ಮರ್ಕಂಜ ಸೊಸೈಟಿ ಚುನಾವಣೆ : ಅಭ್ಯರ್ಥಿಗಳ ಚಿಹ್ನೆ ಮತ್ತು ಸಂಖ್ಯೆ ಹೆಚ್ಚುವರಿ ಚೀಟಿ ನೀಡಿದ ಬಗ್ಗೆ ಸ್ವತಂತ್ರ ಅಭ್ಯರ್ಥಿಗಳ ಆಕ್ಷೇಪ

0

ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಬಿರುಸಿನ ಮತಯಾಚನೆ ನಡೆಯುತ್ತಿದೆ. ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಮತಯಾಚನೆಯ ಸಂದರ್ಭ ಸ್ವತಂತ್ರ ಅಭ್ಯರ್ಥಿಗಳನ್ನು ಬಿಟ್ಟು ಉಳಿದ ಅಭ್ಯರ್ಥಿಗಳು ತಮ್ಮ ಬ್ಯಾಲೆಟ್ ಪೇಪರ್‌ನೊಂದಿಗೆ ಅಭ್ಯರ್ಥಿಯ ಸಂಖ್ಯೆ ಮತ್ತು ಚಿಹ್ನೆಯಿಂದ ಹೆಚ್ಚುವರಿ ಚೀಟಿ ನೀಡುತ್ತಿದ್ದಾರೆಂದು ಸ್ವತಂತ್ರ ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ ಘಟನೆ ವರದಿಯಾಗಿದೆ.


ನಾಳೆ ಮರ್ಕಂಜ ಸೊಸೈಟಿಯ ಚುನಾವಣೆ ನಡಯಲಿದ್ದು, ನಿನ್ನೆಯಿಂದಲೇ ಮತಬೇಟೆ ಆರಂಭವಾಗಿದೆ. ಈ ಸಂದರ್ಭ ಬಿಜೆಪಿ ಬೆಂಬಲಿತ ಸಹಕಾರ ಭಾರಿ ಮತ್ತು ಕಾಂಗ್ರೆಸ್ ಬೆಂಬಲಿತ ಮರ್ಕಂಜ ಸಹಕಾರ ಬಳಗದ ಅಭ್ಯರ್ಥಿಗಳು ತಮ್ಮ ವಿಜ್ಞಾಪನಾ ಪತ್ರದೊಂದಿಗೆ ಅಭ್ಯರ್ಥಿಯ ಸಂಖ್ಯೆ ಮತ್ತು ಚಿಹ್ನೆಯಿಂದ ಹೆಚ್ಚುವರಿ ಚೀಟಿಯನ್ನು ನೀಡಿ ಮತಯಾಚನೆ ಮಾಡಿದ್ದರಲ್ಲದೆ, ಈ ಚೀಟಿಯನ್ನು ಮತಕೇಂದ್ರದ ಒಳಗೆ ತೆಗೆದುಕೊಂಡು ಹೋಗಿ ಇದನ್ನು ನೋಡಿ ಮತಹಾಕಿ ಎಂದು ಹೇಳುತ್ತಾರೆಂದು ಸ್ವತಂತ್ರ ಅಭ್ಯರ್ಥಿಗಳಾದ ನಿವೃತ್ತ ಶಿಕ್ಷಕ ಅಚ್ಚುತ ತೇರ್ಥಮಜಲು ಮತ್ತು ಕೃಷ್ಣರಾಜ್ ಶೆಟ್ಟಿ ಬಲ್ನಾಡುಪೇಟೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಹಕಾರಿ ಚುನಾವಣೆಯಲ್ಲಿ ಇಂತಹ ಚೀಟಿಯನ್ನು ಮತಕೇಂದ್ರದ ಒಳಗಡೆ ತೆಗೆದುಕೊಂಡು ಹೋಗುವಂತಿಲ್ಲ ಮತ್ತು ಮತದಾನ ಮಾಡಲು ಬೇಕಾದ ಅಧಿಕೃತ ಚೀಟಿಯನ್ನು ಮಾತ್ರ ತೆಗೆದುಕೊಂಡು ಹೋಗಬೇಕು. ಆದರೆ ಇಂತಹ ಹೆಚ್ಚುವರಿ ಚೀಟಿಯನ್ನು ತೆಗೆದುಕೊಂಡು ಹೋಗುವಂತಿಲ್ಲ. ಈ ಬಗ್ಗೆ ನಾನು ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಜೊತೆ ಹೇಳಿದಾಗ ಅವರು, ‘ಇದೆಲ್ಲಾ ಮಾಮೂಲಿ ಅವರ ಟ್ರಿಕ್ಸ್. ಬೇಕಾದರೆ ನೀವೂ ಇದನ್ನು ಮಾಡಬಹುದು’ ಎಂದಿದ್ದಾರೆ. ‘ಆದರೆ ಸಹಕಾರಿ ಚುನಾವಣೆಯಲ್ಲಿ ಇಂತಹವುಗಳಿಗೆ ಅವಕಾಶವಿಲ್ಲ. ನಾನು ಚುನಾವಣಾ ಕೇಂದ್ರದಲ್ಲಿ ಕೆಲಸ ಮಾಡಿದವನು. ಹೀಗಾಗಿ ನಾನು ಸೋತರೂ ಪರವಾಗಿಲ್ಲ, ಈ ರೀತಿ ಮಾಡಲಾರೆ’ ಎಂದು ಸುದ್ದಿಯನ್ನು ಸಂಪರ್ಕಿಸಿ ತಿಳಿಸಿದ್ದಾರೆ.

ಈ ಬಗ್ಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವನ್ನು ಸಂಪರ್ಕಿಸಿದಾಗ ಅವರು, ‘ಮತ ಕೇಂದ್ರದ ಒಳಗಡೆ ಅಧಿಕೃತ ಚೀಟಿಯನ್ನು ಹೊರತುಪಡಿಸಿ ಬೇರೆ ಯಾವುದೇ ಚೀಟಿಯನ್ನು ತರುವಂತಿಲ್ಲ. ಮತದಾರರಿಗೆ ತಮ್ಮ ಚಿಹ್ನೆ ಮತ್ತು ಸಂಖ್ಯೆಯನ್ನು ಮನವರಿಕೆ ಮಾಡುವ ತಂತ್ರ ಆಯಾಯ ಅಭ್ಯರ್ಥಿಗಳದ್ದು’ ಎಂದು ಪ್ರತಿಕ್ರಿಯಿಸಿದ್ದಾರೆ.