ಭರದಿಂದ ಸಾಗುತ್ತಿರುವ ಬೆಳ್ಳಾರೆ ದರ್ಖಾಸ್ತು ರಸ್ತೆ ಅಗಲೀಕರಣ ಕಾಮಗಾರಿ

0

ರಸ್ತೆ ಬದಿ ಮರ,ಕುಡಿಯುವ ನೀರಿನ ಪೈಪ್ ಲೈನ್ ಕೆಲಸದಿಂದ ರಸ್ತೆ ಕಾಮಗಾರಿಗೆ ಅಡಚಣೆ

ನೀರಿನ ಪೈಪ್ ಲೈನ್ ಕಾಮಗಾರಿ ಶೀಘ್ರವಾಗಿ ಮುಗಿಸಲು ಶಾಸಕಿ ಭಾಗೀರಥಿ ಮುರುಳ್ಯ ಸೂಚನೆ

ಬೆಳ್ಳಾರೆ ದರ್ಖಾಸ್ತು ರಸ್ತೆ ಅಗಲೀಕರಣ ಕಾಮಗಾರಿ ಕೆಲಸ ಭರದಿಂದ ಸಾಗುತ್ತಿದೆ.
ತಿಂಗಳ ಹಿಂದೆ ರಸ್ತೆ ಅಗಲೀಕರಣಕ್ಕೆ ಶಾಸಕಿ ಭಾಗೀರಥಿ ಮುರುಳ್ಯರವರು ಬೆಳ್ಳಾರೆ ಜಂಕ್ಷನ್ ನಲ್ಲಿ ಗುದ್ದಲಿ ಪೂಜೆ ನೆರವೇರಿಸಿದ್ದರು.
ಗುದ್ದಲಿ ಪೂಜೆ ನೆರವೇರಿಸಿದ ಕೆಲವೇ ದಿನಗಳಲ್ಲಿ ರಸ್ತೆ ಅಗಲೀಕರಣ ಕೆಲಸ ಪ್ರಾರಂಭಗೊಂಡಿತು.
ಆಗಲೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್ ಲೈನ್ ಕೆಲಸವು ಕೂಡಾ ಪ್ರಾರಂಭವಾಯಿತು.
ಆದರೆ ಪೈಪ್ ಕೆಲಸ ಇಲ್ಲಿಯವರೆಗೆ ಮುಗಿಯದ ಕಾರಣ ರಸ್ತೆ ಅಗಲೀಕರಣ,ಡಾಮರೀಕರಣಕ್ಕೆ ತೊಂದರೆಯಾಗಿದೆ.
ಕೆಲವು ಕಡೆಗಳಲ್ಲಿ ಅಲ್ಲಲ್ಲಿ ಪೈಪ್ ಲೈನ್ ಅಳವಡಿಸಿದ್ದು ರಸ್ತೆ ಬದಿ ಹೊಂಡಗಳು ನಿರ್ಮಾಣವಾಗಿದೆ.
ರಸ್ತೆ ಅಗೆಯುವ ಕಾರಣದಿಂದ ರಸ್ತೆ ಇಡೀ ಧೂಳುಮಯವಾಗಿದೆ.


ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ.
ಮತ್ತೊಂದು ಕಡೆ ರಸ್ತೆ ಅಗಲೀಕರಣ ಕಾಮಗಾರಿಗೆ ಇದರಿಂದ ತೊಂದರೆಯಾಗಿರುವುದಾಗಿ ತಿಳಿದು ಬಂದಿದೆ.ರಸ್ತೆಯಲ್ಲಿ ವಿಪರೀತ ಧೂಳು ಇರುವುದರಿಂದ ವಾಹನ ಸವಾರರಿಗೆ ತೊಂದರೆಯಾಗಿದೆ.

ಪೈಪ್ ಲೈನ್ ಕಾಮಗಾರಿಯಿಂದ ರಸ್ತೆ ಅಗಲೀಕರಣಕ್ಕೆ ತೊಡಕು

ರಸ್ತೆ ಅಗಲೀಕರಣ ಕಾಮಗಾರಿಗೆ ಪೈಪ್ ಲೈನ್ ಕಾಮಗಾರಿಯಿಂದ ತೊಂದರೆಯಾಗಿರುವುದಾಗಿ ಟಿ.ಆರ್.ಕನ್ಟ್ರಕ್ಷನ್ ನವರು ತಿಳಿಸಿದ್ದಾರೆ.
ಈ ಬಗ್ಗೆ ಶಾಸಕಿ ಭಾಗೀರಥಿ ಮುರುಳ್ಯರವರು ಪೈಪ್ ಲೈನ್ ಕಾಮಗಾರಿಯ ಕಾಂಟ್ರಾಕ್ಟರ್ ಗೆ ಬೆಳ್ಳಾರೆಯಿಂದ ದರ್ಖಾಸುವರೆಗೆ ಆದಷ್ಟು ಬೇಗ ಕೆಲಸ ಮುಗಿಸುವಂತೆ ಸೂಚಿಸಿರುವುದಾಗಿ ತಿಳಿದು ಬಂದಿದೆ.
ರಸ್ತೆ ಬದಿ ಮರಗಳು ಕೂಡ ಇರುವುದರಿಂದ ಅರಣ್ಯ ಇಲಾಖೆ ಸ್ಪಂದಿಸಬೇಕೆಂದು ಅವರು ತಿಳಿಸಿದ್ದಾರೆ.
ಕಲ್ಲೋಣಿಯಲ್ಲಿ ರಸ್ತೆ ಬದಿ ಮರವೊಂದು ಇರುವುದರಿಂದ ಅಲ್ಲಿ ದೊಡ್ಡ ಮೋರಿ ನಿರ್ಮಾಣ ಮಾಡಲು ತೊಡಕಾಗಿರುವುದಾಗಿ ಬೆಳ್ಳಾರೆ ಸಮೀಪ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಸ್.ಎನ್.ಮನ್ಮಥರವರಿಗೆ ಕಾಂಟ್ರಾಕ್ಟರ್ ಫೆ.15 ರಂದು ತಿಳಿಸಿದರು.


ಇದಕ್ಕೆ ಸ್ಪಂದಿಸಿದ ಎಸ್.ಎನ್.ಮನ್ಮಥರವರು ಪುತ್ತೂರಿನ ರೇಂಜರ್ ಗೆ ಫೋನ್ ಮುಖಾಂತರ ರಸ್ತೆಗೆ ತೊಡಕಾಗಿರುವ ಮರ ತೆರವು ಮಾಡುವಂತೆ ವಿನಂತಿಸಿದರು.
ಇದಕ್ಕೆ ಸಮ್ಮತಿ ಸೂಚಿಸಿದ ರೇಂಜರ್ ಅರಣ್ಯ ಇಲಾಖೆಯವರನ್ನು ಸ್ಥಳಕ್ಕೆ ಕಳುಹಿಸುವುದಾಗಿ ಭರವಸೆ ನೀಡಿದರೆನ್ನಲಾಗಿದೆ.
ಈ ಸಂದರ್ಭದಲ್ಲಿ ಮಹೇಶ ಜಬಳೆ,ಪದ್ಮನಾಭ ಬೀಡು,ಗೋಪಾಲಕೃಷ್ಣ ಚೆಮ್ನೂರು ಜತೆಗಿದ್ದರು.
ಮರಗಳ ತೆರವು ,ಪೈಪ್ ಲೈನ್ ಕೆಲಸ ಆದಷ್ಟು ಬೇಗ ಆದರೆ ಕೂಡಲೇ ರಸ್ತೆಗೆ ಜಲ್ಲಿ ಹಾಕಿ ಡಾಮರೀಕರಣ ಕೆಲಸ ಪ್ರಾರಂಭಿಸುವುದಾಗಿ ಕಾಂಟ್ರಾಕ್ಟರ್ ಅಬ್ದುಲ್ ಖಾದರ್ ಸುದ್ದಿಗೆ ತಿಳಿಸಿದ್ದಾರೆ.