ಬಿಜೆಪಿ ವತಿಯಿಂದ ಜುಲೈ 14 ರಂದು ಸುಳ್ಯದಲ್ಲಿ ಪ್ರತಿಭಟನಾ ಜನಾಕ್ರೋಶ ಸಭೆ

0

ಕೆಂಪುಕಲ್ಲು ಮತ್ತು ಮರಳು ಗಣಿಗಾರಿಕೆಯ ನಿರ್ಬಂಧದಿಂದ ಜನಸಾಮಾನ್ಯರಿಗೂ ಸಮಸ್ಯೆ

ಶಾಸಕಿ ಕು.ಭಾಗೀರಥಿ ಮುರುಳ್ಯರವರಿಂದ ಪತ್ರಿಕಾಗೋಷ್ಠಿ

ಜಿಲ್ಲೆಯಲ್ಲಿ ಕೆಂಪುಕಲ್ಲು ಮತ್ತು ಮರಳು ಗಣಿಗಾರಿಕೆ ಹಾಗೂ ಸಾಗಾಟದ ಬಗ್ಗೆ ನಿಯಮಗಳು ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಮನೆ, ಕಟ್ಟಡ ಮುಂತಾದ ಕಾಮಗಾರಿ ನಡೆಸಲು ಈ ಸಾಮಾಗ್ರಿಗಳು ಸಿಗದೆ ಜನ ಸಾಮಾನ್ಯರು ಸಮಸ್ಯೆಗೆ ಸಿಲುಕಿದ್ದಾರೆ. ಅಲ್ಲದೆ ಇದನ್ನೇ ನಂಬಿ ಬದುಕು ಸಾಗಿಸುತ್ತಿರುವವರ ಸಾರಾರು ಕಾರ್ಮಿಕ ಬದುಕು ಇಂದು ಕಷ್ಟಕರವಾಗಿದೆ.


ಆದ್ದರಿಂದ ಸರಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಕರಾವಳಿ ಭಾಗದ ಜನರ ಹಿತ ದೃಷ್ಟಿಯಿಂದ ಈಗಿರುವ ನಿಯಮಗಳನ್ನು ಅಲ್ಪ ಸಡಿಲಗೊಳಿಸಿ ಕೊಡಬೇಕು.
ಈ ಬೇಡಿಕೆಯನ್ನು ಮುಂದಿಟ್ಟು ಬಿ ಜೆ ಪಿ ಪಕ್ಷದ ವತಿಯಿಂದ ಜು 14 ರಂದು ಜಿಲ್ಲೆಯಾದ್ಯಂತ ಪ್ರತಿ ತಾಲೂಕು ಕೇಂದ್ರಗಳಲ್ಲಿ ಜನಾಕ್ರೋಶ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
ಇದರ ಅಂಗವಾಗಿ ಸುಳ್ಯದ ಖಾಸಗಿ ಬಸ್ ನಿಲ್ದಾಣ ಬಳಿ ಸುಳ್ಯ ಬಿ ಜೆ ಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯರವರು ಜು ೧೨ ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಇತ್ತೀಚಿಗೆ ಪುತ್ತೂರು ಶಾಸಕರು ಸುಳ್ಯಕ್ಕೆ ಮಾತನಾಡಿ ಕಳೆದ ೩೦ ವರ್ಷ ಗಳಿಂದ ಸುಳ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅವರಿಗೆ ಸುಳ್ಯದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯದ ಬಗ್ಗೆ ಏನು ಗೊತ್ತಿದೆ ಎಂದು ಪ್ರಶ್ನಿಸಿದರು. ಅಲ್ಲದೆ ಅವರು ಇತ್ತೀಚೆಗೆ ಕಾಂಗ್ರೆಸ್ ಗೆ ಹೋದವರು. ಅವರು ಇತ್ತೀಚಿನ ಸಮಯದ ವರೆಗೆ ಬಿ ಜೆ ಪಿ ಯಲ್ಲಿ ಇರುವಾಗ ಸುಳ್ಯದಲ್ಲಿ ಅಭಿವೃದ್ಧಿ ಆಗಿದೆ ಎಂದು ಹೇಳಿದವರು ಈಗ ಬೇರೆ ಪಕ್ಷಕ್ಕೆ ಹೋದಾಗ ಸುಳ್ಯದಲ್ಲಿ ಅಭಿವೃದ್ಧಿ ಆಗಿಲ್ಲ ಎಂದು ಹೇಳುತ್ತಿದ್ದಾರೆ. ಇದು ಎಷ್ಟು ಸರಿ ಎಂದು ಅವರು ಕೇಳಿದರು. ಸುಳ್ಯಕ್ಕೆ ಬಂದು ಅವರು ಅಭಿವೃದ್ಧಿ ಮಾಡುವುದು ಬೇಡ. ಅವರು ಮೊದಲು ಅವರ ಕ್ಷೇತ್ರವನ್ನು ಅಭಿವೃದ್ಧಿ ಮಾಡಲಿ. ಸುಳ್ಯದ ಅಭಿವೃದ್ಧಿ ಕಾರ್ಯಕ್ಕೆ ನಾವು ಶಾಸಕರು, ಸಂಸದರುಗಳು, ನಮ್ಮ ಪಕ್ಷದ ಇಲ್ಲಿಯ ನಾಯಕರುಗಳು ಇದ್ದೇವೆ ಎಂದು ಶಾಸಕರು ಟಾಂಗ್ ನೀಡಿದರು.


ಸುಳ್ಯದ ಅಂಬೇಡ್ಕರ್ ಭವನದ ಬಗ್ಗೆ ಅವರು ನೋಡುವುದು ಬೇಡ. ಅವರು ಪುತ್ತೂರು ಅಂಬೇಡ್ಕರ್ ಭವನವನ್ನು ಚೆನ್ನಾಗಿ ನೋಡಿಕೊಳ್ಳಲಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಬಿ ಜೆ ಪಿ ಮಂಡಲ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿಯವರು ಮಾತನಾಡಿ, ಪುತ್ತೂರು ಶಾಸಕರು ಸುಳ್ಯಕ್ಕೆ ಒಂದು ದಿನ ಬರಲಿ. ನಾವು ಅವರಿಗೆ ಸುಳ್ಯದಲ್ಲಿ ಆಗಿರುವ ಅಭಿವೃದ್ಧಿಯ ಬಗ್ಗೆ ದಾಖಲೆ ಸಮೇತ ತೋರಿಸುತ್ತೇವೆ ಅದಕ್ಕೆ ಅವರು ಬರಲಿ ಎಂದು ಸವಾಲೆಸೆದರು.
ರೂ.೨೦೦೬ ಕೋಟಿ ಅನುಧಾನ ಪುತ್ತೂರಿಗೆ ತಂದವರು ಎಷ್ಟು ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಿದ್ದಾರೆ ಎಂದು ಜನತೆಗೆ ಅದರ ಪಟ್ಟಿ ಮೊದಲು ಕೊಡಲಿ ಎಂದರು.ಸುಳ್ಯ ದಲ್ಲಿ ಮುಂದೆ ಕಾಂಗ್ರೆಸ್ ಜಯ ಗಳಿಸುತ್ತದೆ ಎಂದು ಹೇಳುತ್ತಾರೆ ಮೊದಲು ಅವರು ಬರುವ ಸಲ ಪುತ್ತೂರು ಗೆದ್ದು ತೋರಿಸಲಿ ಎಂದು ಕುಟುಕಿದರು.

ಪತ್ರಿಕಾ ಗೋಷ್ಠಿಯಲ್ಲಿ ಬಿ ಜೆ ಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ಕೆಡಂಜಿ, ಸುಳ್ಯ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್ ಕಂದಡ್ಕ, ಕೋಶಾಧಿಕಾರಿ ಶುಭೋದ್ ಶೆಟ್ಟಿ ಮೇನಾಲ, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಬಿ ಜೆ ಪಿ ನಗರ ಅಧ್ಯಕ್ಷ ಎ. ಟಿ. ಕುಸುಮಾಧರ, ಪ್ರಧಾನ ಕಾರ್ಯದರ್ಶಿ ನಾರಾಯಣ ಶಾಂತಿನಗರ ಉಪಸ್ಥಿತರಿದ್ದರು.