ಮರ್ಕಂಜ ರಸ್ತೆಯ ದೊಡ್ಡತೋಟದಲ್ಲಿ ರಸ್ತೆ ಬದಿ ಜೀವಾಪಾಯಕ್ಕೆ ಆಹ್ವಾನಿಸುತ್ತಿದ್ದ ಭಾರೀ ಗಾತ್ರದ ಹೊಂಡ

0

ರೆಂಜಾಳ ಶಾಸ್ತಾವು ಯುವಕ ಮಂಡಲದಿಂದ ಮಣ್ಣು ಹಾಕಿ ತಾತ್ಕಾಲಿಕ ದುರಸ್ಥಿ

ಮುಂಜಾನೆ ಮಾಡಿದ ಯುವಕ ಮಂಡಲದ ಕಾರ್ಯಕ್ಕೆ ಸಾರ್ವಜನಿಕರ‌ ಶ್ಲಾಘನೆ

ದೊಡ್ಡತೋಟ ಮರ್ಕಂಜ ರಸ್ತೆಯ ದೊಡ್ಡತೋಟದಲ್ಲಿ ರಸ್ತೆ ಬದಿ ನಿರ್ಮಾಣವಾದ ದೊಡ್ಡ ದೊಡ್ಡ ಹೊಂಡಗಳಿಗೆ ಶಾಸ್ತಾವು ಯುವಕ ಮಂಡಲದ ಸದಸ್ಯರು ಮಣ್ಣು ಹಾಕಿ ಗುಂಡಿ‌ ಮುಚ್ಚಿ ಅಪಘಾತವಾಗುವ ಸಾಂಭವ್ಯ ಅಪಾಯ ತಡೆಗಟ್ಟಿ ಜನರ ಮೆಚ್ಚುಗೆಗೆ ಪಾತ್ರವಾದ ಘಟನೆ ನಡೆದಿದೆ.

ದೊಡ್ಡತೋಟದಿಂದ ಮರ್ಕಂಜ ಕ್ಕೆ ಹೋಗುವ ರಸ್ತೆಯ ದೊಡ್ಡತೋಟದ ತಿರುವಿನಲ್ಲಿ ಕೆಲ ವರ್ಷದ ಹಿಂದೆ ರಸ್ತೆ ಬದಿಯ ಚರಂಡಿಗೆ ಮಣ್ಣು ಬಿದ್ದು, ಮಣ್ಣು ತೆರವು ಮಾಡದೇ ಚರಂಡಿ‌ ಬ್ಲಾಕ್ ಆಗಿತ್ತು. ಪರಿಣಾಮ ಮಳೆ ನೀರು ರಸ್ತೆಯಲ್ಲಿಯೇ ಹರಿಯುತ್ತಿತ್ತು.‌ ಈ ಬಗ್ಗೆ ಮಾಧ್ಯಮದಲ್ಲಿ ವರದಿ ಪ್ರಕಟಗೊ‌ಂಡಿದ್ದರೂ ಲೋಕೋಪಯೋಗಿ ಇಲಾಖೆ ಮಾತ್ರ ಎಚ್ಚೆತ್ತುಕೊಳ್ಳಲೇ ಇಲ್ಲ. ಆದರೆ ಈ ಮಳೆಗಾಲದಲ್ಲಿ ಸುಮಾರು 100 ಮೀಟರ್ ದೂರ ರಸ್ತೆಯ ಎರಡು ಬದಿ ಭಾರೀ ಗಾತ್ರದ ಹೊಂಡ ನಿರ್ಮಾಣವಾಗತೊಡಗಿತು. ಇದರಿಂದಾಗಿ ವಾಹನ ಸವಾರರು ಜೀವಾಪಾಯದಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಯಿತು.‌

ವಿರುದ್ಧ ದಿಕ್ಕಿನಿಂದ‌ ಬಂದ ವಾಹನಗಳಿಗೆ ಸೈಡ್ ಕೊಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಯಿತು. ಈ ಬಗ್ಗೆ‌ ಸಾರ್ವಜನಿಕರು ಇಲಾಖೆಗೆಗಳಿಗೆ ಮನವಿ ಮಾಡಿಕೊಂಡರೂ, ಗ್ರಾಮಸಭೆಗಳಲ್ಲಿ ಪ್ರಾಸ್ತಾಪಿಸಿದರೂ ಪ್ರಯೋಜನವಾಗಿರಲಿಲ್ಲ.‌ ಇದರಿಂದಾಗಿ ಶಾಸ್ತಾವು ಯುವಕ ಮಂಡಲದ ಸದಸ್ಯರಲ್ಲಿ ಸಾರ್ವಜನಿಕರು ರಸ್ತೆಯ ಬದಿ ಮಣ್ಣು ಹಾಕಿ ತಾತ್ಕಾಲಿಕ ದುರಸ್ತಿ ಪಡಿಸುವಂತೆ ವಿನಂತಿಸಿಕೊಂಡಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ರೆಂಜಾಳ ಶಾಸ್ತಾವು ಯುವಕ ಮಂಡಲದ ಸದಸ್ಯರು‌ ನಿನ್ನೆ(ಆ.19) ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯ‌ ಮಧ್ಯೆ ದೊಡ್ಡತೋಟಕ್ಕೆ ಬಂದು ಪಿಕಪ್ ವಾಹನದಲ್ಲಿ ಕಲ್ಲು ತಂದು ಹೊಂಡಕ್ಕೆ‌ ಹಾಕಿ ಮಣ್ಣು ತುಂಬಿಸಿ ತಾತ್ಕಾಲಿಕ ದುರಸ್ಥಿ ಮಾಡಿದ್ದಾರೆ.‌

ಜೀವಾಪಾಯ ಎದುರಿಸುತ್ತಿದ್ದ ಹೊಂಡವನ್ನು ತಾತ್ಕಲಿಕ ದುರಸ್ತಿ ಗೊಳಿಸಿದ ಶಾಸ್ತಾವು ಯುವಕ ಮಂಡಲದ ಶ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.