ಹಾನಿಗೊಂಡ ಮಾಲೆಂಗಿರಿ ಸೇತುವೆ : ಎಡಮಂಗಲ ಸಂಪರ್ಕ ರಸ್ತೆ ಬಂದ್

0

ವಾಹನ ಸಂಚಾರವಿಲ್ಲದೆ ಪರದಾಡಿದ ಸಾರ್ವಜನಿಕರು, ವಿದ್ಯಾರ್ಥಿಗಳು

ಆ. 13ರಂದು ಸುರಿದ ರಣಭೀಕರ ಮಳೆಗೆ ಎಡಮಂಗಲದ ಮುಖ್ಯರಸ್ತೆಯಲ್ಲಿರುವ ಮಾಲೆಂಗಿರಿ ಸೇತುವೆಯ ಅಡಿಭಾಗ ಜರಿದಿರುವುದರಿಂದ ಸೇತುವೆ ಮುರಿದುಬೀಳುವ ಹಂತಕ್ಕೆ ತಲುಪಿದ್ದು, ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಈ ರಸ್ತೆಯಲ್ಲಿ ವಾಹನ ಸಂಚರಿಸದಂತೆ ರಸ್ತೆ ಬಂದ್ ಮಾಡಿದ್ದಾರೆ. ಇದರಿಂದಾಗಿ ಬಸ್ ಮತ್ತಿತರ ವಾಹನ ಸಂಚಾರ ಸಂಚರಿಸಲಾಗದೆ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ನಿಂತಿಕಲ್ಲಿನಿಂದ ಅಲೆಕ್ಕಾಡಿಯಾಗಿ ಎಡಮಂಗಲ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿರುವ ಮಾಲೆಂಗಿರಿ ಸೇತುವೆಗೆ ಈ ಮೊದಲೇ ಎರಡೂ ಬದಿಗಳಲ್ಲಿ ತಡೆಗೋಡೆ ಇರಲಿಲ್ಲ. ನಿನ್ನೆ ಸುರಿದ ಮಳೆಯ ಭೀಕರತೆಗೆ ಅಡಿಭಾಗದ ಕಲ್ಲು ಮಣ್ಣು ಕೊಚ್ಚಿಕೊಂಡು ಹೋಗಿ ಸಮೀಪದ ತೋಟದಲ್ಲಿ ರಾಶಿ ಬಿದ್ದಿದೆ. ಆ. 14 ರಂದು ಬೆಳಿಗ್ಗೆ ಎಡಮಂಗಲ ಹಾಲು ಸೊಸೈಟಿಗೆ ಹಾಲು ತರುವವರು ಕಲ್ಲಿನ ರಾಶಿಯನ್ನು ಗಮನಿಸಿ ಸೇತುವೆಯ ಅಡಿಭಾಗವನ್ನು ವೀಕ್ಷಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಪಂಚಾಯತ್ ನವರು ಲೋಕೋಪಯೋಗಿ ಇಲಾಖೆಗೆ ತಿಳಿಸಿದ ಮೇರೆಗೆ ಅಧಿಕಾರಿಗಳು ಬಂದು ಪರಿಶೀಲಿಸಿ ಸೇತುವೆ ಮೇಲೆ ವಾಹನ ಸಂಚರಿಸುವುದು ಅಪಾಯಕಾರಿಯಾದುದರಿಂದ ರಸ್ತೆಯಲ್ಲಿ ವಾಹನ ಸಂಚರಿಸದಂತೆ ಎರಡೂ ದಿಕ್ಕುಗಳಲ್ಲೂ ಕಲ್ಲು ಕಟ್ಟಿ ತಡೆಗೋಡೆ ನಿರ್ಮಿಸಿದರು. ಇದರಿಂದಾಗಿ ಎಡಮಂಗಲಕ್ಕೆ ಬರುವ ಮತ್ತು ಹೋಗುವ 5 ಸರಕಾರಿ ಬಸ್ಸುಗಳು ಸ್ಥಗಿತಗೊಂಡಿದ್ದು ವಿದ್ಯಾರ್ಥಿಗಳು, ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನಿಂತಿಕಲ್ಲು ಆಲೆಕ್ಕಾಡಿ ಕಡೆಯಿಂದ ಎಡಮಂಗಲ ಕಡೆಗೆ ಹೋಗಲು ಪರ್ಯಾಯ ರಸ್ತೆಯಾಗಿ ಕಲ್ಲೆಂಬಿ – ಎಡಮಂಗಲ ರಸ್ತೆಯಿದ್ದರೂ ಆ ರಸ್ತೆ ಕೆಟ್ಟು ಹೋಗಿದ್ದು ಸಂಚರಿಸಲು ಅಸಾಧ್ಯವಾಗಿದೆ. ಪ್ರಸ್ತುತ ಕಾಣಿಯೂರು ಚಾರ್ವಾಕ ಮೂಲಕ ಅಥವಾ ಪುಲಿಕುಕ್ಕು ಮೂಲಕ ಎಡಮಂಗಲಕ್ಕೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಯವರು ಜನಪ್ರತಿನಿಧಿಗಳು ಈ ಕಡೆ ಗಮನಹರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ.

ಪಂಚಾಯತ್ ಅಧ್ಯಕ್ಷ ರಾಮಣ್ಣ ಜಾಲ್ತಾರುರವರಲ್ಲಿ ವಿಚಾರಿಸಿದಾಗ ” ಸೇತುವೆಯ ಕೆಳಗೆ ಮತ್ತು ಎರಡೂ ಬದಿಗಳಲ್ಲಿ ತಡೆಗೋಡೆ ಇಲ್ಲದಿರುವುದರಿಂದ ತಡೆಗೋಡೆ ನಿರ್ಮಿಸಬೇಕೆಂದು ಈ ಮೊದಲೇ ನಾವು ಡಿ.ಸಿ.ಯವರಿಗೆ ಮತ್ತು ಸಂಬಂಧಿಸಿದ ಇಲಾಖೆಗೆ ಮನವಿ ನೀಡಿದ್ದೆವು. ಆದರೆ ಇಲಾಖೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈಗಲೂ ವೈಜ್ಞಾನಿಕ ತಂತ್ರಜ್ಞಾನವನ್ನು ಬಳಕೆ ಮಾಡಿ ತಾತ್ಕಾಲಿಕ ಸಂಪರ್ಕಕ್ಕೆ ವ್ಯವಸ್ಥೆ ಮಾಡುವ ಬಗ್ಗೆ ಇಲಾಖೆಯವರು ಕ್ರಮ ಕೈಗೊಳ್ಳಲಿ” ಎಂದು ತಿಳಿಸಿದ್ದಾರೆ. ಸಾರ್ವಜನಿಕರು ವಿದ್ಯಾರ್ಥಿಗಳು ಬಸ್ ಸಂಚಾರವಿಲ್ಲದೆ ದಿನನಿತ್ಯದ ಚಟುವಟಿಕೆಗಳನ್ನು ನಡೆಸುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ.