ಅರಂತೋಡು ಎ ನ್‌ಎಂ ಪಿಯು ಕಾಲೇಜಿನ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರಕ್ಕೆ ಚಾಲನೆ

0

ಅರಂತೋಡು:ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪದವಿಪೂರ್ವ), ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕ, ನೆಹರು ಸ್ಮಾರಕ ಪದವಿಪೂರ್ವ ಕಾಲೇಜು, ಅರಂತೋಡು ಇದರ 2026–27ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವು ಸುಳ್ಯ ತಾಲೂಕಿನ ತೊಡಿಕಾನ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅ. 7ರಿಂದ 13ರವರೆಗೆ ನಡೆಯಲಿದೆ.

ಈ ಶಿಬಿರದ ಉದ್ಘಾಟನಾ ಸಮಾರಂಭವು ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ಸಂಚಾಲಕರಾದ ಎ.ಸಿ. ವಸಂತ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಅರಂತೋಡು–ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಅವರು ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎನ್‌ಎಸ್‌ಎಸ್ ಶಿಬಿರಗಳು ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತವೆ. ವಿದ್ಯಾರ್ಥಿಗಳು ಶಿಬಿರದ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಇಲ್ಲಿ ದೊರೆಯುವ ಅನುಭವಗಳನ್ನು ತಮ್ಮ ಭವಿಷ್ಯದ ಬದುಕಿನಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ನಿಕಟಪೂರ್ವ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೇಶವ ಅಡ್ತಲೆ ,ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮೇಶ್, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ, ಎಸ್‌ಡಿಎಂಸಿ ಅಧ್ಯಕ್ಷ ನವೀನ್ ಎ.ಬಿ., ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಚಂದ್ರಾವತಿ, ಪಾಪ್ಯುಲರ್ ಎಜುಕೇಶನ್‌ನ ಕೋಶಾಧಿಕಾರಿ ಅಬ್ದುಲ್ಲಾ ಹಾಗೂ ಕಾಲೇಜಿನ ಪ್ರಾಂಶುಪಾಲ ರಮೇಶ್ ಎಸ್.,ಶಿಬಿರದ ನಾಯಕರಾದ ಸುಕೇಶ್ ಮತ್ತು ದೀಪಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮಾಧಿಕಾರಿ ಲಿಂಗಪ್ಪ ಎಂ. ಸ್ವಾಗತಿಸಿದರು. ಶಿಬಿರಾರ್ಥಿಗಳು ಪ್ರಾರ್ಥಿಸಿದರು. ಸಹಶಿಬಿರಾಧಿಕಾರಿ ಭಾಗ್ಯಶ್ರೀ ಎಚ್.ಬಿ. ವಂದಿಸಿದರು. ಉಪನ್ಯಾಸಕ ಮೋಹನ್ ಚಂದ್ರ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಯಶಸ್ಸಿಗೆ ಸುರೇಶ್ ವಾಗ್ಲೆ, ಪದ್ಮಕುಮಾರ್, ಅಶ್ವಿನಿ ಕೆ.ಎಂ., ಶಾರಿಕ, ತಸ್ಲೀಮಾ ಹಾಗೂ ಸೌಮ್ಯಶ್ರೀ ಸೇರಿದಂತೆ ಸಿಬ್ಬಂದಿ ಸಹಕರಿಸಿದರು.

ಏಳು ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಶ್ರಮದಾನ, ಸ್ವಚ್ಛತಾ ಕಾರ್ಯ, ಶೈಕ್ಷಣಿಕ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮಗಳು, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ವಿವಿಧ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಆಯೋಜಿಸಲಾಗಿದೆ.