ತನ್ನ ಅಂಗಡಿ ಬಂದ್ ಮಾಡಿ ಪುತ್ತೂರಿಗೆ ತೆರಳಿ ರಕ್ತದಾನ ಮಾಡಿ ಬಂದ ಸುಳ್ಯ ರಕ್ತದಾನಿ ತಂಡದ ಸದಸ್ಯ ಪ್ರಸಾದ್ ಜಯನಗರ

0

ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬರಿಗೆ ರಕ್ತದಾನ ಮಾಡಲು ಸುಳ್ಯದಲ್ಲಿ ವ್ಯಾಪಾರ ಸಂಸ್ಥೆ ನಡೆಸುತ್ತಿದ್ದ ವ್ಯಕ್ತಿಯೋರ್ವರು ತನ್ನ ಅಂಗಡಿಯನ್ನು ಬಂದ್ ಮಾಡಿ ಪುತ್ತೂರಿಗೆ ತೆರಳಿ ರಕ್ತದಾನ ಮಾಡಿ ಬಂದ ಘಟನೆ ಜನವರಿ ೧೯ರಂದು ನಡೆದಿದೆ. ಇದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

ಪುತ್ತೂರು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಯಲ್ಲಿದ್ದ ರೋಗಿಗೆ ಬಿ ನೆಗೆಟಿವ್ ರಕ್ತ ಬೇಕಾಗಿದ್ದು ವ್ಯವಸ್ಥೆ ಮಾಡಿಕೊಡುವಂತೆ ಅವರ ನಿಕಟವರ್ತಿಗಳು ಸುಳ್ಯದ ರಕ್ತದಾನಿ ಪಿ ಬಿ ಸುಧಾಕರ್ ರೈ ಅವರಲ್ಲಿ ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಸುಧಾಕರ ರೈಯವರು ಕೂಡಲೇ ತಮ್ಮ ಗ್ರೂಪಿನಲ್ಲಿ ಬಿ ನೆಗೆಟಿವ್ ರಕ್ತವಿರುವ ಸದಸ್ಯರನ್ನು ಹುಡುಕಿದಾಗ ಜಯನಗರ ನಿವಾಸಿ ಪ್ರಸಾದ್ ರವರಲ್ಲಿ ಇರುವ ಬಗ್ಗೆ ತಿಳಿಯಿತು.


ದೂರವಾಣಿ ಮೂಲಕ ಪ್ರಸಾದ್ ರವರನ್ನು ಸಂಪರ್ಕಿಸಿ, ವಿಷಯ ತಿಳಿಸಿದಾಗ ಕುರುಂಜಿಭಾಗ್‌ನಲ್ಲಿರುವ ತಮ್ಮ ಅಂಗಡಿಯಲ್ಲಿದ್ದ ಪ್ರಸಾದ್‌ರವರು ಅಂಗಡಿಯ ಬಾಗಿಲನ್ನು ಮುಚ್ಚಿ ಸುಧಾಕರ್‌ರವರೊಂದಿಗೆ ಪುತ್ತೂರಿಗೆ ತೆರಳಿ ರೋಗಿಗೆ ತಮ್ಮ ರಕ್ತವನ್ನು ನೀಡಿ ಸುಮಾರು ಮೂರು ಗಂಟೆಯ ಬಳಿಕ ಮತ್ತೆ ಸುಳ್ಯಕ್ಕೆ ಹಿಂತಿರುಗಿ ತಮ್ಮ ಸಂಸ್ಥೆಗೆ ಬಂದು ಮತ್ತೆ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ. ಇವರ ಈ ಮಾನವೀಯತೆಯ ಗುಣ ಇಂದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.


ಇವರು ಇದಕ್ಕೂ ಮೊದಲು ಇದೇ ರೀತಿ ಕೇರಳದಿಂದ ಬಂದು ಸುಳ್ಯದ ರೋಗಿಯೊಬ್ಬರಿಗೆ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದರು ಎಂದು ಕೂಡ ತಿಳಿದು ಬಂದಿದೆ.