ಎಡಮಂಗಲ : ಕೃತಕ ಗರ್ಭಧಾರಣೆ ಮಾಡಿಸಿಕೊಂಡಿದ್ದ ಗರ್ಭಿಣಿ ನಿಧನ

0

ಎಡಮಂಗಲ ಗ್ರಾಮದ ಡೆಕ್ಕಳ ದಿನೇಶ್ ಎಂಬವರ‌ ಪತ್ನಿ ಶ್ರೀಮತಿ ಶೀಲಾವತಿಯವರು ಅಸೌಖ್ಯದಿಂದ ಡಿ. 18ರಂದು ಮಂಗಳೂರಿನಲ್ಲಿ ನಿಧನರಾದರು. ಇವರಿಗೆ ಅಂದಾಜು 38 ವರ್ಷ ವಯಸ್ಸಾಗಿತ್ತು.


ದಿನೇಶ್ ಎಂಬವರು ಎಡಮಂಗಲದಲ್ಲಿ ಅಟೋ ಓಡಿಸುತ್ತಿದ್ದು, ಮದುವೆಯಾಗಿ 17 ವರ್ಷಗಳಾದರೂ ಇವರಿಗೆ ಮಕ್ಕಳಾಗಿರಲಿಲ್ಲ. ಇದರಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯ ವೈದ್ಯರ ಸಲಹೆಯಂತೆ ಸುಮಾರು 3 ತಿಂಗಳ ಹಿಂದೆ ಕೃತಕ ಗರ್ಭಧಾರಣೆ ಮಾಡಿಸಿಕೊಂಡಿದ್ದರು. ವೈದ್ಯರ ಸಲಹೆಯಂತೆ 20 ದಿವಸಗಳಿಗೊಮ್ಮೆ ತಪಾಸಣೆ ಮಾಡಿಸುತ್ತಿದ್ದರು. ಈ ಸಂದರ್ಭದಲ್ಲಿ ಹೆಚ್ಚು ಶ್ರಮ ಪಡಬಾರದೆನ್ನುವ ಉದ್ದೇಶದಿಂದ ಶೀಲಾವತಿಯವರು ತವರು‌ಮನೆಯಲ್ಲೇ ಇರುತ್ತಿದ್ದರೆನ್ನಲಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಶೀಲಾವತಿಯವರಿಗೆ ಅಸೌಖ್ಯ ಕಾಣಿಸಿಕೊಂಡಿತ್ತೆನ್ನಲಾಗಿದೆ. ಇದು ನಿನ್ನೆ ಜೋರಾದಾಗ ಮತ್ತೆ ಚಿಕಿತ್ಸೆ ನೀಡುತ್ತಿದ್ದ ಮಂಗಳೂರಿನ ವೈದ್ಯರನ್ನು ಸಂಪರ್ಕಿಸಿದಾಗ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸೂಚಿಸಿದರೆನ್ನಲಾಗಿದೆ. ನಿನ್ನೆ ಡಿ. 18ರಂದು ಅನಾರೋಗ್ಯ ಉಲ್ಬಣಗೊಂಡು ವಾಂತಿ ಮಾಡಿದರೆನ್ನಲಾಗಿದೆ. ಆಗ ದಿನೇಶರು ಪತ್ನಿಯನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಅಲ್ಲಿ ಚೇತರಿಸಿಕೊಳ್ಳದೇ ಇದ್ದಾಗ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ತೆರಳುತ್ತಿದ್ದಾಗ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.


ಮೃತರು ಪತಿ ದಿನೇಶ್, ತಂದೆ ತಿಮ್ಮಪ್ಪ ಗೌಡ ಕರಿಕ್ಕಳ, ತಾಯಿ ಶ್ರೀಮತಿ ದೇವಕಿ, ಸಹೋದರ ರವಿ, ಸಹೋದರಿ ಲೀಲಾವತಿ ಸೇರಿದಂತೆ ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.