ಬಳ್ಪ: ಆದರ್ಶ ಸಂಜೀವಿನಿಯ ಗ್ರಾಮ ಪಂಚಾಯತ್ ಮಟ್ಟದ ಮಹಾಸಭೆ

0

ಬಳ್ಪದ ಆದರ್ಶ ಸಂಜೀವಿನಿಯ ಗ್ರಾಮ ಪಂಚಾಯತ್ ಮಟ್ಟದ 2024-25ನೇ ಸಾಲಿನ ಮಹಾಸಭೆ ಸೆ. 10ರಂದು ಬಳ್ಪ ಗ್ರಾ.ಪಂ. ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಸಾವಿತ್ರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಸೌಮ್ಯ ಒಕ್ಕೂಟದ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಶ್ರೀಮತಿ ಕವಿತಾ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಹರ್ಷಿತ್ ಕಾರ್ಜ ಅತಿಥಿಯಾಗಿ ಭಾಗವಹಿಸಿ ಸಂಜೀವಿನಿ ಯೋಜನೆ, ಅದರಲ್ಲಿ ದೊರಕುವ ಸಾಲ ಸೌಲಭ್ಯಗಳ ಕುರಿತು ವಿವರಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ ಬಿ ಘನತ್ಯಾಜ್ಯ ನಿರ್ವಹಣೆ ಹಾಗೂ ಗ್ರಾಮದ ಸ್ವಚ್ಚತೆ ಕುರಿತು ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಕಾರ್ಯದರ್ಶಿ ರಘು ಬಿ ಸ್ವಸಹಾಯ ಸಂಘಗಳು ಒಕ್ಕೂಟದಿಂದ ದೊರೆಯುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಆರ್ಥಿಕವಾಗಿ ಸಬಲೀಕರಣಗೊಳ್ಳಬೇಕೆಂದು ತಿಳಿಸಿದರು. ಗ್ರಾಮ ವಿಕಾಸ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಮಾಜಿ ಪಂಚಾಯತ್ ಸದಸ್ಯರಾದ ವಿನೋದ್ ಬೋಳ್ಮಲೆ ಸಂಜೀವಿನಿ ಯೋಜನೆಯಿಂದ ಮಹಿಳೆಯರು ಹೇಗೆ ಅರ್ಥಿಕವಾಗಿ, ಸ್ವಾವಲಂಬಿಯಾಗಿ ಮುಂದುವರೆಯಬಹುದೆಂದು ತಿಳಿಸಿದರು. ಸಮುದಾಯ ಆರೋಗ್ಯ ಅಧಿಕಾರಿ ಶ್ರೀಮತಿ ಮಮತಾ ಆರೋಗ್ಯದ ಕುರಿತು ಮಾಹಿತಿ ನೀಡಿದರು.

ಒಕ್ಕೂಟದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ನೀಡಲಾಯಿತು. ಘನತ್ಯಾಜ್ಯ ಘಟಕದ ಸಿಬ್ಬಂದಿಗಳನ್ನು ಒಕ್ಕೂಟದ ಪರವಾಗಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮ ಏರ್ಪಡಿಸಲಾಯಿತು. ವಲಯ ಮೇಲ್ವಿಚಾರಕರಾದ ಶ್ರೀಮತಿ ಸುವಿನಾ ಡೇ ಎನ್.ಆರ್.ಎಲ್. ಎಂ ಯೋಜನೆ ಉದ್ದೇಶ ಹಾಗೂ ಮಾದಕ ವಸ್ತು ವ್ಯಸನ ಮುಕ್ತ ಕರ್ನಾಟಕ ಕುರಿತು ಮಾಹಿತಿ ನೀಡಿದರು. ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಒಕ್ಕೂಟದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರವನ್ನು ಕೋರಿದರು.

ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಸಾವಿತ್ರಿ ಇವರು ಸ್ವಾಗತಿಸಿ, ಕು. ಸಿಂಚನ ಪ್ರಾರ್ಥಿಸಿ, ವಂದಿಸಿದರು. ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರಾದ ಶ್ರೀಮತಿ ಯಮುನಾ ಕಾರ್ಜ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಪದಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ಒಕ್ಕೂಟದ ಸಿಬ್ಬಂದಿಗಳು, ಸಿ.ಎ ಬ್ಯಾಂಕ್ ನಿರ್ದೇಶಕರು, ಪಂಚಾಯತ್ ಸದಸ್ಯರು, ಸ್ವಸಹಾಯ ಸಂಘದ ಅಧ್ಯಕ್ಷ, ಕಾರ್ಯದರ್ಶಿ, ಸದಸ್ಯರು ಪಾಲ್ಗೊಂಡಿದ್ದರು.