ಜಾಲ್ಸೂರು ಗ್ರಾ.ಪಂ. ಅಧ್ಯಕ್ಷತೆಗೆ ಶ್ರೀಮತಿ ಸಾವಿತ್ರಿ ಅಡ್ಕಾರುಬೈಲು ನಾಮಪತ್ರ ಸಲ್ಲಿಕೆ

0

ಒಬ್ಬರೇ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧವಾಗಿ ಆಯ್ಕೆ ಖಚಿತ

ಜಾಲ್ಸೂರು ಗ್ರಾಮ ಪಂಚಾಯತಿಯ. ಮುಂದಿನ ಅವಧಿಗೆ ನೂತನ ಅಧ್ಯಕ್ಷರ ಆಯ್ಕೆಯಾಗ ಬೇಕಿದ್ದು, ಅಧ್ಯಕ್ಷತೆ ಸ್ಥಾನಕ್ಕೆ ಭಿಜೆಪಿ ಬೆಂಬಲಿತ ಸದಸ್ಯೆ ಶ್ರೀಮತಿ ಸಾವಿತ್ರಿ ಅಡ್ಕಾರುಬೈಲು ಅವರು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ್ದು, ಒಬ್ಬರೇ ನಾಮಪತ್ರ ಸಲ್ಲಿಸಿರುವ ಕಾರಣದಿಂದ ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ.

ಜಾಲ್ಸೂರು ಗ್ರಾಮ ಪಂಚಾಯತಿ ಅಧ್ಯಕ್ಷತೆ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಿದ್ದು, ಈ ಸ್ಥಾನದಿಂದ ಬಿಜೆಪಿ ಬೆಂಬಲಿತರಾಗಿ ಗೆಲುವು ಸಾಧಿಸಿದ್ದ ಶ್ರೀಮತಿ ತಿರುಮಲೇಶ್ವರಿ ಮರಸಂಕ ಅವರು ಕಳೆದ ಎರಡೂವರೆ ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು.


ಎರಡೂವರೆ ವರ್ಷದ ಬಳಿಕ ತನ್ನ ಅವಧಿ ಮುಗಿದ ಹಿನ್ನೆಲೆಯಲ್ಲಿ ಶ್ರೀಮತಿ ತಿರುಮಲೇಶ್ವರಿ ಮರಸಂಕ ಅವರು ಕಳೆದ ಡಿಸೆಂಬರ್ ತಿಂಗಳಿನಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಹಿಂದುಳಿದ ವರ್ಗ ಎ ಮಹಿಳಾ ಸ್ಥಾನಕ್ಕೆ ಮೀಸಲಾಗಿದ್ದ ಕಾರಣ ಬಿಜೆಪಿ ಬೆಂಬಲಿತರಾಗಿ ಗೆಲುವು ಸಾಧಿಸಿದ್ದ ಶ್ರೀಮತಿ ಸಾವಿತ್ರಿ ಅಡ್ಕಾರುಬೈಲು, ಈ ಹಿಂದೆ ಉಪಾಧ್ಯಕ್ಷರಾಗಿದ್ದ ಶ್ರೀಮತಿ ಲೀಲಾವತಿ ವಿನೋಬನಗರ ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಶ್ರೀಮತಿ ಸಂಧ್ಯಾ ವಾಗ್ಲೆ ಅವರು ಅಧ್ಯಕ್ಷತೆಗೆ ಆಕಾಂಕ್ಷಿಯಾಗಿದ್ದರೆನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಜಾಲ್ಸೂರಿನ ಗುರುರಾಘವೇಂದ್ರ ಭಜನಾ ಮಂದಿರದ ಸಭಾಭವನದಲ್ಲಿ ಜ.16ರಂದು ಬೆಳಿಗ್ಗೆ ನಡೆದ ಬಿಜೆಪಿ ಪಕ್ಷದ ಸಭೆಯಲ್ಲಿ ಶ್ರೀಮತಿ ಸಾವಿತ್ರಿ ಅಡ್ಕಾರುಬೈಲು ಅವರನ್ನು ಪಕ್ಷದ ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದ್ದು, ಅವರು ಗ್ರಾ.ಪಂ. ಸಭಾಭವನದಲ್ಲಿ ಚುನಾವಣಾಧಿಕಾರಿಗಳಿಗೆ ತಮ್ಮ ನಾಮಪತ್ರ ಸಲ್ಲಿಸಿದರು.

ಇದೀಗ ಸಾವಿತ್ರಿ ಅವರು ಮಾತ್ರ ನಾಮಪತ್ರ ಸಲ್ಲಿಸಿರುವ ಕಾರಣ ಅವರು ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ.