
ಕರ್ನಾಟಕ ರಾಜ್ಯ ಪಂಚ ಗ್ಯಾರಂಟಿ ಯೋಜನೆಗಳ ಸುಳ್ಯ ತಾಲೂಕು ಸಮಿತಿ ವತಿಯಿಂದ ಫಲಾನುಭವಿಗಳ ಅರ್ಜಿ ನೋಂದಾವಣೆಗೆ ಬಾಕಿ ಹಾಗೂ ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ ಏ. ೨ ರಂದು ಸುಳ್ಯ ನಗರ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿಯವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರವು ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ರಾಜ್ಯದ ಜನತೆಗೆ ನೀಡಿರುವ ಪಂಚ ಗ್ಯಾರಂಟಿ ಯೋಜನೆ ಬಡವರ ಪಾಲಿಗೆ ಆಶಾದಾಯಕವಾಗಿದೆ. ಆದ್ದರಿಂದ ಈ ಯೋಜನೆಗಳನ್ನು ಎಲ್ಲರೂ ಸರಿ ಸಮಾನವಾಗಿ ಪಡೆದುಕೊಳ್ಳಬೇಕು ಮತ್ತು ಅದರಿಂದ ವಂಚಿತರಾದವರಿಗೆ ಜಿಲ್ಲಾ ಮತ್ತು ತಾಲೂಕು ಸಮಿತಿ ವತಿಯಿಂದ ಪ್ರತಿ ಗ್ರಾಮದಲ್ಲಿ ಯೋಜನಾ ಶಿಬಿರವನ್ನು ಆಯೋಜಿಸುವ ಮೂಲಕ ಪರಿಪೂರ್ಣವಾಗಿ ಫಲಾನುಭವಿಗಳ ಬಳಿ ಮುಟ್ಟುವಂತೆ ಕಾರ್ಯ ಪ್ರವೃತ್ತಿ ಮಾಡುತ್ತಿದೆ.

ಇದೇ ನಿಟ್ಟಿನಲ್ಲಿ ಸುಳ್ಯ ನಗರದ ಜನತೆಗೆ ಈ ಕಾರ್ಯಕ್ರಮ ಮಾಡುವ ಮೂಲಕ ಅವಕಾಶವನ್ನು ತಾಲೂಕು ಸಮಿತಿ ವತಿಯಿಂದ ಕಲ್ಪಿಸಲಾಗಿದೆ. ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವ ತಾಲೂಕು ಸಮಿತಿಗೂ ಮತ್ತು ಇದನ್ನು ಆಯೋಜಿಸಲು ಸಹಕಾರ ನೀಡಿದ ನಗರ ಪಂಚಾಯತಿನ ಮುಖ್ಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೂ ಅಭಿನಂದನೆಯನ್ನು ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಸಮಿತಿಯ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಅವರು ವಹಿಸಿದ್ದರು. ವೇದಿಕೆಯಲ್ಲಿ ಸುಡಾ ಅಧ್ಯಕ್ಷರಾದ ಕೆ ಎಂ ಮುಸ್ತಫ ಜನತಾ, ನಗರ ಪಂಚಾಯತ್ ಸದಸ್ಯರಾದ ಎಂ ವೆಂಕಪ್ಪ ಗೌಡ, ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರುಗಳಾದ ಭವಾನಿ ಶಂಕರ್ ಕಲ್ಮಡ್ಕ, ಅಬ್ದುಲ್ ಲತೀಫ್ ಅಡ್ಕಾರ್, ನ ಪಂ ಸದಸ್ಯ ಶರೀಫ್ ಕಂಠಿ, ಸಿ ಡಿ ಪಿ ಓ ಶೈಲಜಾ ಮೊದಲಾದವರು ಉಪಸ್ಥಿತರಿದ್ದರು.



ನಗರ ಪಂಚಾಯತ್ ಸದಸ್ಯರುಗಳಾದ ದೀರಾ ಕ್ರಾಸ್ತಾ ನಾಮ ನಿರ್ದೇಶಕ ಸದಸ್ಯರುಗಳಾದ ಸಿದ್ದೀಕ್ ಕೊಕ್ಕೋ, ರಾಜು ಪಂಡಿತ್ ಭಾಗವಹಿಸಿದ್ದರು.
ಶಿಬಿರದಲ್ಲಿ ಗೃಹಲಕ್ಷ್ಮಿಯೋಜನೆ, ಶಕ್ತಿ ಯೋಜನೆ, ಯುವನಿಧಿ ಅನ್ನಭಾಗ್ಯ, ಗೃಹ ಜ್ಯೋತಿಗೆ ಸಂಬಂಧಪಟ್ಟ ಸುಳ್ಯ ತಾಲೂಕಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ನಗರ ವ್ಯಾಪ್ತಿಯ ನೂರಾರು ಫಲಾನುಭವಿಗಳು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
ನಗರ ಪಂಚಾಯತ್ ಮುಖ್ಯ ಅಧಿಕಾರಿ ಸುಧಾಕರ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಗಣ್ಯರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.