ಪ್ರೀತಿ ವಿಸ್ವಾಸ, ಸೇವಾ ಮನೋಭಾವದ ಮೂಲಕ ಮೌಲ್ಯಯುತ ಶಿಕ್ಷಣ : ಫಾ. ಲಾರೆನ್ಸ್ ಮಸ್ಕರೇನ್ಹಸ್
ಪ್ರೀತಿ ವಿಸ್ವಾಸ, ಸೇವಾ ಮನೋಭಾವದ ಮೌಲ್ಯಯುತ ಶಿಕ್ಷಣವನ್ನು ನೀಡುವ ಮೂಲಕ ದೇಶ ಕಟ್ಟುವ ವ್ಯಕ್ತಿಗಳ ನಿರ್ಮಾಣ ಸಾಧ್ಯ ಎಂದು ಪುತ್ತೂರು ಮಾಯಿದೇ ದೇವೂಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಫಾ. ಲಾರೆನ್ಸ್ ಮಸ್ಕರೇನ್ಹಸ್ ಹೇಳಿದ್ದಾರೆ.
ಸುಳ್ಯದ ಬೀರಮಂಗಲದ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಬೆಳ್ಳಿ ಹಬ್ಬ ಸಂಭ್ರಮಕ್ಕೆ ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಂಗಳೂರು ಧರ್ಮಪ್ರಾಂತ್ಯದ ಅಧೀನದಲ್ಲಿ ಶಾಲಾ, ಕಾಲೇಜುಗಳು ಸೇರಿ ೨೫೦ ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿವೆ ಇಲ್ಲಿ ಧರ್ಮ, ಜಾತಿ ಮೇಲು ಕೀಳು ಭೇದವಿಲ್ಲದೆ ಎಲ್ಲರಿಗೂ ಉತಮ ಮತ್ತು ಮೌಲ್ಯಯುತ ಶಿಕ್ಷಣ ನೀಡಲಾಗುತ್ತಿದೆ. ಎಲ್ಲರನ್ನು ಪ್ರೀತಿಸುವ ಮತ್ತು ಗೌರವಿಸುವುದನ್ನು ಕಲಿಸಿ ಸಮಾಜಕ್ಕೆ ಸಂಪತ್ತಾಗುವ ಮೂಲಕ ದೇಶ ಕಟ್ಟುವ ಯುವ ಸಮೂಹವನ್ನು ಸೃಷ್ಠಿಸುತ್ತಿದೆ ಎಂದು ಅವರು ಹೇಳಿದರು.
ಮಕ್ಕಳೆಂದರೆ ದೇವರ ಕೊಡುಗೆ, ಅವರನ್ನು ದೇವರ ಮಕ್ಕಳಾಗಿ ಬೆಳೆಸಬೇಕು. ಅವರ ಬದುಕು ಎಲ್ಲರಿಗೂ ಮಾದರಿಯಾಗುವಂತೆ ರೂಪಿಸಬೇಕು ಎಂದು ಅವರು ಹೇಳಿದರು. ಶಿಕ್ಷಣದ ಮೂಲಕ ಹಲವಾರು ಮಂದಿಯ ಬದುಕಿಗೆ ಬೆಳಗಾದ ಸುಳ್ಯದ ಸಂತ ಜೋಸೆಫ್ ಶಾಲೆ ಬೆಳ್ಳಿ ಹಬ್ಬ ಆಚರಿಸುತ್ತಿರುವುದು ಸಂತಸದ ವಿಷಯ ಎಂದು ಅವರು ಹೇಳಿದರು. ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಫಾ.ವಿಕ್ಟರ್ ಡಿಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದು, ಬಹುಮಾನ ವಿತರಿಸಿ, ಸನ್ಮಾನ ನೆರವೇರಿಸಿದರು.
ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಕ್ರೀಡಾ, ಕಲಾ ಸ್ಪರ್ಧೆಗಳ ಸಾಧಕರಿಗೆ,ಕಳೆದ ಹಲವಾರು ವರ್ಷಗಳಿಂದ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರುಗಳಿಗೆ, ಶಿಕ್ಷಕೇತರ ಸಿಬ್ಬಂದಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ಕ್ರೀಡೆ ಮತ್ತು ಇನ್ನಿತರ ಶೈಕ್ಷಣಿಕ ಚಟುವಟಿಕೆಗಳಲ್ಲಿ ಪ್ರಶಸ್ತಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಸಂತ ಬ್ರಿಜಿಡ್ಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ನವೀನ್ ಮಚಾದೋ, ಕಾರ್ಯದರ್ಶಿ ಜೂಲಿಯಾನ ಕ್ರಾಸ್ತಾ, ಬೆಳ್ಳಿಹಬ್ಬ ಆಚರಣಾ ಮಹೋತ್ಸವ ಸಮಿತಿಯ ಸಂಚಾಲಕ ಹಾಗೂ ಶಾಲಾ ರಕ್ಷಕ ಸಂಘದ ಉಪಾಧ್ಯಕ್ಷ ಹೇಮನಾಥ ಬಿ, ಬೆಳ್ಳಿ ಹಬ್ಬ ಆಚರಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಅನುರಾಧಾ ಕುರುಂಜಿ,
ಪ್ರಾಥಮಿಕ ಪ್ರಾಥಮಿಕ ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶಶಿಧರ ಎಂ.ಜೆ, ಪ್ರಬೋದ್ ಶೆಟ್ಟಿ ಮೇನಾಲ, ಶಾಲಾ ವಿದ್ಯಾರ್ಥಿ ನಾಯಕಿಯರಾದ ಫಾತಿಮಾತ್ ಸನಾ, ಸಾನ್ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಸಿಸ್ಟರ್ ಮೇರಿ ಸ್ಟೆಲ್ಲಾ ಸ್ವಾಗತಿಸಿ, ಶಿಕ್ಷಕಿ ಚೈತ್ರ ಎನ್.ಜೆ ವಂದಿಸಿದರು. ಶಿಕ್ಷಕಿಯರಾದ ವಿದ್ಯಾಸರಸ್ವತಿ ಮತ್ತು ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.