ಕುಂಡಡ್ಕ : ರಕ್ಷಾಬಂಧನ ಆಚರಣೆ

0

ರಕ್ಷಾಬಂಧನ ರಾಷ್ಟ್ರೀಯತೆಯ ಭಾವ ಜಾಗೃತಿಗೊಳಿಸುವ ಆಚರಣೆ : ರಾಮಚಂದ್ರ ಕೋಡಿಬೈಲು

ರಾಷ್ಟ್ರೀಯತೆಯ ಭಾವ ಇರುವವರು ಎಂದಿಗೂ ದೇಶ ವಿರೋಧಿ ಕೆಲಸ ಮಾಡಲು ಸಾಧ್ಯವೇ ಇಲ್ಲ. ಏಕೆಂದರೆ ಅವರು ಸದಾ ಈ ನೆಲವನ್ನು ಅಪ್ಪಿಕೊಂಡು, ಒಪ್ಪಿಕೊಂಡು ಬದುಕುತ್ತಾರೆ. ಇಂತಹ ರಾಷ್ಟ್ರೀಯತೆ, ದೇಶಪ್ರೇಮವನ್ನು ಪ್ರತಿ ಮನೆ, ಮನಗಳಲ್ಲಿ ಜಾಗೃತಿಗೊಳಿಸುವಲ್ಲಿ ರಕ್ಷಾಬಂಧನ ಆಚರಣೆಯು ಸಹಕಾರಿ ಎಂದು ಪ್ರಗತಿಪರ ಕೃಷಿಕ ರಾಮಚಂದ್ರ ಕೋಡಿಬೈಲು ಹೇಳಿದರು.

ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ನೇಸರ ಯುವಕ ಮಂಡಲದ ಆಶ್ರಯದಲ್ಲಿ ಸೋಮವಾರ ಕುಂಡಡ್ಕದ ಚಾಮುಂಡಿಮೂಲೆಯ ಸಾವಿತ್ರಿ ಅವರ ನಿವಾಸದಲ್ಲಿ ನಡೆದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಧರ್ಮ, ಜಾತಿ, ಮತ, ಪಕ್ಷ ಬದಿಗಿರಿಸಿ ಈ ದೇಶವನ್ನು ಪ್ರೀತಿಸಬೇಕು. ದೇಶ ಉಳಿದರೆ ನಾವು ಉಳಿದಂತೆ. ಹಾಗಾಗಿ ರಾಷ್ಟ್ರೀಯತೆ ಅನ್ನುವುದು ಸರ್ವ ವ್ಯಾಪ್ತಿ. ಈ ನೆಲದ ಪ್ರತಿಯಪಬ್ಬರೂ ಅದರಲ್ಲಿ ಭಾಗಿಗಳಾಗಬೇಕು ಎಂದರು.

ದೇಶದ ವಿವಿಧ ಭಾಗಗಳಲ್ಲಿ ನಡೆದ ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾದವರು ಅನಕ್ಷರಸ್ಥರು ಅಲ್ಲ. ಅವರೆಲ್ಲರು ವಿದ್ಯಾವಂತರೇ. ಆದರೆ ಇಂತಹ ದುಷ್ಕೃತ್ಯ ನಡೆಸಲು ಕಾರಣ ಅವರಲ್ಲಿ ದೇಶ ಪ್ರೇಮ, ರಾಷ್ಟ್ರೀಯತೆಯ ಭಾವ ಇಲ್ಲದಿರುವುದು ಎಂದು ರಾಮಚಂದ್ರ ಕೋಡಿಬೈಲು ಅವರು ವಿಶ್ಲೇಷಿಸಿದರು.

ರಕ್ಷಾ ಬಂಧನ ಒಂದು ಪಕ್ಷ, ಪಂಗಡ, ಜಾತಿಗೆ ಸೀಮಿತವಾದ ಆಚರಣೆ ಅಲ್ಲ. ಅದು ರಾಷ್ಟ್ರೀಯ ಆಚರಣೆ ಎಂದ ಅವರು, ರಕ್ಷಾ ಬಂಧನ ಆಚರಣೆಯಿಂದ ಈ ದೇಶದ ಸಂಸ್ಕೃತಿ, ಸಂಸ್ಕಾರ ಉಳಿಯಲು ಸಾಧ್ಯವಿದೆ. ಇದರ ಸಾರವನ್ನು ಮಕ್ಕಳ ಮುಂದೆ ತೆರೆದಿಟ್ಟಾಗ ಅವರಲ್ಲಿಯು ಭಾರತೀಯ ಸಂಸ್ಕೃತಿಯನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಮಕ್ಕಳು ದೇಶ ಪ್ರೇಮ, ರಾಷ್ಟ್ರೀಯತೆಯ ಭಾವ ಮೈಗೂಡಿಸಿಕೊಂಡಾಗ ಆಗ ದೇಶವೂ ಒಳಿತಿನ ದಿಕ್ಕಿನತ್ತ ಸಾಗುತ್ತದೆ ಎಂದು ರಾಮಚಂದ್ರ ಕೋಡಿಬೈಲು ನುಡಿದರು.

ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ, ರಕ್ಷಾ ಬಂಧನ ಅಂದರೆ ಸೋದರತೆಯನ್ನು‌ ಸಾರುವ ಆಚರಣೆ. ನೇಸರ ಯುವಕ ಮಂಡಲ, ಶ್ರೀ ಗಣೇಶೋತ್ಸವ ಸಮಿತಿ ಪ್ರತಿ ವರ್ಷ ರಕ್ಷಾಬಂಧನ‌ ಆಚರಿಸುವ ಮೂಲಕ ಈ ನೆಲದ ಪರಂಪರೆ ಉಳಿಸುವ ಕಾರ್ಯ ನಡೆಸುತ್ತಿದೆ ಎಂದರು.

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ ಮಾತನಾಡಿ, ಕೇಸರಿ ಬಣ್ಣದ ರಾಖಿಯನ್ನು ಕಟ್ಟಿ ಸೋದರ ಸ್ಥಾನದ ಮೂಲಕ ರಕ್ಷಣೆ ನೀಡುವ ರಕ್ಷಾಬಂಧನ ಒಂದು ಅರ್ಥಪೂರ್ಣ ಆಚರಣೆ. ಅದು ಈ ರಾಷ್ಟ್ರದ ಸಂಸ್ಕಾರದ ಪ್ರತೀಕ ಎಂದರು.

ವೇದಿಕೆಯಲ್ಲಿ ಬೆಳ್ಳಾರೆ ಸಿಎ ಬ್ಯಾಂಕ್ ನಿರ್ದೇಶಕಿ ಸಾವಿತ್ರಿ ಚಾಮುಂಡಿಮೂಲೆ ಉಪಸ್ಥಿತರಿದ್ದರು. ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ತಾರಾನಾಥ ಕುಂಡಡ್ಕ, ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು, ಮಾಜಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯೆ ದೇವಕಿ‌ ಪಿ.ಪೂಜಾರಿ ಮುಕ್ಕೂರು, ಪುಟ್ಟಣ್ಣ ಗೌಡ ಅಡ್ಯತಕಂಡ ಮೊದಲಾದವರು ‌ಉಪಸ್ಥಿತರಿದ್ದರು. ಯಕ್ಷಿತಾ ಚಾಮುಂಡಿಮೂಲೆ ಸ್ವಾಗತಿಸಿ, ನಿರೂಪಿಸಿದರು.

ರಾಖೀ ಕಟ್ಟಿ ಶುಭಾಷಯ
ಕುಂಕುಮ ಹಣೆಗೆ ಹಚ್ಚಿ ಪರಸ್ಪರ ರಾಖಿ ಕಟ್ಟಿ ಶುಭ ಕೋರಲಾಯಿತು. ಬಳಿಕ ಸಿಹಿ ತಿಂಡಿ ಹಂಚಲಾಯಿತು. ಪುಟಾಣಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡರು.