ಜಯನಗರದಲ್ಲಿ ವಿಶ್ವ ಮಹಿಳಾ ದಿನಾಚರಣೆ

0

ಆಕರ್ಷಕ ಜಾಥಾದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ

ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ರಿ. ಮತ್ತು ಮೈತ್ರಿ ಮಹಿಳಾ ಮಂಡಲ ಜಯನಗರ ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ ಮಾ. ೧೦ ರಂದು ಜಯನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಆಕರ್ಷಕ ಜಾಥಾ ಮೂಲಕ ಚಾಲನೆ ನೀಡಲಾಯಿತು.

ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಒಕ್ಕೂಟದ ಗೌರವಾಧ್ಯಕ್ಷೆ ಶ್ರೀಮತಿ ಹರಣಿ ಸದಾಶಿವ ಡೋಲು ಬಾರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.
ಜಯನಗರ ಮೈತ್ರಿ ಮಹಿಳಾ ಮಂಡಲದ ಕಚೇರಿ ಮುಂಭಾಗದಿಂದ ಜಾಥಾ ಹೊರಟು ಜಯನಗರ ಸರ್ಕಾರಿ ಶಾಲೆಯಲ್ಲಿ ಸಮಾಪನಗೊಂಡಿತು.

ಜಾಥಾದುದ್ದಕ್ಕೂ ಮಹಿಳೆಯರು ಕುಣಿದು ಕುಪ್ಪಳಿಸುತ್ತಾ ಸಮಾರಂಭದ ಸಭಾಂಗಣಕ್ಕೆ ಬಂದು ಸೇರಿದಾಗ ಬಂದ ಮಹಿಳೆಯರನ್ನು ಸಂಘಟಕರು ಕುಂಕುಮ ಹೂವನ್ನು ಮೂಡಿಸಿ ಸ್ವಾಗತಿಸಿದರು. ತಾಲೂಕಿನ ವಿವಿಧ ಕಡೆಗಳಿಂದ ಬಂದ ನೂರಾರು ಮಹಿಳೆಯರು ಭಾಗವಹಿಸಿದ್ದರು.
ಸುಳ್ಯ ಮಹಿಳಾ ಮಂಡಲಗಳ ಒಕ್ಕೂಟ ಅಧ್ಯಕ್ಷೆ ಮಧುಮತಿ ಶೆಟ್ಟಿ ಬೊಳ್ಳೂರು, ಜಯನಗರ ಮೈತ್ರಿ ಮಹಿಳಾ ಮಂಡಲ ಅಧ್ಯಕ್ಷೆ ಶ್ರೀಮತಿ ಶಿಲ್ಪಾ ಸುದೇವ್, ಜಯನಗರ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ವೀಣಾ ಕೆ, ತಾಲೂಕು ಮಹಿಳಾ ಮಂಡಲ ಮಾಜಿ ಅಧ್ಯಕ್ಷರಾದ ಶ್ರೀಮತಿ ಸುಮಾ ಸುಬ್ಬರಾವ್, ನ ಪಂ ಸದಸ್ಯೆ ಶಶಿಕಲಾ ನೀರಬಿದಿರೆ, ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಗೌರವಾಧ್ಯಕ್ಷೆ ಶ್ರೀಮತಿ ತ್ರಿವೇಣಿ ದಾಮ್ಲೆ, ಉಪಾಧ್ಯಕ್ಷೆ ಶ್ರೀಮತಿ ಪುಷ್ಪಾ ಡಿ, ಕಾರ್ಯದರ್ಶಿ ಅಮಿತಾ ಸುತ್ತುಕೋಟೆ, ಕೋಶಾಧಿಕಾರಿ ಚಂದ್ರಾಕ್ಷಿ ಜೆ. ರೈ, ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಸದಸ್ಯರುಗಳು ಮೊದಲಾದವರು ಉಪಸ್ಥಿತರಿದ್ದರು.
ಸಂಜೆಯವರೆಗೆ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದಿರುವ ಸಾಧಕರಿಗೆ ನಮ್ಮೂರ ಸೇವಾ ಪ್ರಶಸ್ತಿ, ಹಾಗೂ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಮಹಿಳೆಯರನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಲಿದೆ.


ತಾಲೂಕಿನ ಮಹಿಳಾ ಮಂಡಲಗಳ ಸ್ಪರ್ಧೆಗಳು, ಜಾನಪದ ನೃತ್ಯ, ಜಾನಪದ ಸಮೂಹ ಗಾನ, ಕಿರು ಪ್ರಹಸನ ಮುಂತಾದ ಕಾರ್ಯಕ್ರಮಗಳು ನಡೆದು ಸಂಜೆ ಕಾರ್ಯಕ್ರಮ ಸಮಾರೋಪ ಸಮಾರಂಭಗೊಳ್ಳಲಿದೆ.