ಆಮಂತ್ರಣ ಪತ್ರ ಬಿಡುಗಡೆ – ಉಪ ಸಮಿತಿ ರಚನೆ
ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೋತ್ಸವದ ಕುರಿತು ಪೂರ್ವಭಾವಿ ಸಭೆ, ಆಮಂತ್ರಣ ಪತ್ರ ಬಿಡುಗಡೆ ಹಾಗೂ ಉಪ ಸಮಿತಿಗಳ ರಚನೆ ಮಾ. 29 ರಂದು ದೇವಸ್ಥಾನದ ಅಕ್ಷಯ ಸಭಾಭವನದಲ್ಲಿ ನಡೆಯಿತು.

ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪಿ. ಬಿ. ದಿವಾಕರ ರೈ ಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯು. ಕೆ. ಕೇಶವ ಕೊಳಲುಮೂಲೆ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು ವೇದಿಕೆಯಲ್ಲಿದ್ದರು.
ದೇವಸ್ಥಾನದ ಮೆನೇಜರ್ ಆನಂದ ಕಲ್ಲಗದ್ದೆ ಕಾರ್ಯಕ್ರಮ ನಿರ್ವಹಿಸಿದರು.

ಜಾತ್ರೋತ್ಸವ ಸಮಿತಿಗೆ ಪೂರಕವಾಗಿ ಹಲವು ಉಪಸಮಿತಿಗಳನ್ನು ರಚಿಸಲಾಯಿತು. ಸಂಪಾಜೆ, ಆಲೆಟ್ಟಿ, ಆರಂತೋಡು, ಉಬರಡ್ಕ, ಮರ್ಕಂಜ ಹಾಗೂ ನೆರೆಯ ಗ್ರಾಮಗಳಲ್ಲಿ ಹೆಚ್ಚಿನ ಹಸಿರು ವಾಣಿ ಸಂಗ್ರಹಿಸಲು ಆಯಾ ಗ್ರಾಮದ ಬೈಲುವಾರು ಸಭೆ ಕರೆದು ತಿಳಿಸುವುದು ಹಾಗೂ ಆಮಂತ್ರಣ ಪತ್ರಿಕೆ ಹಂಚುವ ಬಗ್ಗೆ ಚರ್ಚಿಸಲಾಯಿತು. ಅನ್ನದಾನ ಸೇವೆಗೆ ದಾನಿಗಳನ್ನು ಗುರುತಿಸುವ ಕುರಿತು ಸಂತೋಷ್ ಕುತ್ತಮೊಟ್ಟೆ ತಿಳಿಸಿದರು.



ಜಾತ್ರೋತ್ಸವದ 4 ದಿನ ಹೊರಗಿನ ತಂಡಗಳಿಂದ ಹಾಗೂ 1 ದಿನ ಸ್ಥಳೀಯ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಬಜೆಟ್ ನೋಡಿಕೊಂಡು ತಂಡಗಳನ್ನು ಕರೆಸುವ ಕುರಿತು ಸಂತೋಷ್ ಕುತ್ತಮೊಟ್ಟೆ ವಿವರಿಸಿದರು. ಪಾರ್ಕಿಂಗ್ ವ್ಯವಸ್ಥೆಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ವರ್ಷ ಮಿತ್ತೂರು ನಾಯರ್ ಭಂಡಾರ ಬರುವುದರಿಂದ ಬರುವ ದಾರಿಯಲ್ಲಿ ಅಲಂಕಾರ ಹಾಗೂ ಆತಿಥ್ಯ ಮಾಡುವ ಕುರಿತು ಚರ್ಚಿಸಲಾಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಮಾಜಿ ಸದಸ್ಯರು, ಸ್ಥಳೀಯ ವಿವಿಧ ಭಜನಾ ಮಂಡಳಿಯ ಪ್ರಮುಖರು, ಸೀಮೆಯ ಭಕ್ತಾಧಿಗಳು ಉಪಸ್ಥಿತರಿದ್ದರು.