ಲಿ ವ್ಯಕ್ತಿಯ ಚಹರೆ ಅಸ್ಪಷ್ಟವಾಗಿರುವುದರಿಂದ ಆ ವ್ಯಕ್ತಿ ಯಾರೆಂದು ತಿಳಿಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.