ಮಡಪ್ಪಾಡಿಯಲ್ಲಿ ಭಾರೀ ಮಳೆಗೆ ಅಪಾರ ಹಾನಿ

0

 

 

ಶೀರಡ್ಕ ರಸ್ತೆ ಅಂಬೆಕಲ್ಲು ಎಂಬಲ್ಲಿ ಬಿರುಕು – ಸಂಪರ್ಕ ಕಡಿತದ ಭೀತಿ

ಹಾಡಿಕಲ್ಲಿನಲ್ಲಿ ಕೊಚ್ಚಿ ಹೋದ ಸೇತುವೆ ಮಣ್ಣು – ಪೂಂಬಾಡಿಯಲ್ಲಿ ಕೊಚ್ಚಿ ಹೋದ ರಸ್ತೆ

ಬರೆ ಜರಿದು ಮಡಪ್ಪಾಡಿ ರಸ್ತೆ ಬ್ಲಾಕ್

ನಿನ್ನೆ ಸುರಿದ ಭಾರೀ ಮಳೆಗೆ ಮಡಪ್ಪಾಡಿಯಲ್ಲಿ ಸುರಿದ ಮಳೆಗೆ ಅಪಾರ ಹಾನಿ ಸಂಭವಿಸಿದ ಘಟನೆ ವರದಿಯಾಗಿದೆ.

 

ಮಡಪ್ಪಾಡಿಯ ಗೋಳಿಯಡಿ ಎಂಬಲ್ಲಿ ಬರೆ ಜರಿದು ರಸ್ತೆಗೆ ಮಣ್ಣು ಬಿದ್ದು‌ ಬ್ಲಾಕ್ ಆಗಿತ್ತು. ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಸಂಜೆಯ ವೇಳೆಗೆ ಸ್ವಲ್ಪ ಮಣ್ಣು ಸರಿಸಿ ಲಘು ವಾಹನ ಸಂಚರಿಸುವಂತೆ ಮಾಡಲಾಯಿತು. ಸಂಜೆಯ ವೇಳೆಗೆ ಮಡಪ್ಪಾಡಿಯಿಂದ ಶೀರಡ್ಕ, ದೇರುಮಜಲು ಸಂಪರ್ಕಿಸುವ ರಸ್ತೆಯು ಅಂಬೆಕಲ್ಲು ಎಂಬಲ್ಲಿ‌ ಬಿರುಕು ಕಾಣಿಸಿಕೊಂಡಿದ್ದು, ಆತಂಕದ ಪರಿಸ್ಥಿತಿ ಎದುರಾಗಿದೆ.

ಇದೇ ಗ್ರಾಮದ
ಹಾಡಿಕಲ್ಲು ಕಡೆಗಳಲ್ಲಿ ಸೇತುವೆ ಮಣ್ಣು ಕೊಚ್ಚಿ ಹೋಗಿದ್ದು, ಪೇರಪ್ಪ ಮಲೆ ಎಂಬವರ ಅಂಗಳ ಕುಸಿದಿದೆ.

ಪೂಂಬಾಡಿಯನ್ನು ಸಂಪರ್ಕಿಸುವ ಶೆಟ್ಟಿಮಜಲು ಸೇತುವೆ ಮುಳುಗಡೆಯಾಗಿತ್ತಲ್ಲದೇ ತೋಟಗಳಿಗೂ ನೀರು ನುಗ್ಗಿತ್ತು. ಮಡಪ್ಪಾಡಿ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಪೂಂಬಾಡಿಯವರು ಕೆಲಸ ಮುಗಿಸಿ ಮನೆಗೆ ಹೋಗುವ ಸಂದರ್ಭ ಶೆಟ್ಟಿ ಮಜಲು ಸೇತುವೆ ದಾಟಿ ನಡೆದುಕೊಂಡು ಹೋಗುತ್ತಿದ್ದಂತೆ ನೀರು ಒಂದೊಮ್ಮೆಲೆ ಏರಿಕೆಯಾಗುತ್ತಲೆ ಸೊಂಟದವರೆಗೆ ನೀರು ಬಂತು. ಬಳಿಕ ಅವರು ತಂತಿ ಬೇಲಿಯ ಸಹಾಯದಲ್ಲಿ ನೀರಿನಿಂದ ಪಾರಾಗಿ ಗುಡ್ಡ ಹತ್ತಿ‌ ಇಳಿದು ಮನೆ ಸೇರಿದರು. ಅಲ್ಲದೇ ಡೈರಿಗೆ ಹಾಲು ತೆಗೆದುಕೊಂಡು‌ ಹೋಗಲು ಈ ಭಾಗದಲ್ಲಿ ವಿನಯ ಪೂಂಬಾಡಿ ಮತ್ತಿತರರು ಹರಸಾಹಸಪಡಬೇಕಾಯಿತು.

ಸಂಜೆಯ ವೇಳೆ ನೀರಿನೊಂದಿಗೆ ಸಿಂಟೆಕ್ಸ್ ಟ್ಯಾಂಕೊಂದು‌ ತೇಲಿ ಬರತೊಡಗಿತು. ಆದರೆ ಅದು ಎಲ್ಲಿಯದು ಎಂದು ತಿಳಿದು ಬಂದಿಲ್ಲ.

ಇದೇ ಗ್ರಾಮದ ಜಾಲುಮನೆ ಎಂಬಲ್ಲಿಯೂ ಸೇತುವೆಯ ಮಣ್ಣು ಕೊಚ್ಚಿ ಹೋಗಿದೆ.

ಗುಡ್ಡದ ಬಳಿ ಅಪಾಯದಲ್ಲಿ ಇರುವ 2 ಮನೆಗಳ ಕುಟುಂಬವನ್ನು ಬೇರೆಡೆಗೆ ಸ್ಥಳಾಂತರಗೊಳಿಸಲಾಗಿದೆ.

ಗಂಗಯ್ಯ ಪೂಂಬಾಡಿ ಎಂಬವರ ಮನೆಯ ಬದಿ ಗುಡ್ಡ ಕುಸಿತಗೊಂಡಿದ್ದು, ಮನೆ ಒಂದು‌ ಬದಿ ಹಾನಿ ಸಂಭವಿಸಿದೆ.

ಘಟನಾ ಸ್ಥಳಗಳಿಗೆ ಪಂಚಾಯತ್ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಗ್ರಾಮಕರಣಿಕ ಮಾರುತಿ ಕಾಂಬ್ಲೆ, ಮಡಪ್ಪಾಡಿ ಸೊಸೈಟಿ ಅಧ್ಯಕ್ಷ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಭೇಟಿ ನೀಡಿದ್ದಾರೆ.‌