ಮಾರ್ಚ್ 9 ರಂದು ಗುತ್ತಿಗಾರು ಬಂಟಮಲೆ ಅಕಾಡೆಮಿ ವತಿಯಿಂದ ಕಲ್ಲೆ ಶಿವೋತ್ತಮ ರಾವ್ ರಿಗೆ ಬಂಟಮಲೆ ಪ್ರಶಸ್ತಿ : ಎ.ಕೆ. ಹಿಮಕರ

0

ಈ ಬಾರಿಯ ಬಂಟಮಲೆ ಪ್ರಶಸ್ತಿಯನ್ನು ಖ್ಯಾತ ಪತ್ರಿಕೋದ್ಯಮಿ ಕಲ್ಲೆ ಶಿವೋತ್ತಮ ರಾವ್ ಅವರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಗುತ್ತಿಗಾರು ಬಂಟಮಲೆ ಅಕಾಡೆಮಿ (ರಿ) ಕಾರ್ಯದರ್ಶಿ ಎ ಕೆ ಹಿಮಕರ ರವರು ಮಾರ್ಚ್ 3.ರಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಆಯ್ಕೆ ಸಮಿತಿಯಲ್ಲಿ ಖ್ಯಾತ ಪತ್ರಕರ್ತ ಮತ್ತು ಸಾಹಿತಿ ಪಾರ್ವತೀಶ ಬಿಳಿದಾಳೆ,ಕೆ ಆರ್ . ತೇಜಕುಮಾರ್ ಬಡ್ಡಡ್ಕ , ಕೆ ಆರ್ ವಿದ್ಯಾಧರ, ಹಾಗೂ ಕಾರ್ಯದರ್ಶಿಯಾದ ನಾನು ಕೂಡ ಇದ್ದು ಈ ಆಯ್ಕೆಯನ್ನು ಮಾಡಿಕೊಂಡಿದ್ದೇವೆ ಎಂದು ಹೇಳಿದರು.

ಸನ್ಮಾನ ಸಮಾರಂಭವು ಮಾರ್ಚ್ 9ರಂದು ಮಂಗಳೂರಿನ ಸಹೋದಯ ಸಭಾಂಗಣದಲ್ಲಿ ಸಂಜೆ 4 ರಿಂದ 6 ಗಂಟೆಯವರೆಗೆ ನಡೆಯಲಿದ್ದು ಶಿಕ್ಷಣ ಸಿದ್ಧಾಂತಿ ಡಾlಎನ್. ಸುಕುಮಾರ ಗೌಡ ಅವರು ಸನ್ಮಾನಿಸಲಿದ್ದಾರೆ ಎಂದು ಅವರು ಹೇಳಿದರು.

ಕಲ್ಲೆ ಶಿವೋತ್ತಮ ರಾವ್ ಅವರು ಕನ್ನಡ ಪತ್ರಿಕೋದ್ಯಮದ ಹಿರಿಯರಲ್ಲಿ ಪ್ರಮುಖರು, ಶ್ರೀ ನಾರಾಯಣ ಕಲ್ಲೆ ಹಾಗೂ ಶ್ರೀಮತಿ ರತ್ನಾವತಿ ದಂಪತಿಯ ಮಗನಾಗಿ 29 ಆಗಸ್ಟ್ 1930ರಂದು ಕಾರ್ಕಳ ಬಳಿಯ ಕಲ್ಯ ಗ್ರಾಮದಲ್ಲಿ ಹುಟ್ಟಿದವರು.ತಂದೆ ನಾರಾಯಣ ಕಲ್ಲೆ ಹಾಗೂ ಅವರ ತಂದೆ ಮೂಡ್ಲಿ ಮಂಜಪ್ಪನವರು ಸಹ ಕನ್ನಡ ಇಂಗ್ಲಿಷ್ ಎರಡು ಭಾಷೆಗಳಲ್ಲಿ ಬರೆದ ಪತ್ರಕರ್ತರು ಹಾಗೂ ಬರಹಗಾರರಾಗಿದ್ದರು. ಕಾರ್ಕಳದ ಪ್ರಸಿದ್ಧ ಬೌಂಟಿ ಮನೆತನದವರಾಗಿದ್ದಾರೆ.

ಈಗ 95ರ ವಯೋಮಾನದ ಶ್ರೀಯುತ ಕಲ್ಲೆ ಶಿವೋತ್ತಮ ರಾಯರು 1950ರ ದಶಕದಿಂದಲೂ ಕನ್ನಡ ಹಾಗೂ ಇಂಗ್ಲೀಷ್ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿ ದುಡಿದಿದ್ದಾರೆ.


ಜಯ ಹಿಂದ್, ರಾಷ್ಟ್ರ ಬಂಧು, ರಾಷ್ಟ್ರಮತ, ವಿಶಾಲ ಕರ್ನಾಟಕ, ಸ್ವರಾಜ್, ಜನಪದ, ಜನಪ್ರಗತಿ ಹಾಗೂ ಪ್ರಜಾವಾಣಿ ಮುಂತಾದ ಪತ್ರಿಕೆಗಳಲ್ಲಿ ಸುಮಾರು 75 ವರ್ಷಗಳಷ್ಟು ಸುದೀರ್ಘ ಅವಧಿಯ ಬರವಣಿಗೆಯ ಬದುಕು ಕಲ್ಲೆ ಶಿವೋತ್ತಮ ರಾಯ್ ರವರದಾಗಿದೆ.


ಜನಪ್ರಗತಿ ವಾರಪತ್ರಿಕೆಯ ಸಂಪಾದಕರಾಗಿ ಕರ್ನಾಟಕದ ಸಾಮಾಜಿಕ ಬದುಕನ್ನು ಬಹಳ ಪರಿಣಾಮಕಾರಿಯಾಗಿ ಪ್ರಭಾವಿಸಿದ ಪತ್ರಕರ್ತ ಎಂಬ ಹೆಗ್ಗಳಿಕೆ ಕಲ್ಲೆ ಅವರದ್ದು. 20ನೇ ಶತಮಾನದ ಆರಂಭ ಕಾಲದಲ್ಲಿ ಕರ್ನಾಟಕದಲ್ಲಿ ಶುರುವಾದ ಸಾಮಾಜಿಕ ಜಾಗೃತಿ, ಬ್ರಾಹ್ಮಣೇತರರ ಹಕ್ಕೊತ್ತಾಯಗಳು, ಬ್ರಿಟಿಷ್ ವಿರೋಧಿ ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ, ಪರಿಶಿಷ್ಟ ಸಮುದಾಯಗಳು- ಹಿಂದುಳಿದ ವರ್ಗಗಳಲ್ಲಿನ ಸಾಮಾಜಿಕ ಮತ್ತು ರಾಜಕೀಯ ಜಾಗೃತಿಯ ಆಶಯಗಳಿಗೆ ಕಲ್ಲೆ ಶಿವೋತ್ತಮ ರಾಯರು ಬಲ ತುಂಬಿದರು. ಪ್ರಗತಿಶೀಲ, ನವ್ಯ, ದಲಿತ, ಬಂಡಾಯ ಸಾಹಿತ್ಯದ ವಿದ್ಯಮಾನಗಳು, ಕನ್ನಡ ಚಳುವಳಿಗಳು, 1970ರ ದಶಕದ ಭೂಸುಧಾರಣೆ, ಸಾಮಾಜಿಕ ನ್ಯಾಯದ ವಿದ್ಯಮಾನಗಳು ಘಟಿಸುವಾಗ ಜನಪ್ರಗತಿ ಪತ್ರಿಕೆ ಹಾಗೂ ಸಂಪಾದಕರಾದ ಕಲ್ಲೆ ಶಿವೋತ್ತಮರಾಯರು ಇದರೊಂದಿಗೆ ಸಹಭಾಗಿಯಾಗಿದ್ದರು. ಕಲ್ಲೆ ಶಿವೋತ್ತಮ ರಾಯರು ಸಂಪಾದಕರಾಗಿದ್ದ ‘ಜನಪ್ರಗತಿ’ ವಾರಪತ್ರಿಕೆಯು ಕರ್ನಾಟಕದ ಜನಜೀವನದೊಂದಿಗೆ, ಬದುಕಿನ ಉದ್ದೇಶಗಳೊಂದಿಗೆ ಸಂವಾದ ನಡೆಸಿತು. ಕನ್ನಡ ಸಮಾಜದೊಂದಿಗೆಸಾವಯವ ಸಂಬಂಧ ಏರ್ಪಡಿಸಿಕೊಂಡಿತು. 1960 ರಿಂದ 1990ರ ಅವಧಿಯ ನಡುವೆ ಜನಪ್ರಗತಿಯು ಕರ್ನಾಟಕದ ಜನಸಾಮಾನ್ಯರ ಪತ್ರಿಕೆಯಾಗಿತ್ತು. ಕಲ್ಲೆ ಶಿವೋತ್ತಮ ರಾಯರು ಧೈರ್ಯಶಾಲಿಗಳು, ಕನಸುಗಾರರು, ಬುದ್ದಿವಂತರು, ಕುಶಾಗ್ರಾಮತೆಯು ಹೌದು, ತುಂಬ ಜೀವನ ನಡೆಸಿ ಈಗಲೂ ಲೌಕಿಕ ವಿದ್ಯಮಾನಗಳ ಬಗ್ಗೆ ಚರ್ಚಿಸುವ ಆಸಕ್ತಿ ಉಳಿಸಿಕೊಂಡಿದ್ದಾರೆ. ಕನ್ನಡ ಪತ್ರಿಕೋದ್ಯಮದಲ್ಲಿ ಬಹುದೊಡ್ಡ ಕೊಡುಗೆ ನೀಡಿರುವ ಕಲ್ಲೆ ಶಿವೋತ್ತಮರಾಯರ ಸಾಧನೆಯನ್ನು ಗುರುತಿಸಿ ಅವರನ್ನು ಸನ್ಮಾನಿಸುತ್ತಿದ್ದೇನೆ ಎಂದು ಹೇಳಿದರು.
ಅಲ್ಲದೆ ಇದೇ ಸಂದರ್ಭದಲ್ಲಿ ಜನಪ್ರಗತಿಯ ಪಂಜು ಎಂಬ ಕೃತಿ ಪುಸ್ತಕವು ಬಿಡುಗಡೆಗೊಳ್ಳಲಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಕೆ ಆರ್.ತೇಜಕುಮಾರ್,ಸದಸ್ಯರುಗಳಾದ ಗೋಪಾಲಕೃಷ್ಣ ಪುರ್ಲುಮಕ್ಕಿ,ಭರತ್ ಕುಮಾರ್ ಐವರ್ನಾಡು,ಸಂಜೀವ ಕುತ್ಪಾಜೆ ಉಪಸ್ಥಿತರಿದ್ದರು.