ಪಾಂಬಾರು : ಗೂಡಂಗಡಿಯ ಮಹಿಳೆಯ ಸರ ಎಳೆದು ಪರಾರಿಯಾದ ಅಪರಿಚಿತರು

0

ಕೊಳ್ತಿಗೆ ಗ್ರಾಮದ ಪಾಂಬಾರು ಎಂಬಲ್ಲಿ ಗೂಡಂಗಡಿಗೆ ಬಂದ ಅಪರಿಚಿತರು ಗೂಡಂಗಡಿ ನಡೆಸುತ್ತಿದ್ದ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರವನ್ನು ಎಳೆದುಕೊಂಡು ಪರಾರಿಯಾದ ಘಟನೆ ಜ.1 ರಂದು ನಡೆದಿದೆ.

ಈ ಬಗ್ಗೆ ಗೂಡಂಗಡಿ ನಡೆಸುತ್ತಿದ್ದ ಐವರ್ನಾಡಿನ ಜಯಂತಿ ಚಲ್ಲತ್ತಡಿ ಎಂಬವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನಲ್ಲಿ ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಪಾಂಬಾರು ಎಂಬಲ್ಲಿ ನಾನು ಗೂಡಂಗಡಿ ವ್ಯಾಪಾರ ಮಾಡುತ್ತಿದ್ದು ದಿನಾಂಕ 01-01-2024 ರಂದು ಬೆಳಿಗ್ಗೆ ಗೂಡಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದೆ. ಮಧ್ಯಾಹ್ನ 01:00 ಗಂಟೆಯ ವೇಳೆಗೆ ಗೂಡಂಗಡಿ ಎದುರು ಇರುವ ರಸ್ತೆಯಲ್ಲಿ ಸ್ಕೂಟರಿನಲ್ಲಿ ಅಪರಿಚಿತ ಸವಾರ ಮತ್ತು ಸಹಸವಾರರಿಬ್ಬರು ಬಂದಿದ್ದು ಸ್ಕೂಟರನ್ನು ರಸ್ತೆಯಲ್ಲಿಯೇ ಸವಾರ ನಿಲ್ಲಿಸಿದ್ದು ಅದರಲ್ಲಿದ್ದ ಸಹಸವಾರ ಕೆಳಗೆ ಇಳಿದು ಗೂಡಂಗಡಿ ಗೆ ಬಂದು ಗೂಡಂಗಡಿ ಯ ಒಳಗೆ ಇದ್ದ ನನ್ನಲ್ಲಿ ಸೇದಲು ಸಿಗರೇಟು ಕೊಡಿ ಎಂದು ಹೇಳಿ 50 ರೂಪಾಯಿ ಹಣವನ್ನು ನೀಡಿದಾಗ ಸಿಗರೇಟ್ ಪ್ಯಾಕ್ ನೀಡಲು ತಯಾರಿಯಲ್ಲಿರುವಾಗ ಸ್ಕೂಟರ್ ಸಹ ಸವಾರನು ಒಮ್ಮೆಲೆ ಗೂಡಂಗಡಿಯಲ್ಲಿದ್ದ ಡ್ರಾವರ್ ಗೆ ಕೈ ಹಾಕಲು ಪ್ರಯತ್ನಿಸಿದರು.

ತಕ್ಷಣ ಡ್ರಾವರನ್ನು ನಾನು ದೂಡಿದ್ದು ಆ ಸಮಯ ಅಪರಿಚಿತ ವ್ಯಕ್ತಿಯು ನನ್ನ ಕೊರಳಿಗೆ ಕೈ ಹಾಕಿ ಕುತ್ತಿಗೆಯಲ್ಲಿ ಧರಿಸಿದ್ದ ಬಂಗಾರದ ಸರವನ್ನು ಬಲವಂತವಾಗಿ ಎಳೆದುಕೊಂಡು ಓಡಿ ಹೋಗಿರುತ್ತಾರೆ.ಅವರು ಪೆರ್ಲಂಪಾಡಿ ಅಮಲ ಕಡೆಗೆ ಪರಾರಿಯಾಗಿರುರುತ್ತಾರೆ. ಬೊಬ್ಬೆ ಕೇಳಿ ಅಲ್ಲಿಯೇ ಸಮೀಪದ ಮನೆಯಲ್ಲಿ ವಾಸವಿರುವ ತಿಮ್ಮಪ್ಪ ಮತ್ತು ಅದೇ ರಸ್ತೆಯಲ್ಲಿ ಬರುತ್ತಿದ್ದ ಪರಿಚಯದ ಕೀರ್ತನ್ ಎಂಬವರು ಸ್ಥಳಕ್ಕೆ ಬಂದು ವಿಚಾರಿಸಿದರು. ನಡೆದ ಘಟನೆಯನ್ನು ನಾನು ತಿಳಿಸಿದ್ದು ಆಸುಪಾಸಿನ ಜನರು ಬಂಗಾರದ ಸರ ಬಲವಂತವಾಗಿ ಎಳೆದುಕೊಂಡು ಪರಾರಿಯಾದ ಇಬ್ಬರು ವ್ಯಕ್ತಿಗಳ ಕುರಿತು ರಸ್ತೆಯಲ್ಲಿ ಹುಡುಕಾಡಿದಾಗ ಅವರ ಸುಳಿವು ಕಂಡು ಬರಲಿಲ್ಲ.

ಕೊರಳಲ್ಲಿ ಧರಿಸಿದ್ದ ಬಂಗಾರವು ಕನಕ ಸರ ಮಾದರಿಯದ್ದಾಗಿದ್ದು ಸುಮಾರು 16 ಗ್ರಾಂ ತೂಕ ಇದ್ದು ಅದರ ಈಗಿನ ಮೌಲ್ಯ ರೂ 80.000//-ಆಗಬಹುದು ಕೃತ್ಯ ನಡೆಸಲು ಬಂದ ಸ್ಕೂಟರ್ ಬಿಳಿ ಬಣ್ಣವನ್ನು ಹೊಂದಿದ್ದು ಅದರಲ್ಲಿದ್ದ ಸವಾರ ಮತ್ತು ಸಹಸವಾರ ಗುರುತು ಪರಿಚಯ ಇರುವುದಿಲ್ಲ ಹಾಗೂ ಸ್ಕೂಟರಿನ ನೋಂದಣಿ ನಂಬ್ರ ನೋಡಿರುವುದಿಲ್ಲ ಆದುದರಿಂದ ಅಪರಿಚಿತ ವ್ಯಕ್ತಿಗಳನ್ನು ಕೂಡಲೇ ಪತ್ತೆ ಮಾಡಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.