ಸ್ನೇಹ ಶಿಕ್ಷಣ ಸಂಸ್ಥೆಗೆ ಪುತ್ತೂರು ವಿದ್ಯಾವರ್ಧಕ ಸಂಘದ ಗೌರವ

0

ಪುತ್ತೂರಿನ ಪ್ರತಿಷ್ಟಿತ ವಿವೇಕಾನಂದ ಕಾಲೇಜಿನ ಷಷ್ಠ್ಯಬ್ದ ಸಮಾರಂಭ ಮತ್ತು ಸ್ನಾತಕೋತ್ತರ ಕೇಂದ್ರದ ದಶಮಾನೋತ್ಸವದ ಅಂಗವಾಗಿ ಜರಗಿದ ಸಂಭ್ರಮಾಚರಣೆಯ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಈ ಸಮಾರಂಭದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಶಿಕ್ಷಣದ ಕೊಡುಗೆಗಾಗಿ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿರುವ ಡಾ. ಚಂದ್ರಶೇಖರ ದಾಮ್ಲೆ ಮತ್ತು ಜಯಲಕ್ಷ್ಮಿ ದಾಮ್ಲೆ ದಂಪತಿಗಳನ್ನು ಸಮ್ಮಾನಿಸಲಾಯಿತು. ಮಂಗಳೂರು ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ಟರು ಸನ್ಮಾನವನ್ನು ನೆರವೇರಿಸಿದರು.

ಇದೇ ಸಮಾರಂಭದಲ್ಲಿ ನ್ಯಾಯವಾದಿ ಎಂ.ರಾಮಮೋಹನ ರಾವ್, ಸಾಮಾಜಿಕ ಹೋರಾಟಗಾರ ಏತಡ್ಕದದ ಡಾ. ಮೋಹನ್ ಕುಮಾರ್, ಬಿಂದು ಜೀರಾ ಪ್ರೋಡಾಕ್ಟ್ಸ್ ನ ಸತ್ಯಶಂಕರ್, ಜನಪದ ವಿದ್ವಾಂಸ ಡಾ. ರವೀಶ್ ಪಡುಮಲೆ, ಕೃಷಿ ತಜ್ಞ ದೇವಿಪ್ರಸಾದ್ ಕಡಮಜೆ, ಮಳೆ ಮಾಹಿತಿ ತಜ್ಞ ಪಿ.ಜಿ.ಎಸ್.ಎನ್. ಪ್ರಸಾದ್ ಹಾಗೂ ಯಕ್ಷಗಾನ ಶಿಕ್ಷಕ ಗೋವಿಂದ ನಾಯಕ್ ಪಾಲೆಚ್ಚಾರು ಇವರನ್ನೂ ಸಮ್ಮಾನಿಸಲಾಯಿತು.

ಈ ಸಮಾರಂಭದಲ್ಲಿ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್, ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ, ಸಂಚಾಲಕ ಮುರಳೀಕೃಷ್ಣ ಕರ್.ಎನ್. ಪ್ರಾಂಶುಪಾಲ ವಿ.ಜಿ.ಭಟ್ ಮುಂತಾದವರು ಉಪಸ್ಥಿತರಿದ್ದರು.