ಮರ್ಕಂಜಕ್ಕೆ ಬರುವ ಬಸ್ಸನ್ನೇ ಮಡಪ್ಪಾಡಿಗೆ ಕಳುಹಿಸಿದ ಕ್ರಮ ಸರಿಯಲ್ಲ

0

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತೆ ತೊಂದರೆ – ಮರ್ಕಂಜ ಗ್ರಾಮಸ್ಥರಿಂದ ವಿರೋಧ

ಮರ್ಕಂಜದಿಂದ ಬೆಳಿಗ್ಗೆ ಹೊರಡುವ ಬಸ್ಸನ್ನೇ ಮಡಪ್ಪಾಡಿಗೆ ಕಳುಹಿಸಿದ ಕ್ರಮ ಸರಿಯಲ್ಲ ಎಂದು ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಭಾಗದ ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಈ ಭಾಗದ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿರುವ ಘಟನೆ ವರದಿಯಾಗಿದೆ.

ಈಗಾಗಲೇ ಮರ್ಕಂಜದಿಂದ ಬೆಳಿಗ್ಗೆ ಹೋಗುವ ಬಸ್ಸು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಂದ ತುಂಬಿ ಹೋಗುತ್ತಿದ್ದು, ಇದೇ ಬಸ್ಸು ಮಡಪ್ಪಾಡಿಯಿಂದ ಬರುವಂತಾದರೆ ಬಸ್ಸಿನಲ್ಲಿ ಹೋಗಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಬಹುದೆಂಬ ಆತಂಕ ವಿದ್ಯಾರ್ಥಿಗಳಿಗೆ ಎದುರಾಗಿದೆ.

ಹೀಗಾಗಿ ಮಡಪ್ಪಾಡಿಗೆ ಹೆಚ್ಚುವರಿ ಬಸ್ಸನ್ನು ನೀಡಬೇಕು ಅಥವಾ ಸಂಜೆ ಮರ್ಕಂಜಕ್ಕೆ ಬಂದು ಪುನಃ ಸುಳ್ಯಕ್ಕೆ ಹೋಗುವ ಬಸ್ಸನ್ನೇ ಮಡಪ್ಪಾಡಿ ಗೆ ಕಳುಹಿಸಬೇಕು ಎಂದು ಈ ಭಾಗದವರು ಒತ್ತಾಯಿಸಿದ್ದಾರೆ.

ಮರ್ಕಂಜದಿಂದ ಸುಳ್ಯಕ್ಕೆ ಹೋಗುವ ವಿದ್ಯಾರ್ಥಿಗಳಿಗೇ ಬಸ್ಸಿನ ವ್ಯವಸ್ಥೆ ಸಾಕಾಗುವುದಿಲ್ಲ. ಇನ್ನು ಇದೇ ಬಸ್ಸನ್ನು ಮಡಪ್ಪಾಡಿಗೆ ಕಳುಹಿಸಿದರೆ ಈ ಭಾಗದ ಮಕ್ಕಳು ಬಸ್ಸಿನ ಮೆಟ್ಟಿಲಲ್ಲಿ ನೇತಾಡಿಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗಬಹುದು. ಮತ್ತು ಬಸ್ಸು ಸಮಯಕ್ಕೆ ಸರಿಯಾಗಿ ಬಾರದೆ ಇದ್ದಾರೆ ವಿದ್ಯಾರ್ಥಿಗಳಿಗೆ ತೊಂದರೆಯಾಗಬಹುದೆಂಬ ಕಾರಣದಿಂದ ಇಂದು ಬೆಳಿಗ್ಗೆ ಮರ್ಕಂಜದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಗೋವಿಂದ ಅಳವುಪಾರೆ ಸೇರಿದಂತೆ ಮರ್ಕಂಜದ ವಿದ್ಯಾರ್ಥಿಗಳು ಮತ್ತು ಪೋಷಕರು ಹಾಗೂ ಗ್ರಾಮಸ್ಥರು ಸೇರಿದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ, ಊರಿನ ಮುಖಂಡ ಹರೀಶ್ ಕಂಜಿಪಿಲಿ ಯವರು, ಕೆ ಎಸ್ ಆರ್ ಟಿ ಸಿ ಅಧಿಕಾರಿಗಳಿಗೆ ಪರಿಸ್ಥಿಯ ಬಗ್ಗೆ ದೂರವಾಣಿ ಮೂಲಕ ವಿವರಿಸಿದರು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಇನ್ನೆರಡು ದಿನದಲ್ಲಿ ಬದಲಿ ವ್ಯವಸ್ಥೆ ಮಾಡುವ ಬಗ್ಗೆ ಹೇಳಿದರೆಂದು ತಿಳಿದು ಬಂದಿದೆ.

ಮಡಪ್ಪಾಡಿ ಭಾಗದಿಂದ ಸುಳ್ಯ ಮತ್ತು ಎಲಿಮಲೆಯ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಸರಕಾರಿ ಬಸ್ಸು ಬೇಕು ಎಂಬುದು ಮಡಪ್ಪಾಡಿ ಭಾಗದವರ ಬೇಡಿಕೆಯಾಗಿತ್ತು. ಈ ಬಗ್ಗೆ ಗ್ರಾಮಸಭೆಗಳಲ್ಲಿಯೂ ವಿಷಯ ಪ್ರಸ್ತಾಪವಾಗುತಿತ್ತು. ಮತ್ತು ಮರ್ಕಂಜ ಭಾಗಕ್ಕೂ ಹೆಚ್ಚುವರಿ ಸರಕಾರಿ ಬಸ್ಸು ಬೇಕೆಂಬ ಬೇಡಿಕೆಯೂ ಇತ್ತು. ಅಲ್ಲದೇ ಮಡಪ್ಪಾಡಿಗೆ ಹೆಚ್ಚುವರಿ ಬಸ್ಸು ಬೇಕೆಂದು ಇತ್ತೀಚೆಗೆ ನಡೆದ ಗ್ಯಾರಂಟಿ ಅನುಷ್ಠಾನ ಸಭೆಯಲ್ಲಿಯೂ ಒತ್ತಾಯಿಸಲಾಗಿತ್ತು.

ಇದರ ಪರಿಣಾಮ ಮರ್ಕಂಜದಿಂದ ಬೆಳಿಗ್ಗೆ ಹೊರಡುವ ಸರಕಾರಿ ಬಸ್ಸು, ಬೆಳಿಗ್ಗೆ ಮಡಪ್ಪಾಡಿಗೆ ಹೋಗಿ ಅಲ್ಲಿಂದ ಬೆಳಿಗ್ಗೆ 7 ಗಂಟೆಗೆ ಹೊರಟು ಮರ್ಕಂಜ ದೊಡ್ಡತೋಟ ಮಾರ್ಗವಾಗಿ ಸುಳ್ಯಕ್ಕೆ ಸಂಚರಿಸಲು ಆದೇಶಿಸಲಾಗಿದೆ. ನಿನ್ನೆ ಯಿಂದ (ಮಾ.3) ಬಸ್ಸು ಆರಂಭವಾಗಿದೆ.