ಪುತ್ತೂರು ವಿದ್ಯುತ್ ಸ್ಥಾವರದಿಂದ ಸುಳ್ಯ ಉಪವಿಭಾಗಕ್ಕೆ ಬರುವ 33 ಕೆ.ವಿ. ಹಳೆಯ ವಿದ್ಯುತ್ ಮಾರ್ಗವನ್ನು ಸುಸ್ಥಿತಿಯಲ್ಲಿ ಇಡುವಂತೆ ಒತ್ತಾಯಿಸಿ ಸುಳ್ಯ ಬಿಜೆಪಿ ಮಂಡಲ ಸಮಿತಿಯಿಂದ ಸುಳ್ಯ ಮೆಸ್ಕಾಂಗೆ ಮನವಿ ಸಲ್ಲಿಸಲಾಯಿತು.
ಪುತ್ತೂರು ವಿದ್ಯುತ್ ಸ್ಥಾವರದಿಂದ ಸುಳ್ಯ ಉಪವಿಭಾಗಕ್ಕೆ ಬರುವ 33 ಕೆ.ವಿ.ಯ ಹೊಸ ವಿದ್ಯುತ್ ಮಾರ್ಗದಲ್ಲಿ ಪ್ರಸ್ತುತ ವಿದ್ಯುತ್ ಸರಬರಾಜು ಆಗುತ್ತಿದೆ. ಈ ವಿದ್ಯುತ್ ಮಾರ್ಗವು ಆರಣ್ಯ ಪ್ರದೇಶದಲ್ಲಿ ಹಾದು ಬರುವುದರಿಂದ ಆಗಾಗ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಈ ಹಿಂದೆ ಹೊಸ ವಿದ್ಯುತ್ ಮಾರ್ಗ ಎಳೆಯುವ ಸಂದರ್ಭದಲ್ಲಿ ಹಳೆಯ ವಿದ್ಯುತ್ ಮಾರ್ಗವನ್ನು ಸುಸ್ಥಿತಿಯಲ್ಲಿ ಇಡುವುದಾಗಿ ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದರೂ, ಹಳೆಯ ವಿದ್ಯುತ್ ಮಾರ್ಗವನ್ನು ಯಾವುದೇ ನಿರ್ವಹಣೆ ಮಾಡದೇ ಇದ್ದು, ಈ ವಿದ್ಯುತ್ ಮಾರ್ಗವನ್ನು ಬದಲೀ ಮಾರ್ಗವಾಗಿ ಬಳಕೆಯಲ್ಲಿ ಇಟ್ಟಿರುವುದಿಲ್ಲ. ಸುಳ್ಯಕ್ಕೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಈ ಎರಡೂ ಮಾರ್ಗಗಳನ್ನು ಬಳಕೆಯಲ್ಲಿ ಇಡುವುದು ಅತ್ಯವಶ್ಯವಾಗಿರುವುದರಿಂದ ಈ ಕೂಡಲೇ ಹಳೆಯ ವಿದ್ಯುತ್ ಮಾರ್ಗವನ್ನು ಸುಸ್ಥಿತಿಯಲ್ಲಿ ಇಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಸುಳ್ಯದಲ್ಲಿ ಈಗಾಗಲೇ ಅನಿಯಮಿತ ಲೋಡ್ ಶೆಡ್ಡಿಂಗ್ ಕಾರಣದಿಂದ, ಕೃಷಿ ಹಾಗೂ ಕುಡಿಯುವ ನೀರಿನ ಸರಬರಾಜಿಗೆ ತೀವ್ರ ತೊಂದರೆ ಉಂಟಾಗುತ್ತಿದ್ದು, ಇದನ್ನು ಕೂಡಲೇ ಸರಿಪಡಿಸಿ ನಿಯಮಿತ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳುವರೇ ಈ ಮೂಲಕ ಆಗ್ರಹಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ಸಲ್ಲಿಕೆ ಸಂದರ್ಭ ಪ್ರಮುಖರಾದ ಹರೀಶ್ ಕಂಜಿಪಿಲಿ, ವಿನಯ ಕುಮಾರ್ ಕಂದಡ್ಕ, ಸುಭೋದ್ ಶೆಟ್ಟಿ ಮೇನಾಲ, ವಿಕ್ರಂ ಅಡ್ಪಂಗಾಯ, ಹೇಮಂತ್ ಕಂದಡ್ಕ, ಚಂದ್ರಶೇಖರ ಕೇರ್ಪಳ ಉಪಸ್ಥಿತರಿದ್ದರು