ಪರ್ಯಾಯ ಪೈಪು ಲೈನ್ ಅಳವಡಿಸಿ ಸಂಪರ್ಕ ಕಲ್ಪಿಸುವ ತೀರ್ಮಾನ
ಆಲೆಟ್ಟಿ ಪಂಚಾಯತ್ ವ್ಯಾಪ್ತಿಯ ಎಲಿಕ್ಕಳ ಎಂಬಲ್ಲಿರುವ ಬಾವಿ ಮತ್ತು ಕೊಳವೆ ಬಾವಿಯಿಂದ ಸ್ಥಳೀಯ ಪರಿಸರದಲ್ಲಿರುವ ಮನೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿದ್ದು ಇದರಿಂದ ಬೇರೆ ವಾರ್ಡಿಗೆ ನೀರಿನ ಸಂಪರ್ಕ ನೀಡುವ ಕಾರ್ಯಕ್ಕೆ ಮುಂದಾದ ಪಂಚಾಯತ್ ನವರ ಕೆಲಸಕ್ಕೆ ಸ್ಥಳೀಯ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ ಘಟನೆ ವರದಿಯಾಗಿದೆ.
ಪ್ರಸ್ತುತ ನೀರಿನ ಸಂಪರ್ಕ ಇರುವ ಮನೆಗಳಿಗೆ ಅಗತ್ಯ ಪ್ರಮಾಣದಷ್ಟೂ ನೀರು ಇರದಿರುವ ಕಾರಣ ಅಲ್ಲಿಯೇ ಹತ್ತಿರದಲ್ಲಿ ಇರುವ ಕೊಳವೆ ಬಾವಿಯಿಂದ ಸ್ವಲ್ಪ ಮಟ್ಟಿಗೆ ಸಿಗುವ ನೀರನ್ನು ಬಾವಿಗೆ ಇಳಿಸಿ ಬೇಸಿಗೆಕಾಲದಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಅಲ್ಲದೆ ಎಪ್ರಿಲ್, ಮೇ ತಿಂಗಳ ಸಮಯದಲ್ಲಿ ನೀರಿನ ಪ್ರಮಾಣ ಬಹಳ ಕಡಿಮೆಯಾಗಿ ತಳಮಟ್ಟದಲ್ಲಿರುವುದರಿಂದ ಪರಿಸರದ ಮನೆಗಳಿಗೆ ಬೇಕಾದಷ್ಟು ನೀರು ಸರಬರಾಜು ಮಾಡಲಾಗುತ್ತಿಲ್ಲ. ಈ ಪರಿಸ್ಥಿತಿ ಇರುವಾಗ ಮತ್ತೆ ಇದೇ ಬಾವಿಯಿಂದ ಬೇರೆ ಭಾಗದ ಮತ್ತಷ್ಟು ಮನೆಗಳಿಗೆ ಪೈಪು ಲೈನ್ ಅಳವಡಿಸಿ ನೀರು ಹಾಯಿಸಿದರೆ ಮತ್ತೆ ಈ ಪರಿಸರದಲ್ಲಿ ನೀರಿನ ಬರ ಬರುವುದಂತು ಖಚಿತವಾಗಿದೆ. ಬೇರೆ ಕಡೆಗೆ ನೀರು ಸಂಪರ್ಕಕ್ಕೆ ಬೇಕಾದ ವ್ಯವಸ್ಥೆಯನ್ನು ಪ್ರತ್ಯೇಕ ವಾಗಿ ಕಲ್ಪಿಸಿ ಕೊಡುವಂತೆ ಆಗ್ರಹಿಸಿ ಪಂಚಾಯತ್ ನವರ ಪೈಪು ಲೈನ್ ಅಳವಡಿಸುವ ಕಾರ್ಯಕ್ಕೆ ಸ್ಥಳೀಯರು ವಿರೋಧಿಸಿದರು.
ಈವಿಚಾರವಾಗಿಪಂಚಾಯತ್ ನವರಲ್ಲಿ ಸ್ಥಳೀಯ ರ ಪರವಾಗಿ ವೆಂಕಟ್ರಮಣ ಭಟ್ ಎಲಿಕ್ಕಳ ರವರು ಸರಿಯಾದ ಮಾಹಿತಿ ಕೇಳಿದರಲ್ಲದೆ ದಾಖಲೆ ಪತ್ರ ನೀಡುವಂತೆ ಒತ್ತಾಯಿಸಿದರು.









ಈ ಸಂದರ್ಭದಲ್ಲಿ
ಸ್ಥಳಕ್ಕೆ ಆಗಮಿಸಿದ ಇಂಜಿನಿಯರ್ ಮಣಿಕಂಠ ರವರು ಹಾಗೂ ತಾ.ಪಂ.ಇ.ಒ
ರಾಜಣ್ಣ ರವರೊಂದಿಗೆ ಮಾತನಾಡಿದ ಸ್ಥಳೀಯರು ನಿಮ್ಮ ಯೋಜನೆಯಿಂದ ಮುಂಬರುವ ದಿನಗಳಲ್ಲಿ ಇಲ್ಲಿರುವ ಎಲ್ಲಾ ಮನೆಗಳಿಗೆ ನೀರಿಲ್ಲದಂತಾಗುವುದು. ಬದಲಾಗಿ ಬೇರೆ ವಾರ್ಡಿಗೆ ಪ್ರತ್ಯೇಕ ಕೊಳವೆ ಬಾವಿ ಕೊರೆಯಿಸಿ ನೀರಿನ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.
ಅಂತಿಮವಾಗಿ ಸ್ಥಳೀಯರ ಒತ್ತಾಯದ ಮೇರೆಗೆ ಇ.ಒ ಮತ್ತು ಇಂಜಿನಿಯರ್ ರವರು ಇದೇ ಕೊಳವೆ ಬಾವಿಗೆ ಸಂಪರ್ಕ ಕೊಡುವುದಿಲ್ಲ ಕೇವಲ ಪೈಪ್ ಲೈನ್ ಮಾತ್ರ ಅಳವಡಿಸುತ್ತೇವೆ. ಈಗಾಗಲೇ ಆಲೆಟ್ಟಿ ಪ್ರೌಢ ಶಾಲೆಯ ಬಳಿಯಲ್ಲಿರುವ ಟ್ಯಾಂಕಿಗೆ ಪಯಸ್ವಿನಿ ನದಿಯಿಂದ ಪೂರೈಕೆ ಆಗುವ ನೀರಿನ ಸಂಪರ್ಕಕ್ಕೆ ಹೊಸದಾಗಿ ಅಳವಡಿಸುತ್ತಿರುವ
ಪೈಪ್ ಲೈನ್ ಅಳವಡಿಸಿ ಸಂಪರ್ಕಿಸುವುದಾಗಿ ತಿಳಿಸಿದರು.ಇದಕ್ಕೆ ಎಲಿಕ್ಕಳ ಪರಿಸರದ ನಿವಾಸಿಗಳು ಸಮ್ಮತಿ ಸೂಚಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.










