ಫೆಬ್ರವರಿ 21 ಮತ್ತು 22 ರಂದು ಮಂಗಳೂರು ವಿಶ್ವವಿದ್ಯಾಲಯ ಕೋಣಾಜೆ ಇಲ್ಲಿ ನಡೆಯಲಿರುವ ದಕ್ಷಿಣ ಕನ್ನಡ ಜಿಲ್ಲಾ 27 ನೆಯ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಹಿರಿಯ ವಿದ್ವಾಂಸ ಡಾ. ಬಿ. ಪ್ರಭಾಕರ ಶಿಶಿಲ 54 ಸಾಹಿತ್ಯ ಕೃತಿಗಳ ಪರಿಚಯ ಮತ್ತು ಸಾಹಿತಿಯೊಡನೆ ಸಂವಾದ ಕಾರ್ಯಕ್ರಮವು ಜನವರಿ 25 ರಂದು ನಡೆಯಲಿದೆ.
ಸುಳ್ಯ ಸಂಧ್ಯಾರಶ್ಮಿ ಸಾಹಿತ್ಯ ಸಂಘ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕ ಮತ್ತು ಸುಳ್ಯ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಜಂಟಿಯಾಗಿ ಸುಳ್ಯ ಸಂಧ್ಯಾರಶ್ಮಿ ಸಭಾಭವನದಲ್ಲಿ ಈ ಕಾರ್ಯಕ್ರಮವನ್ನು ಸಂಯೋಜಿಸಿದೆ.
ಸಂಧ್ಯಾರಶ್ಮಿ ಸಾಹಿತ್ಯ ಸಂಘದ ಅಧ್ಯಕ್ಷೆ ಪ್ರೊ|| ಲೀಲಾ ದಾಮೋದರ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕವಯಿತ್ರಿ ಸ್ಮಿತಾ ಅಮೃತ್‌ರಾಜ್ ಡಾ. ಶಿಶಿಲರ ಕೃತಿಗಳ ವಿಮರ್ಶಾತ್ಮಕ ಪರಿಚಯ ಮಾಡಲಿರುವರು. ನ್ಯೂಸ್ 18 ರ ಚಂದ್ರಶೇಖರ ಮಂಡೆಕೋಲು ಶಿಶಿಲರ ವ್ಯಕ್ತಿತ್ವ ಪರಿಚಯ ಮಾಡಿ ಕೊಡಲಿದ್ದಾರೆ. ಸುಳ್ಯ ಹೋಬಳಿ ಕಸಾಪ ಘಟಕದ ಅಧ್ಯಕ್ಷೆ ಶ್ರೀಮತಿ ಚಂದ್ರಾವತಿ ಬಡ್ಡಡ್ಕ ಕಾರ್ಯಕ್ರಮ ನಿರ್ವಹಣೆಗೈಯಲಿದ್ದಾರೆ. ಆ ಬಳಿಕ ಸಾಹಿತಿಯೊಡನೆ ಸಂವಾದ ನಡೆಯಲಿದೆ.
ಕಾರ್ಯಕ್ರಮವು ಜನವರಿ 25 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ. ಸರ್ವ ನಾಗರಿಕರು ಇದರಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಧ್ಯಾರಶ್ಮಿ ಸಾಹಿತ್ಯ ಸಂಘದ ಕಾರ್ಯದಲ್ಲಿ ಭಾವನಾ ಬಳಗದ ಸಂಸ್ಥಾಪಕ ಗಾಯಕ ಕೆ.ಆರ್. ಗೋಪಾಲಕೃಷ್ಣ ವಿನಂತಿಸಿದ್ದಾರೆ.