ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿ ಪುತ್ತೂರು ಇಲ್ಲಿ ನವೋದಯ ಪ್ರವೇಶ ಪರೀಕ್ಷೆಗೆ 2024ರ ಸಾಲಿನಿಂದ ತರಬೇತಿಯಲ್ಲಿರುವ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭವು ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ C.R.P ಶಶಿಕಲಾ S ಇವರು ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಚಿಕ್ಕಂದಿನಿಂದಲೇ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡುವುದರಿಂದ ಉಜ್ವಲ ಭವಿಷ್ಯವಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯಲ್ಲಿ ಕರಾವಳಿ ಭಾಗದಲ್ಲಿ ಕ್ರಾಂತಿಯನ್ನೇ ಮಾಡುತ್ತಿರುವ ವಿದ್ಯಾಮಾತಾ ಅಕಾಡೆಮಿಯ ಪ್ರಯತ್ನಗಳನ್ನು ಶ್ಲಾಘಿಸಿ ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ C.R.P.ಶಶಿಕಲಾ S ರವರನ್ನು ವಿದ್ಯಾಮಾತಾ ಅಕಾಡೆಮಿ ವತಿಯಿಂದ ಸಂಸ್ಥೆಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ಅವರು ಸನ್ಮಾನಿಸಿದರು.
ಪೋಷಕರ ಮತ್ತು ವಿದ್ಯಾರ್ಥಿಗಳ ಅನಿಸಿಕೆ
ಪೋಷಕರಾದ ಜಯಶ್ರೀ ಟಿ.ಜೆ. ಮುಕ್ವೆಯವರು ತಮ್ಮ ಅನಿಸಿಕೆಯಲ್ಲಿ “ವಿದ್ಯಾಮಾತಾ ವಿದ್ಯಾಸಂಸ್ಥೆಯು ಬಾಲ್ಯದಲ್ಲಿಯೇ ಮಕ್ಕಳ ಮನಸ್ಸಿನಲ್ಲಿ ಸ್ಪರ್ಧಾತ್ಮಕ ಮನೋಭಾವನೆಯನ್ನು ತುಂಬಿ ಯಶಸ್ವಿಯಾಗಲು ಪ್ರೇರಣೆಯಾಗಿದೆ” ಎಂದರು.
ಪೋಷಕರಾದ ತೀರ್ಥರಾಮ ಸುಳ್ಯರವರು ಮಾತನಾಡುತ್ತಾ “ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರಕಾರಿ ಸೇವೆಗೆ ಸೇರಲು ಕಷ್ಟ ಸಾಧ್ಯವಾಗುತ್ತಿದ್ದು ಈ ನಿಟ್ಟಿನಲ್ಲಿ ಯುವ ಜನತೆಗೆ ವಿದ್ಯಾಮಾತಾ ದಾರಿದೀಪವಾಗಿದೆ” ಎಂದರು.ಕಾರ್ಯಕ್ರಮದಲ್ಲಿ ಅತ್ಯುತ್ತಮ ಮಟ್ಟದ ನವೋದಯ ಮತ್ತು ಮಕ್ಕಳ ಮಾನಸಿಕ ಸಾಮರ್ಥ್ಯ ವೃದ್ಧಿಗಾಗಿ ತರಬೇತಿ ನೀಡಿದ ಸಂಸ್ಥೆಯ ಬಗ್ಗೆ ಪೋಷಕರು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ವಿದ್ಯಾರ್ಥಿ ಅನಿತ್ ಕುಮಾರ್ ತನ್ನ ಅನಿಸಿಕೆಯಲ್ಲಿ “ತನ್ನ ಅಣ್ಣ ಮೊರಾರ್ಜಿ ಶಾಲೆಯಲ್ಲಿ ಓದುತ್ತಿದ್ದು ಅವನ ಪ್ರೇರಣೆಯಿಂದ ನನಗೂ ನವೋದಯ ಅಥವಾ ಮೊರಾರ್ಜಿ ಶಾಲೆಗೆ ಸೇರಿ ಶಿಕ್ಷಣ ಪಡೆಯಬೇಕೆಂಬ ಆಸೆ ಇತ್ತು ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ವಿದ್ಯಾಮಾತಾ ಅಕಾಡೆಮಿ ಸೂಕ್ತ ಎಂದು ತಿಳಿದು ಇಲ್ಲಿ ಸೇರಿ ಉತ್ತಮ ಜ್ಞಾನ ಪಡೆದೆನು. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ನವೋದಯ ಶಾಲೆಗೆ ಆಯ್ಕೆಯಾಗುವೆನು ಎಂಬ ಆಶಾಭಾವನೆ ಇದೆ.” ಎಂದು ತನ್ನ ಅನಿಸಿಕೆ ವ್ಯಕ್ತಪಡಿಸಿದನು. ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ನೆನಪಿನ ಕಾಣಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ತರಬೇತುದಾರರಾದ ಕುಮಾರಿ ದೀಪ್ತಿ, ಚಂದ್ರಕಾಂತ್, ಶ್ರೀಮತಿ ರಮ್ಯಾ, ಕುಮಾರಿ ಸ್ನೇಹ ಮತ್ತು ಸಿಬ್ಬಂದಿ ಮಿಥುನ್ ಉಪಸ್ಥಿತರಿದ್ದರು.
ತರಬೇತುದಾರೆ ಶ್ರೀಮತಿ ಚೇತನ ಸತೀಶ್ ಧನ್ಯವಾದ ಸಮರ್ಪಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.