ಜೀರ್ಮುಕ್ಕಿ ಬಳಿ ಕಾರಿನಿಂದ ಬಿದ್ದು ಹೋದ ಚಿನ್ನಾಭರಣ ಮತ್ತು ನಗದು ಹೊಂದಿದ ಬ್ಯಾಗ್

0

ರಸ್ತೆಯಲ್ಲಿ ಬಿದ್ದ ಬ್ಯಾಗನ್ನು ಎತ್ತೊಯ್ಯುತ್ತಿರುವ ಬೈಕ್ ಸವಾರನ ಸಿ ಸಿ ಟಿವಿ ಫೂಟೇಜ್ ಲಭ್ಯ, ಪೊಲೀಸ್ ಠಾಣೆಯಲ್ಲಿ ದೂರು

ಪೈಚಾರ್ ನಿಂದ ಗುತ್ತಿಗಾರಿಗೆ ಕಾರಿನಲ್ಲಿ ತೆರಳುತ್ತಿದ್ದ ಕುಟುಂಬವೊಂದರ ಚಿನ್ನಾಭರಣ ಮತ್ತು ನಗದು ಇದ್ದ ಬ್ಯಾಗ್ ಜೀರ್ಮುಕ್ಕಿ ಬಳಿ ಬಿದ್ದು ಹೋಗಿದ್ದು ಈ ಮಾರ್ಗವಾಗಿ ಬಂದ ಬೈಕು ಸವಾರರೊಬ್ಬರು ಈ ಬ್ಯಾಗನ್ನು ಹೆಕ್ಕಿ ಕೊಂಡೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಿಂದ ಪತ್ತೆಯಾಗಿದ್ದು ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಬ್ಯಾಗು ಕಳೆದುಕೊಂಡವರು ದೂರು ನೀಡಿದ್ದಾರೆ.

ಪೈಚಾರು ನಿವಾಸಿ ಅಜೀಝ್ ಎಂಬವರು ಏಪ್ರಿಲ್ 13ರಂದು ರಾತ್ರಿ ತಮ್ಮ ಮನೆಯವರ ಜತೆ ಕಾರಿನಲ್ಲಿ ಗುತ್ತಿಗಾರಿನ ಸಂಬಂಧಿಕರ ಮನೆಗೆ ಹೋಗುತ್ತಿದ್ದ ಸಂದರ್ಭ ರಾತ್ರಿ ಸುಮಾರು 8:45ಕ್ಕೆ ಜೀರ್ಮುಕ್ಕಿಯಲ್ಲಿ ಅಝೀಜ್ ರವರ ಪತ್ನಿಯ ಮನೆಗೆ ಹೋಗಿದ್ದರು. ಅವರು ಕಾರಿನಿಂದ ಇಳಿಯುವಾಗ ಹಿಂಬದಿ ಸೀಟಿನಲ್ಲಿದ್ದ ಬ್ಯಾಗ್ ಜಾರಿದ್ದು ಬಳಿಕ ಇವರು ಬಂದು ಕಾರು ಹತ್ತಿದಾಗ ಕಾರಿನ ಡೋರಿಗೆ ಸಿಲುಕಿ ಸುಮಾರು ದೂರ ರಸ್ತೆಯಲ್ಲಿ ಎಳೆದುಕೊಂಡು ಹೋಗಿ ಅದು ರಸ್ತೆಗೆ ಬಿದ್ದಿದೆ ಎನ್ನಲಾಗಿದೆ.
ಸ್ವಲ್ಪ ದೂರ ಹೋದ ಅಜೀಝ್ ರವರು ಕಾರಿನ ಸೀಟಿನಲ್ಲಿ ಇಟ್ಟಿದ್ದ ಬ್ಯಾಗು ಕಾಣದೇ ಇದ್ದಾಗ ಕೂಡಲೆ ಕಾರನ್ನು ತಿರುಗಿಸಿ ಮರಳಿ ಬಂದು ಹುಡುಕಾಡಿದಾಗ ಎಲ್ಲಿಯೂ ಲಭ್ಯವಾಗಿಲ್ಲ. ಬಳಿಕ ಸಮೀಪದ ಮನೆಯ ಸಿ ಸಿ ಟಿವಿ ಯಲ್ಲಿ ಪರಿಶೀಲಿಸಿದಾಗ ರಸ್ತೆಯಲ್ಲಿ ಬಿದ್ದಿರುವ ಬ್ಯಾಗನ್ನು ಅದೇ ರಸ್ತೆಯಲ್ಲಿ ಬಂದ ದ್ವಿಚಕ್ರ ಸವಾರರೊಬ್ಬರು ಹೆಕ್ಕಿ ಕೊಂಡೊಯ್ಯುತ್ತಿರುವ ದೃಶ್ಯ ಕಂಡು ಬಂದಿದ್ದು ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅಜೀಜ್ ದೂರು ನೀಡಿದ್ದಾರೆ. ಬ್ಯಾಗಿನಲ್ಲಿ ಸುಮಾರು ನಾಲ್ಕು ಪವನ್ ಚಿನ್ನಾಭರಣ ಹಾಗೂ ಒಂಬತ್ತು ಸಾವಿರ ರೂಪಾಯಿ ನಗದು ಇದ್ದು
ಬ್ಯಾಗು ಲಭಿಸಿದವರು ಸುಳ್ಯ ಪೊಲೀಸ್ ಠಾಣೆಗೆ ತಂದು ನೀಡಿದಲ್ಲಿ ಸೂಕ್ತ ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ.