ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ಅಧ್ಯಕ್ಷರಾದ ಎಸ್.ಚಂದ್ರಶೇಖರ್ ಅಧಿಕೃತ ಭೇಟಿ -ಸನ್ಮಾನ
ಸಹಕಾರಿ ಕ್ಷೇತ್ರದಲ್ಲಿ ದುಡಿದ ಚಂದ್ರ ಕೋಲ್ಚಾರ್ ಸಮಾಜ ಮಾನ್ಯರು; ಸಂಜೀವ ಮಠಂದೂರು
ಸಾಧನೆ ಮಾಡಿದವರಿಗೆ ಸನ್ಮಾನ ಸಮಾಜಕ್ಕೆ ಪ್ರೇರಣೆ; ಕೆ.ಆರ್.ಜಿ.
ಯಾವುದೇ ಜವಾಬ್ದಾರಿ ಕೊಟ್ಟರೂ ಯಶಸ್ವಿಯಾಗಿ ನಿರ್ವಹಿಸುವವರು ಚಂದ್ರ ಕೋಲ್ಚಾರ್; ಭಾಗೀರಥಿ ಮುರುಳ್ಯ

ಸಹಕಾರಿ ರತ್ನ ಚಂದ್ರ ಕೋಲ್ಚಾರ್ ಅಭಿನಂದನಾ ಸಮಿತಿ ವತಿಯಿಂದ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ
ನಿಯಮಿತ ಬೆಂಗಳೂರು ಇದರ ನೂತನ ನಿರ್ದೇಶಕರಾಗಿ ಆಯ್ಕೆಯಾಗಿರುವ ಚಂದ್ರ ಕೋಲ್ಟಾರ್ ಅವರಿಗೆ ಅಭಿನಂದನಾ ಸಮಾರಂಭ ಮತ್ತು ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ಇದರ ನೂತನ ಅಧ್ಯಕ್ಷ ಎಸ್.ಚಂದ್ರಶೇಖರ ಮೈಸೂರು ಇವರ ಅಧಿಕೃತ ಭೇಟಿ ಹಾಗೂ ಸನ್ಮಾನ ಕಾರ್ಯಕ್ರಮ ಮಾ.15 ರಂದು ಲಯನ್ಸ್ ಸೇವಾ ಸದನದಲ್ಲಿ ನಡೆಯಿತು.

ಸಮಾರಂಭವನ್ನು ಉದ್ಘಾಟಿಸಿದ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಲದ ನಿರ್ದೇಶಕರಾದ ಎಸ್.ಚಂದ್ರಶೇಖರ್ ರವರು ಮಾತನಾಡಿ ನಾನು ಅಧ್ಯಕ್ಷನಾಗುವಲ್ಲಿ ಚಂದ್ರ ಕೋಲ್ಚಾರ್ ರವರ ಸಹಕಾರವೇ ಕಾರಣ. ಚಂದ್ರಣ್ಣ ಮತ್ತು ನಾನು ಸೇರಿ ಸಹಕಾರಿ ಸಂಸ್ಥೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇವೆ ಎಂದರು.
ಸನ್ಮಾನ ನೆರವೇರಿಸಿ ಮಾತನಾಡಿದ ಪುತ್ತೂರು ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರುರವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೊಡ್ಡ ಕೊಡುಗೆಗಳನ್ನು ನೀಡಿದ ಕ್ಷೇತ್ರ ಸಹಕಾರಿ ಕ್ಷೇತ್ರ. ಸಹಕಾರಿ ಕ್ಷೇತ್ರದಲ್ಲಿ ದುಡಿದವರು ಸಮಾಜ ಮಾನ್ಯರಾಗಿ ಗೌರವ ಪಡೆಯುತ್ತಾರೆ.ಅದರಂತೆ ನೇರ ನಡೆನುಡಿಯ ಚಂದ್ರ ಕೋಲ್ಚಾರ್ ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತಾರೆ ಎಂದರು.

ಅಭಿನಂದನಾ ಭಾಷಣ ಮಾಡಿದ ವಿಶ್ರಾಂತ ಪ್ರಾಂಶುಪಾಲ ಕೆ.ಆರ್.ಗಂಗಾಧರ್ ಮಾತನಾಡಿ ಸಾಧನೆ ಮಾಡಿದವರನ್ನು ಸನ್ಮಾನಿಸಿದಾಗ ಅದು ಸಮಾಜಕ್ಕೆ
ಪ್ರೇರಣೆಯಾಗುತ್ತದೆ.ಚಂದ್ರ ಕೋಲ್ಚಾರ್ ರವರು ನೋವನ್ನು ನುಂಗಿ ಸ್ಫೂರ್ತಿಯುತ ಜೀವನ ನಡೆಸಿದವರು. ಎಲ್ಲಾ ಸವಾಲುಗಳನ್ನು ಸ್ವೀಕರಿಸಿ ಯಶಸ್ಸನ್ನು ಕಾಣುವುದರೊಂದಿಗೆ ಸಮಾಜ ಸೇವೆಯಲ್ಲಿ ದೇವರನ್ನು ಕಂಡವರು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ಯಾವುದೇ ಜವಾಬ್ದಾರಿಯನ್ನು ಕೊಟ್ಟರೂ ಯಶಸ್ವಿಯಾಗಿ ನಿರ್ವಹಿಸುವವರು ಚಂದ್ರ ಕೋಲ್ಚಾರ್ ರವರು.ಜೇನು ಸಹಕಾರಿ ಸಂಘವನ್ನು ಮುನ್ನಡೆಸಿ ಬೇರೆ ಸಹಕಾರಿ ಸಂಘಕ್ಕಿಂತ ಕಡಿಮೆಯಿಲ್ಲ ಎಂದು ಸಾಧಿಸಿತೋರಿಸಿದ್ದಾರೆ ಎಂದು ಹೇಳಿದರು.
ಸಭಾಧ್ಯಕ್ಷತೆ ವಹಿಸಿದ ಸಹಕಾರಿ ಧುರೀಣ ಜಾಕೆ ಮಾಧವ ಗೌಡ ಮಾತನಾಡಿ ಈ ಸನ್ಮಾನ ಕಾರ್ಯಕ್ರಮದಿಂದ ಚಂದ್ರ ಕೋಲ್ಚಾರ್ ರವರಿಗೆ ಸ್ಪೂರ್ತಿ ತುಂಬುವ ಕೆಲಸ ಆಗಿದೆ. ವೃತ್ತಿ ಧರ್ಮವನ್ನು ಅರಿತು ಕೆಲಸ ಮಾಡಿದಾಗ ಜನರ ಆಶೀರ್ವಾದ ಸಿಗುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಹಕಾರಿಯ ಕ್ಷೇತ್ರದಲ್ಲಿ ಪ್ರಾಮಾಣಿಕ ಹಾಗೂ ಕ್ರಿಯಾಶೀಲರಾಗಿ ಸೇವೆಗೈದ ಐವರ್ನಾಡಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೀನಪ್ಪ ಗೌಡ ಕೆ, ಮಹಿಳೆಯರ ವಿವಿಧೋದ್ದೇಶ ಸಹಕಾರಿ ಸಂಘ ಬೆಳ್ಳಾರೆ ಇದರ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪ್ರಕೃತ ಅಧ್ಯಕ್ಷರಾಗಿ ಸಂಸ್ಥೆಯನ್ನು ಮುನ್ನಡೆಸುತ್ತಿರುವ ರಾಜೀವಿ ಆರ್ ರೈ ಬೆಳ್ಳಾರೆ, ಮಂಡಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಅನಂತಕೃಷ್ಣ ಮತ್ತು ಸುಳ್ಯ ತಾಲೂಕು ಪಿಗ್ಮಿ ಸಂಗ್ರಾಹಗಾರರ ಸಂಘದ ಉಪಾಧ್ಯಕ್ಷರು, ಕ್ರಿಯಾಶೀಲರಾಗಿರುವ ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪಿಗ್ಮಿ ಸಂಗ್ರಾಹಕ ವಸಂತ ಬೋರ್ಕರ್ ಅವರನ್ನು ಹಾಗೂ ಕರ್ನಾಟಕ ರಾಜ್ಯ ರೈತ ಉತ್ಪಾದಕ ಸಹಕಾರಿ ಸಂಘ ಬೆಂಗಳೂರು ಇದರ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾಗಿರುವ ಸುಳ್ಯ ರೈತ ಉತ್ಪಾದಕರ ಸಂಘದ ಅಧ್ಯಕ್ಷರಾದ ಕೆ ವೀರಪ್ಪ ಗೌಡ ಕಣ್ಕಲ್ ಮತ್ತು ನೂತನ ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಎಂ.ಮುಸ್ತಾಪರನ್ನು ಸನ್ಮಾನಿಸಲಾಯಿತು.ರಾಜ್ಯಾಧ್ಯಕ್ಷ ಚಂದ್ರಶೇಖರ್ ಎಸ್.ರವರು ಸನ್ಮಾನಿಸಿದರು. ಸಮಾರಂಭದಲ್ಲಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ.ನೀರಬಿದಿರೆ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಾಫ, ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿಕಟಪೂರ್ವಾಧ್ಯಕ್ಷ ಪಿ.ಸಿ.ಜಯರಾಮ, ರಾಜ್ಯ ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ
ಎ.ವಿ.ತೀರ್ಥರಾಮ,ಸುಳ್ಯ ಕ್ರೈಸ್ತ ಅಲ್ಪಸಂಖ್ಯಾತರ ಸಹಕಾರಿ ಸಂಘದ ಅಧ್ಯಕ್ಷ ಬಿಟ್ಟಿ ಬಿ. ನೆಡುನಿಲಂ ಮಾತನಾಡಿದರು.

ಸುಳ್ಯ ವೆಂಕಟರಮಣ ಸೊಸೈಟಿ ಅಧ್ಯಕ್ಷ ಕೆ.ಸಿ.ಸದಾನಂದ,
ಮಂಗಳೂರು ಗೌಡ ಸಂಘದ ಅಧ್ಯಕ್ಷ ಲೋಕಯ್ಯ ಗೌಡ ಕೆ. ,ಸುಳ್ಯ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ ಎಸ್ ಗಂಗಾಧರ ಅತಿಥಿಗಳಾಗಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಅಭಿನಂದನಾ ಸಮಿತಿ ಅಧ್ಯಕ್ಷ ಎಸ್.ಆರ್.ಸೂರಯ್ಯ ಸ್ವಾಗತಿಸಿದರು.ಸಂಚಾಲಕ ದಿನೇಶ್ ಮಡಪ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಉಪಾಧ್ಯಕ್ಷರಾದ ಚಂದ್ರಶೇಖರ ಪೇರಾಲು, ತಿಮ್ಮಯ್ಯ ಪಿಂಡಿಮನೆ ಸನ್ಮಾನ ಪತ್ರ ವಾಚಿಸಿದರು.ಕೋಶಾಧಿಕಾರಿ ಕೆ.ಟಿ.ವಿಶ್ವನಾಥ ವಂದಿಸಿದರು. ಪ್ರಧಾನ ಕಾರ್ಯದರ್ಶಿ ದಿನೇಶ್ ಕೋಲ್ಚಾರ್, ಜತೆ ಕಾರ್ಯದರ್ಶಿ ಸುಪ್ರೀತ್ ಮೋಂಟಡ್ಕ ಸಹಕರಿಸಿದರು. ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮ ಆರಂಭಕ್ಕೆ ಮೊದಲು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಮಾರಂಭದ ಕೊನೆಯಲ್ಲಿ ಚಂದ್ರ ಕೋಲ್ಚಾರ್ ಅಭಿಮಾನಿಗಳು, ಮಿತ್ರರು ಹಾರಾರ್ಪಣೆ, ಪುಷ್ಪಗುಚ್ಚ ನೀಡಿ ಅಭಿನಂದಿಸಿದರು.
