ಮತದಾರರ ಸಮಯ ಮತ್ತು ಚುನಾವಣೆಯ ಖರ್ಚು ಗಮನಿಸಿ ನಾಮಪತ್ರ ವಾಪಾಸ್ ಹೇಳಿಕೆ ಹಾಸ್ಯಾಸ್ಪದ : ಗ್ರಾ.ಪಂ. ಸದಸ್ಯರ ಹೇಳಿಕೆ
ಕೊಲ್ಲಮೊಗ್ರು ಕಾಂಗ್ರೆಸ್ ನವರು ಗ್ರಾ.ಪಂ. ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳುವ ಭಯದಲ್ಲಿ ನಾಮಪತ್ರ ವಾಪಸ್ ತೆಗೆದುಕೊಂಡದ್ದೆ ವಿನಹ ಮತದಾರರ ಸಮಯ ಮತ್ತು ಚುನಾವಣೆಯ ಖರ್ಚು ಗಮನಿಸಿ ವಾಪಸ್ ಎಂಬುದು ಹಾಸ್ಯಾಸ್ಪದ ಎಂದು ಗ್ರಾ.ಪಂ. ಸದಸ್ಯ ಮಾಧವ ಚಾಂತಾಳ ಹೇಳಿಕೆ ನೀಡಿದ್ದಾರೆ.
ಉದಯ ಕೊಪ್ಪಡ್ಕರವರು ನಮ್ಮ ಪಂಚಾಯತ್ನ ಅಧ್ಯಕ್ಷರಾಗಿದ್ದಾಗ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಕೊರೊನಾ ಸಮಯದಲ್ಲಿ ತನ್ನ ಜೀವನವನ್ನು ಸಾರ್ವಜನಿಕರಿಗೆ ಮುಡಿಪಾಗಿಟ್ಟು ಕೆಲಸ ಮಾಡಿದ ಹೆಮ್ಮೆಯ ಅಧ್ಯಕ್ಷರು. ಅವರ ಬಗ್ಗೆ ನಮ್ಮ ಸದಸ್ಯರುಗಳಿಗೆ ಯಾವುದೇ ಭಿನ್ನಾಭಿಪ್ರಾಯ ಬರಲಿಲ್ಲ. ಅವರು ಹೇಳಿದ ನಿರ್ಣಯಗಳಿಗೆ ವಿರುದ್ದ ಯಾವುದೇ ಹೇಳಿಕೆ ನಾವು ಕೊಟ್ಟಿಲ್ಲ. ನಾವು ಜೊತೆಜೊತೆಯಾಗಿಯೇ ಸಮಾಜ ಸೇವೆ ಮಾಡಿದ್ದೇವೆ. ಅವರ ಅವಧಿಯಲ್ಲಿ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸುಮಾರು 15 ರಿಂದ 20 ಕೋಟಿ ಅನುದಾನ ತರಿಸಿರುವ ದಾಖಲೆಗಳನ್ನು ನೀಡಲು ಸಿದ್ಧರಿದ್ದೇವೆ.
ನಿಮಗೆ ತಾಕತ್ತು ಇದ್ದರೆ ಮುಂದಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪದ್ಮಯ್ಯ ಕೊಂದಾಳರನ್ನೇ ಚುನಾವಣೆಗೆ ನಿಲ್ಲಿಸಿ. ಅದು ನಿಮ್ಮ ತಾಕತ್ತು. ನಮ್ಮ ಪಂಚಾಯತ್ ಆಡಳಿತಕ್ಕೆ ಬಂದ ಮೇಲೆ ನಾವು ಏನು ಜನಪರ ಕೆಲಸ ಮಾಡಿದ್ದೇವೆ ಎಂದು ಜನ ನಿರ್ಧರಿಸುತ್ತಾರೆ. ನಮ್ಮ ಸರಕಾರ ಇರುವಾಗ ನಮ್ಮ ಶಾಸಕರ ನೇತೃತ್ವದಲ್ಲಿ ನಾವು ಕೋಟಿಗಟ್ಟಲೇ ಅನುದಾನ ತರಿಸಿದ್ದೇವೆ. ನಿಮಗೆ ದಮ್ಮು ಇದ್ದರೆ ಇವಾಗ ನಿಮ್ಮ ಎಮ್.ಎಲ್.ಸಿ. ಇದ್ದಾರೆ. ನಿಮ್ಮ ಪಕ್ಷದ ಸರಕಾರ ಇದೆ. ನೀವು ಒಂದು ರೂಪಾಯಿ ಅನುದಾನ ತರಿಸಿದ್ದೀರಾ ? ತರಿಸಿದ್ದು ಇದ್ದರೆ ಒಂದು ಹೆಸರು ಹೇಳಿ. ಮುಳುಗುವ ದೋಣಿಯಾಗಿರುವ ಕೊಲ್ಲಮೊಗ್ರು ಕಾಂಗ್ರೆಸ್ ಸಮಿತಿಯಿಂದ ನಮಗೆ ಗೀತೋಪದೇಶದ ಅಗತ್ಯ ಇಲ್ಲ. ಈ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡರೆ ಜನವರಿ 19 ರಂದು ನಡೆಯುವ ಕೊಲ್ಲಮೊಗ್ರು ಹರಿಹರ ಸೊಸೈಟಿ ಚುನಾವಣೆಯಲ್ಲಿ ಯಥಾಸ್ಥಿತಿ ಆಗಬಹುದೆಂಬ ಭಯದಲ್ಲಿ ನಾಮಪತ್ರ ವಾಪಸ್ ಪಡೆದಿದ್ದೀರಿ. ನೀವು ಆತ್ಮ ವಿಮರ್ಶೆ ಮಾಡಿಕೊಳ್ಳುವುದು ಒಳಿತು. ಮುಂದಿನ ದಿನಗಳಲ್ಲಿ ಯಾರು ನಿಷ್ಕ್ರಿಯರು ಎಂದು ಜನ ನಿರ್ಧರಿಸುತ್ತಾರೆ. ನಮ್ಮ ಆಡಳಿತಾವಧಿಯಲ್ಲಿ ಆದ ಅಭಿವೃದ್ಧಿ ಕೆಲಸಗಳು ಹಾಗೂ ನಿಮ್ಮ ಆಢಳಿತ ಅವಧಿಯಲ್ಲಿ ಆದ ಅಭಿವೃದ್ಧಿ ಕೆಲಸಗಳನ್ನು ಜನರ ಮುಂದೆ ಚರ್ಚಿಸಲು ವೇದಿಕೆ ಸಿದ್ಧಮಾಡಿ. ನಾವು ಬರುತ್ತೇವೆ. ಅದು ತಾಕತ್ತು. ಅದು ಬಿಟ್ಟು ಅನಾವಶ್ಯಕ ಹೇಳಿಕೆ ಕೊಡುವುದು ಉತ್ತಮ ಬೆಳವಣಿಗೆ ಅಲ್ಲ. ಎಲ್ಲವನ್ನು ಜನರು ಗಮನಿಸುತ್ತಾರೆ. ಮುಂದಿನ ದಿನಗಳಲ್ಲಿ ಜನರೇ ನಿಮಗೆ ಉತ್ತರ ನೀಡುತ್ತಾರೆ" ಎಂದವರು ಪತ್ರಿಕಾಹೇಳಿಕೆ ನೀಡಿರುತ್ತಾರೆ.