ಕೆ.ಆರ್.ಗಂಗಾಧರ್, ಡಾ.ಶಂಕರ ಭಟ್ರಿಗೆ ಕೆವಿಜಿ ಸಾಧನಾಶ್ರೀ ಪ್ರಶಸ್ತಿ
ಡಾ. ರವಿಕಾಂತ್, ಕಸ್ತೂರಿ ಶಂಕರ್, ಅಶ್ರಫ್ ಕಮ್ಮಾಡಿ, ಆದರ್ಶ್, ಪ್ರಕಾಶ್ ಮುಳ್ಯರಿಗೆ ಕೆವಿಜಿ ಯುವ ಪ್ರಶಸ್ತಿ
ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ಪ್ರತೀ ವರ್ಷದಂತೆ ಈ ವರ್ಷವೂ ದ. 25 ಮತ್ತು 26 ರಂದು ಕೆವಿಜಿ ಸುಳ್ಯ ಹಬ್ಬ ನಡೆಯಲಿದೆ.
ಸುಳ್ಯ ಹಬ್ಬ ಸಮಿತಿಯ ಅಧ್ಯಕ್ಷ ಡಾ. ಎನ್.ಎ. ಜ್ಞಾನೇಶ್ ಮತ್ತು ಪದಾಧಿಕಾರಿಗಳು ದ. 13 ರಂದು ಸುಳ್ಯ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಾರ್ಯಕ್ರಮದ ವಿವರ ನೀಡಿದರು.
ಈ ವರ್ಷ ದಿ. ಡಾ.ಕುರುಂಜಿ ವೆಂಕಟ್ರಮಣ ಗೌಡರ 96 ನೇ ಜಯಂತಿ ವರ್ಷವಾಗಿದ್ದು, ಕೆವಿಜಿ ಕಾನೂನು ಕಾಲೇಜಿನ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ.
ದ. 25ರಂದು ಬೆಳಿಗ್ಗೆ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಮತ್ತು ಕೆವಿಜಿ ಸುಳ್ಯ ಹಬ್ಬ ಸಮಿತಿ ಸದಸ್ಯರಿಗೆ ಕ್ರೀಡೆ ಮತ್ತು ಸಾಸ್ಕೃತಿಕ ಸ್ಪರ್ಧೆಗಳು ನಡೆಯುವುವು.
ಇದರ ಉದಾಘಟನೆಯನ್ನು ಶ್ರೀ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ.ಹರಪ್ರಸಾದ್ ತುದಿಯಡ್ಕ ನೆರವೇರಿಸುವರು. ವೇಗ ನಡಿಗೆಯ ರಾಷ್ಟ್ರೀಯ ಕ್ರೀಡಾಪಟು ಸುಬ್ರಹ್ಮಣ್ಯ ಕೆ. ಕ್ರೀಡಾಕೂಟಕ್ಕೆ ಚಾಲನೆ ಕೊಡುವರು. ಸಮಿತಿ ಅಧ್ಯಕ್ಷ ಡಾ.ಎನ್.ಎ. ಜ್ಞಾನೇಶ್ ಅಧ್ಯಕ್ಷತೆ ವಹಿಸುತ್ತಾರೆ. ಗೌರವಾಧ್ಯಕ್ಷ ಡಾ.ಕೆ.ವಿ. ಚಿದಾನಂದರು ಉಪಸ್ಥಿತರಿರುವರು.
ಅಶಕ್ತರಿಗೆ ನೆರವು
ಕುರುಂಜಿಯವರ ಜನ್ಮದಿನವಾದ ಡಿ. 26ರಂದು ಬೆಳಿಗ್ಗೆ 9.3೦ಕ್ಕೆ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಕಚೇರಿಯಲ್ಲಿ ಕೆವಿಜಿ ಭಾವಚಿತ್ರಕ್ಕೆ ಪುಷ್ಪನಮನ ನಡೆಯುವುದು. ಆ ಸಂದರ್ಭದಲ್ಲಿ ಕೃಷಿಕಾರ್ಯದಲ್ಲಿ ತೊಡಗಿಕೊಂಡಿರುವಾಗ ಅಪಘಾತಕ್ಕೊಳಗಾಗಿ ದೈಹಿಕ ಶಕ್ತಿ ಕಳೆದುಕೊಂಡಿರುವ ರವಿಪ್ರಸಾದ್ ಕೇರ್ಪಳ ಮತ್ತು ಯತೀಶ್ ಪಂಜಿಗುಂಡಿಯವರಿಗೆ ಸುಳ್ಯ ಹಬ್ಬ ಸಮಿತಿ ವತಿಯಿಂದ ತಲಾ ರೂ. 25 ಸಾವಿರವನ್ನು ವಿತರಿಸಲಾಗುವುದು. ತಹಶೀಲ್ದಾರ್ ಮಂಜುಳಾರವರು ನೆರವನ್ನು ಹಸ್ತಾಂತರಿಸುವರು. ಸ್ಥಾಪಕಾಧ್ಯಕ್ಷ ಎನ್.ಜಯಪ್ರಕಾಶ್ ರೈ ಉಪಸ್ಥಿತರಿರುವರು.
ಪ್ರಶಸ್ತಿ ಪ್ರದಾನ
ಅಂದು ಸಂಜೆ 5.3೦ರಿಂದ ಕೆವಿಜಿ ಸಂಸ್ಮರಣೆ, ಕೆವಿಜಿ ಸಾಧನಾ ಶ್ರೀ ಪ್ರಶಸ್ತಿ ಹಾಗೂ ಯುವ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಕಾನೂನು ಕಾಲೇಜಿನ ಆವರಣದಲ್ಲಿ ಆರಂಭಗೊಳ್ಳಲಿದೆ.
ಸಭೆಯ ಅಧ್ಯಕ್ಷತೆಯನ್ನು ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಡಾ. ಕೆ.ವಿ. ಚಿದಾನಂದರು ವಹಿಸುವರು. ಶಾಸಕಿ ಕು. ಭಾಗೀರಥಿ ಮುರುಳ್ಯ ಸಮಾರಂಭ ಉದ್ಘಾಟಿಸುವರು.
ಹೆಸರಾಂತ ವಾಗ್ಮಿ, ಮೈಸೂರಿನ ಸಂತ ಫಿಲೋಮಿನಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಎಂ.ಕೃಷ್ಣೇ ಗೌಡರು ಸಂಸ್ಮರಣಾ ಭಾಷಣ ಮಾಡುವರು.
ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ಆರ್.ಗಂಗಾಧರ್ ಹಾಗೂ ಸುಳ್ಯದ ಹಿರಿಯ ವೈದ್ಯ ಡಾ.ಎಂ.ವಿ. ಶಂಕರ ಭಟ್ರಿಗೆ ಕೆವಿಜಿ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಕೆವಿಜಿ ಯುವ ಪ್ರಶಸ್ತಿಯನ್ನು ಡಾ. ರವಿಕಾಂತ್ ಜಿ.ಒ. (ವೈದ್ಯಕೀಯ), ಕಸ್ತೂರಿ ಶಂಕರ್ (ಸ್ವುದ್ಯೋಗ), ಅಶ್ರಫ್ ಕಮ್ಮಾಡಿ (ಉದ್ಯಮ), ಆದರ್ಶ್ ಎಸ್.ಪಿ. (ಕ್ರೀಡೆ), ಪ್ರಕಾಶ್ ಕುಮಾರ್ ಮುಳ್ಯ (ಕೃಷಿ ಹೈನುಗಾರಿಕೆ) ಇವರಿಗೆ ನೀಡಿ ಪುರಸ್ಕರಿಸಲಾಗುವುದು.
ಅಂದು ರಾತ್ರಿ 9.3೦ರಿಂದ 11 ಗಂಟೆಯ ವರೆಗೆ ಜೀವನ್ ಟಿ.ಎನ್. ಬೆಳ್ಳಾರೆ ಸಾರಥ್ಯದ ಡ್ಯಾನ್ಸ್ ಬೀಟ್ಸ್ ತಂಡದವರಿಂದ ನೃತ್ಯ ಸಂಭ್ರಮ ನಡೆಯಲಿದೆ ಎಂದು ಡಾ. ಜ್ಞಾನೇಶ್ ವಿವರಿಸಿದರು. ಸುಳ್ಯ ಹಬ್ಬ ಸಮಿತಿಯ ಸದಸ್ಯರಿಗೆ, ಅವರ ಕುಟುಂಬಿಕರಿಗೆ ಮತ್ತು ಅತಿಥಿಗಳು, ವಿಶೇಷ ಆಹ್ವಾನಿತರಿಗೆ ಭೋಜನದ ವ್ಯವಸ್ಥೆ ಇರಲಿದೆ.
ಸುದ್ದಿಗೋಷ್ಠಿಯಲ್ಲಿ ಕೆವಿಜಿ ಸುಳ್ಯ ಹಬ್ಬ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜು ಪಂಡಿತ್, ಕೋಶಾಧಿಕಾರಿ ಶ್ರೀಕೃಷ್ಣ ಎಂ.ಎನ್., ನಿಕಟಪೂರ್ವಾಧ್ಯಕ್ಷ ಚಂದ್ರಶೇಖರ ಪೇರಾಲು ಹಾಗೂ ಸದಸ್ಯತ್ವ ಅಭಿಯಾನ ಸಮಿತಿ ಸಂಚಾಲಕ ಹರೀಶ್ ಬಂಟ್ವಾಳ್ ಉಪಸ್ಥಿತರಿದ್ದರು.