ಸುಳ್ಯದ ಪ್ರತಿಭಟನೆಯಲ್ಲಿ ಪುತ್ತೂರು ಶಾಸಕ ಅಶೋಕ್ ರೈ ವಿರುದ್ಧ ಏಕವಚನ ಬಳಕೆ

0

ಬಿಜೆಪಿ ಮಂಡಲಾಧ್ಯಕ್ಷ ವೆಂಕಟ್ ವಳಲಂಬೆ ವಿರುದ್ಧ ಪೋಲೀಸರಿಗೆ ಕಾಂಗ್ರೆಸ್ ದೂರು

ಸುಳ್ಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲಾಧ್ಯಕ್ಷರಾಗಿರುವ ವೆಂಕಟ್ ವಳಲಂಬೆ ಯವರು ಪುತ್ತೂರು ಶಾಸಕರಾಗಿರುವ ಅಶೋಕ್ ರೈ ವಿರುದ್ಧ ಏಕವಚನ ಬಳಸಿ ತೇಜೋವಧೆ ಮಾಡಿದ್ದು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂದು ಸುಳ್ಯ ಪೋಲೀಸರಿಗೆ ಕಾಂಗ್ರೆಸ್ ನಾಯಕರು ದೂರು ನೀಡಿದ್ದಾರೆ.

ಜು.14 ರಂದು ಸಂಜೆ ಪೋಲೀಸ್ ಠಾಣೆಗೆ ತೆರಳಿದ ಕಾಂಗ್ರೆಸ್ ನಾಯಕರು ದೂರು ನೀಡಿದ್ದಾರೆ.


ಜು. 14ರಂದು ಸುಳ್ಯ ಖಾಸಗಿ ಬಸ್ಸು ನಿಲ್ದಾಣದಲ್ಲಿ ಭಾರತೀಯ ಮಜ್ದೂರ್ ಸಂಘ ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರಾಜ್ಯ ಸರಕಾರದ ವಿರುದ್ಧ ನಡೆದ ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಹಾಗೂ ಇನ್ನಿತರ ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರ ಬಗ್ಗೆ ಹಾಗೂ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ವಿರುದ್ಧ ಏಕವಚನದಲ್ಲಿ ನಿಂದಿಸಿ, ಮುಂದಿನ ದಿನಗಳಲ್ಲಿ ಹಾರೆ, ಪಿಕ್ಕಾಸು, ಸಬ್ಬಲು ಹಿಡಿದು ಬೀದಿ ನಾಯಿಗಳಿಗೆ ಹೊಡೆದ ಹಾಗೆ ಶಾಸಕ ಆಶೋಕ್ ಕುಮಾರ್ ರೈ ಹಾಗೂ ಕಾಂಗ್ರೆಸ್‌ನವರಿಗೆ ಬೀದಿ ಬೀದಿಗಳಲ್ಲಿ ಹೊಡಿತಾರೆ ಎಂಬುದಾಗಿ ಮತ್ತು ಸುಳ್ಯ ಕಾಂಗ್ರೆಸ್‌ನಲ್ಲಿ ಒಂದಷ್ಟು ಪುಂಡ ಪೋಕರಿಗಳಿದ್ದಾರೆ ಎಂಬುದಾಗಿ ಹಾಗೂ ಅಶೋಕ್ ಕುಮಾರ್ ರೈ ಯವರು ಸುಳ್ಯಕ್ಕೆ ಬಂದ್ರೆ ದಿಗ್ಬಂಧನ ಹಾಕಲಾಗುವುದು ಎಂಬುದಾಗಿ ಅವಹೇಳನಕಾರಿಯಾಗಿ ಮತ್ತು ಅವರ ತೇಜೋವಧೆ ಮಾಡುವ ಬಗ್ಗೆ ಮಾತನಾಡಿ ಸಾಮಾಜಿಕ ಅಶಾಂತಿ ಸೃಷ್ಟಿಸುವ ಮತ್ತು ಒಬ್ಬ ಜನಪ್ರತಿನಿಧಿ ಪುತ್ತೂರಿನ ಶಾಸಕರ ಬಗ್ಗೆ ನಿಕೃಷ್ಟವಾಗಿ ಮಾತನಾಡಿ ಸಾರ್ವಜನಿಕ ಶಾಂತಿ ಕದಡುವ ಕೆಲಸವನ್ನು ಮಾಡಿರುತ್ತಾರೆ. ಆದುರಿಂದ ತಾವು ಈ ಬಗ್ಗೆ ತನಿಖೆ ನಡೆಸಿ ಇಂದು ಪ್ರತಿಭಟನಾ ಸಂಘಟನೆ ಮಾಡಿದವರ ಮೇಲೆ ಮತ್ತು ಸಾರ್ವಜನಿಕವಾಗಿ ಅವಹೇಳನಕಾರಿಯಾಗಿ, ಏಕವಚನದಲ್ಲಿ ಮಾತನಾಡಿರುವ ಸುಳ್ಯ ಮಂಡಲಾಧ್ಯಕ್ಷ ವೆಂಕಟ್ ವಳಲಂಬೆ ಹಾಗೂ ಬಿಜೆಪಿ ನಾಯಕರ ನಾಯಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್, ಪ್ರಧಾನ‌ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ನಾಯಕರಾದ ರಾಧಾಕೃಷ್ಣ ಬೊಳ್ಳೂರು, ಕೆ.ಎಂ.ಮುಸ್ತಫ, ಶಾಹುಲ್ ಹಮೀದ್ ಕುತ್ತಮೊಟ್ಟೆ, ಕೆ.ಗೋಕುಲ್ ದಾಸ್, ಶಾಫಿ‌ಕುತ್ತಮೊಟ್ಟೆ, ರಾಜು ಪಂಡಿತ್, ರಾಧಾಕೃಷ್ಣ ಪರಿವಾರಕಾನ, ಸುರೇಶ್ ಎಂ.ಹೆಚ್., ಶಿವಕುಮಾರ್ ಕಂದಡ್ಕ ಮೊದಲಾದವರು ಇದ್ದರು.