ಕೆವಿಜಿ ಐಪಿಎಸ್ ನಲ್ಲಿ ಆಶೀಶ್ ಖಂಡಿಗರವರಿಗೆ ಸನ್ಮಾನ

0

ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಆಶೀಶ್ ಖಂಡಿಗರವರಿಗೆ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಜು. 27 ರಂದು ಸನ್ಮಾನಿಸಲಾಯಿತು.ಆಶೀಶ್ ಖಂಡಿಗರವರು ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದು, ಬೆಂಗಳೂರು ಮಲ್ಲೇಶ್ವರಂ ನಲ್ಲಿರುವ ಎನ್. ಸಿ. ಎಸ್ ರಾಘವನ್ ಚಾರ್ಟರ್ಡ್ ಅಕೌಂಟೆಂಟ್ ಕಂಪನಿಯಲ್ಲಿ ಮೂರು ವರ್ಷಗಳ ತರಬೇತಿ ಮುಗಿಸಿ ಮೇ 2024ರಲ್ಲಿ ನಡೆದ ಅಖಿಲ ಭಾರತ ಮಟ್ಟದ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಇವರ ಸಾಧನೆಯನ್ನು ಗುರುತಿಸಿ ಶಾಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ಇವರನ್ನು ಅಭಿನಂದಿಸಿ ‘ ನಮ್ಮ ಶಾಲೆಯ ವಿದ್ಯಾರ್ಥಿಗಳ ಸಾಧನೆ ಅಮೋಘವಾದುದು. ಮಕ್ಕಳಿಗೆ ಶಾಲಾ ಬುನಾದಿ ಸರಿಯಾಗಿದ್ದರೆ ಉತ್ತಮ ಸಾಧನೆ ಮಾಡಲು ಸಾಧ್ಯ. ಶಿಕ್ಷಕರ ಶ್ರಮ ನಮ್ಮೆಲ್ಲರ ಶಕ್ತಿ. ನಾವೆಲ್ಲರೂ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿ ನಮ್ಮ ಗುರಿ ತಲುಪಬೇಕೆಂದು ‘ ತಿಳಿಸಿದರು.

ಬಳಿಕ ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್, ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ, ಅಮರ ಜ್ಯೋತಿ ಪಿಯು ಕಾಲೇಜಿನ ಪ್ರಾಂಶುಪಾಲೆ ಯಶೋಧ ರಾಮಚಂದ್ರ ಆಶೀಶ್ ರವರಿಗೆ ಸ್ಮರಣಿಕೆಯನ್ನಿತ್ತು ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆಶೀಶ್ ಖಂಡಿಗರವರು ಅವಿರತ ಪ್ರಯತ್ನ ಇದ್ದರೆ ನಾವು ಗುರಿಯನ್ನು ತಲುಪಬಹುದು. ನಾನು ಈ ಹಂತಕ್ಕೆ ತಲುಪಲು ನಮ್ಮ ಶಾಲೆಯ ಆಡಳಿತ ಮಂಡಳಿ ಜೊತೆಗೆ ಎಲ್ಲಾ ಶಿಕ್ಷಕರು ಉತ್ತಮ ಸಹಕಾರ ನೀಡಿದ್ದಾರೆ ಎಂದು ಹೇಳಿ ಅವರೆಲ್ಲರಿಗೂ ಧನ್ಯವಾದವನ್ನು ತಿಳಿಸಿದರು. ಕಾರ್ಯಕ್ರಮವನ್ನು 9ನೇ ತರಗತಿಯ ಮನ್ವಿತಾ ರವರು ನಿರೂಪಿಸಿ, ಹತ್ತನೇ ತರಗತಿಯ ಧನ್ವಿ ವಂದಿಸಿದರು. ಅನೀಶ್ ಅತಿಥಿಗಳನ್ನು ಪರಿಚಯಿಸಿದನು.
ಕಾರ್ಯಕ್ರಮದಲ್ಲಿ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.