ಪೆರಾಜೆ: ಪತಿ – ಪತ್ನಿ ನಡುವೆ ಹೊಡೆದಾಟ

0

ಪತಿಯ ತಲೆಗೆ ಸೌಟಲ್ಲಿ ಬಾರಿಸಿದ ಪತ್ನಿ

ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಪತಿರಾಯ

ಪೆರಾಜೆ ಬಳಿ ಗಂಡ ಹೆಂಡತಿ ನಡುವೆ ಗಲಾಟೆ ನಡೆದು ಪರಸ್ಪರ ಹೊಡೆದಾಡಿ, ಪತ್ನಿ ಗಂಡನ ತಲೆಗೆ ಸೌಟಲ್ಲಿ ಬಾರಿಸಿದ ಪರಿಣಾಮ ಗಾಯವಾಗಿ ರಕ್ತ ಚಿಮ್ಮಿದ್ದು, ಗಾಯಾಳು ಸುಳ್ಯ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದ ಘಟನೆ ಜ.15 ರಂದು ವರದಿಯಾಗಿದೆ.

ಪೆರಾಜೆಯ ದಾಸರಹಿತ್ಲು ಎಂಬಲ್ಲಿ ಗಂಡ ಕುಡಿದ ಮತ್ತಿನಲ್ಲಿ ಹೆಂಡತಿಯೊಂದಿಗೆ ಕಿರಿ ಕಿರಿ ಮಾಡುತ್ತಿದ್ದನೆನ್ನಲಾಗಿದೆ. ಇದರ ಪರಿಣಾಮ ಅವರಿಬ್ಬರ ಮಧ್ಯೆ ವಾಗ್ವಾದ ನಡೆದು ಅದು ಹೊಡೆದಾಟಕ್ಕೆ ತಿರುಗಿತು. ಇಬ್ಬರೂ ಪರಸ್ಪರ ಹೊಡೆದಾಡಿಕೊಂಡರು. ಕೋಪದ ಭರದಲ್ಲಿ ಹೆಂಡತಿ ಸೌಟು ಬೀಸಿದಾಗ ಅದು ಗಂಡನ ತಲೆಗೆ ಬಡಿಯಿತು. ಪರಿಣಾಮವಾಗಿ ತಲೆಯಲ್ಲಿ ಗಾಯವಾಗಿ ರಕ್ತ ಚಿಮ್ಮಿತು. ಗಂಡನ ತಲೆಯಲ್ಲಿ ರಕ್ತ ಸೋರತೊಡಗಿದ್ದನ್ನು ಕಂಡು ಪತ್ನಿ ಕರಗಿ ಅಳತೊಡಗಿದಳೆನ್ನಲಾಗಿದೆ.

ಈ ವೇಳೆ ಅಕ್ಕ ಪಕ್ಕದವರಿಗೆ ತಿಳಿದು ಅವರು ಬಂದು ನೋಡಿದಾಗ ಗಂಡನ ತಲೆಯಿಂದ ರಕ್ತ ಬರುತ್ತಿತ್ತು. ಕೂಡಲೆ ಅವರಿಬ್ಬರನ್ನೂ ಉನೈಸ್ ಪೆರಾಜೆಯವರು ತಮ್ಮ ಆಂಬುಲೆನ್ಸ್ ನಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದರು. ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಚಿಕಿತ್ಸೆ ನೀಡಿದರು.

ಗಂಭೀರ ಸ್ವರೂಪದ ಗಾಯವಲ್ಲವಾದುದರಿಂದ ತಲೆಗೆ ಬ್ಯಾಂಡೇಜ್ ಹಾಕಿದ ಬಳಿಕ ಆಸ್ಪತ್ರೆಯಿಂದ ಗಾಯಾಳುವನ್ನು ಡಿಸ್ಚಾರ್ಜ್ ಮಾಡಲಾಯಿತೆಂದು ತಿಳಿದುಬಂದಿದೆ.