ಜೇನು ಸಹಕಾರ ಸಂಘದ ಕಟ್ಟಡಕ್ಕಾಗಿ ಡಿ.ಸಿ. ಮನ್ನಾ ಜಮೀನು ಕೊಡುವಾಗ ಮೊಗೇರ ಸಂಘಕ್ಕೆ ಯಾಕೆ ಕೊಡುತ್ತಿಲ್ಲ : ಎಸ್ಸಿ, ಎಸ್.ಟಿ. ಕುಂದು ಕೊರತೆ ಸಭೆಯಲ್ಲಿ ಪ್ರಸ್ತಾಪ

0

 

 

ಆರ್.ಐ. ಗೆ ವರದಿ ಕೇಳಿದ ತಹಶೀಲ್ದಾರ್

ಸುಳ್ಯದ ಬೀರಮಂಗಲ – ಬಂಗ್ಲೆಗುಡ್ಡೆಯಲ್ಲಿ ಪ್ರದೇಶದಲ್ಲಿರುವ ಡಿಸಿ ಮನ್ನಾ ಜಮೀನಿನಲ್ಲಿ ಜೇನು ಸೊಸೈಟಿ ಕಟ್ಟಡಕ್ಕಾಗಿ ಜಾಗ ನೀಡುತ್ತೀರಾದರೆ, ಮೊಗೇರ ಸಮುದಾಯ ಕಟ್ಟಡಕ್ಕೆ ಅರ್ಜಿ ಹಾಕಿದರೆ ಅದನ್ನು ಯಾಕೆ ರಿಜೆಕ್ಟ್ ಮಾಡುತ್ತೀರಿ ಎಂದು ದಲಿತ ಸಮುದಾಯದ ನಾಯಕರು ಎಸ್ಸಿ, ಎಸ್ ಟಿ ಕುಂದುಕೊರತೆ ಸಭೆಯಲ್ಲಿ ಪ್ರಸ್ತಾಪಿಸಿರುವ ಘಟನೆ ಹಾಗೂ ಈ ಸ್ಥಳದ ಕುರಿತು ವರದಿ ನೀಡುವಂತೆ ಆರ್.ಐ. ಯವರಿಗೆ ತಹಶೀಲ್ದಾರ್ ಸೂಚನೆ ನೀಡಿರುವ ಘಟನೆ ನಡೆದಿದೆ.

ತಹಶೀಲ್ದಾರ್ ಅನಿತಾಲಕ್ಷ್ಮೀಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ತಾ.ಪಂ. ಇ.ಒ. ಭವಾನಿಶಂಕರ್, ಸಮಾಜ ಕಲ್ಯಾಣಾಧಿಕಾರಿ ರವಿಕುಮಾರ್ ಹಾಗೂ ಇಲಾಖಾಧಿಕಾರಿಗಳು ಇದ್ದರು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅಚ್ಚುತ ಮಲ್ಕಜೆಯವರು ಬಾಳಿಲದಲ್ಲಿರುವ ಡಿಸಿ ಮನ್ನಾ ಜಾಗದ ಮಾಹಿತಿ ಕೇಳಿದರೆ ಗುತ್ತಿಗಾರಿನಲ್ಲಿ ೧೦ ಎಕ್ರೆ ಇದೆ ಎಂದು ವರದಿ ಕೊಟ್ಟಿದ್ದೀರಿ? ಗುತ್ತಿಗಾರಿನಲ್ಲಿ ಅಷ್ಟು ಜಾಗ ಎಲ್ಲಿದೆ?” ಎಂದು ಪ್ರಶ್ನಿಸಿದರು. ಅಡಂಗಲ್ಲು ಪ್ರಕಾರ ವರದಿ ನೀಡಲಾಗಿದೆ ಎಂದು ಆರ್.ಐ. ಶಂಕರ್ ಹೇಳಿದರು. “ಗುತ್ತಿಗಾರಿನಲ್ಲಿರುವ ಡಿಸಿ ಮನ್ನಾ ಜಾಗದ ಕುರಿತು ನಾವು ನಿಮಗೆ ಮಾಹಿತಿ ನೀಡುತ್ತೇವೆ” ಎಂದು ತಹಶೀಲ್ದಾರ್ ಭರವಸೆ ನೀಡಿದರು. ಬಾಳಿಲದಲ್ಲಿರುವ ಡಿಸಿ ಮನ್ನಾ ಜಾಗದ ಮಾಹಿತಿ ಕೇಳಿ ೩ ವರ್ಷವೇ ಆಗಿದೆ ಇದುವರೆಗೆ ಸಿಕ್ಕಿಲ್ಲ ಎಂದು ಅಚ್ಚುತರು ಹೇಳಿದರಲ್ಲದೆ, ತಾಲೂಕಿನಲ್ಲಿ ಒಟ್ಟು ೪೦ ಎಕ್ರೆ ಜಾಗ ಇದೆ ಎಂದು ನೀವು ಡಿಸಿಯವರ ಸಭೆಯಲ್ಲಿ ಮಾಹಿತಿ ನೀಡಿದ್ದೀರಿ ಆ ಜಾಗದ ಕುರಿತು ನಮಗೆ ವಿವರ ಬೇಕು ಎಂದು ಹೇಳಿದರು. “೪೦ ಎಕ್ರೆ ಇಲ್ಲ. ೧೭ ಎಕ್ರೆ ಜಾಗ ಇದೆ. ಉಳಿದ ಜಾಗಗಳಲ್ಲಿ ಕಚೇರಿಗಳು, ಬಿಲ್ಡಿಂಗ್‌ಗಳು ಇವೆ” ಎಂದು ತಹಶೀಲ್ದಾರ್ ಹೇಳಿದರು. ಆಗ ಆನಂದ ಬೆಳ್ಳಾರೆಯವರು “ಡಿಸಿ ಮನ್ನಾ ಜಮೀನು ಹಾಗೆ ಒತ್ತುವರಿ ಮಾಡಲು ಬಿಡಬಾರದು. ತೊಡಿಕಾನ, ಕುಕ್ಕುಜಡ್ಕದಲ್ಲಿಯೂ ಒತ್ತುವರಿಗಳಾಗಿವೆ. ನೀವು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. “ಸುಳ್ಯದ ಬೀರಮಂಗಲದಲ್ಲಿ ಮೊಗೇರ ಸಂಘದ ಕಟ್ಟಡಕ್ಕೆ ನಾವು ಜಾಗ ಕೇಳಿದರೆ ನೀವು ಕೊಡುವುದಿಲ್ಲ. ಅದೇ ಜಾಗವನ್ನು ಜೇನು ಸೊಸೈಟಿ ಕಟ್ಟಡಕ್ಕೆ ಹೇಗೆ ನೀಡಿದ್ದೀರಿ?. ಅವರಿಗೊಂದು ಕಾನೂನು ನಮಗೊಂದು ಕಾನೂನು ಹೇಗೆ?” ಎಂದು ಅಚ್ಚುತ ಮಲ್ಕಜೆ ಪ್ರಶ್ನಿಸಿದರು. ದಾಸಪ್ಪ ಬಿರಮಂಗಲ, ಆನಂದ ಬೆಳ್ಳಾರೆ ಧ್ವನಿಗೂಡಿಸಿದರು. “ನಾವು ಕೊಟ್ಟಿಲ್ಲ” ಎಂದು ತಹಶೀಲ್ದಾರ್ ಹೇಳಿದ್ದಾಗ, `’ಕೊಟ್ಟಿದ್ದೀರಿ” ಎಂದು ದಲಿತ ಮುಖಂಡರು ಪಟ್ಟು ಹಿಡಿದರು. ಸಭೆಯಲ್ಲಿದ್ದ ತಾ.ಪಂ. ಮಾಜಿ ಅಧ್ಯಕ್ಷ ಶಂಕರ ಪೆರಾಜೆಯವರು ಆ ಜಾಗ ಹಿಂದೆಯೇ ಜೇನು ಸೊಸೈಟಿಯವರಿಗೆ ಆರ್.ಟಿ.ಸಿ. ಆಗಿದೆ” ಎಂದು ಹೇಳಿದರು. “ಅದು ಡಿಸಿ ಮನ್ನಾ ಜಾಗ” ಎಂದು ಅಚ್ಚುತರು ಹೇಳಿದಾಗ, “ಹಿಂದೆ ಆಗಿರಬಹುದು. ಈಗ ಅಲ್ಲ” ಎಂದು ಶಂಕರ್ ಪೆರಾಜೆ ಹೇಳಿದರು. ಡಿಸಿ ಮನ್ನಾ ಜಮೀನು ಹೇಗೆ ಮಂಜೂರು ಮಾಡಲು ಆಗುತ್ತದೆ. ನನಗೆ ಆ ಜಾಗದ ಕುರಿತು ಇವತ್ತೇ ವರದಿ ನೀಡಬೇಕು” ಎಂದು ತಹಶೀಲ್ದಾರ್ ಆರ್.ಐ. ಯವರಿಗೆ ಸೂಚನೆ ನೀಡಿದರು.

ಸುಳ್ಯದಲ್ಲಿ ಅಂಬೇಡ್ಕರ್ ಪ್ರತಿಮೆ
ಸಾಮಾನ್ಯ ಸಭೆಯಲ್ಲಿ ನಿರ್ಧಾರ

ಸುಳ್ಯ ನಗರ ವ್ಯಾಪ್ತಿಯಲ್ಲಿ ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್‌ರ ಪ್ರತಿಮೆ ನಿರ್ಮಾಣಕ್ಕೆ ಸ್ಥಳ ಗುರುತಿಸುವ ವಿಚಾರವನ್ನು ಆನಂದ ಬೆಳ್ಳಾರೆ ಪ್ರಸ್ತಾಪಿಸಿದರು. ಯಾವ ಕ್ರಮ ಮಾಡಿದ್ದೀರಿ ಎಂದು ತಹಶೀಲ್ದಾರ್ ಸಭೆಯಲ್ಲಿದ್ದ ನ.ಪಂ. ಮುಖ್ಯಾಧಿಕಾರಿಗಳನ್ನು ಪ್ರಶ್ನಿಸಿದರು. “ಸೆ.೮ರಂದು ಸಾಮಾನ್ಯ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗುವುದು” ಎಂದು ಮುಖ್ಯಾಧಿಕಾರಿ ಹೇಳಿದರು. “ಅಂಬೇಡ್ಕರ್‌ರ ಪ್ರತಿಮೆ ಮಾಡಬಹುದು ಜತೆಗೆ ಅವರ ಆದರ್ಶಗಳನ್ನು ನಾವೆಲ್ಲ ಮೈಗೂಡಿಸಿಕೊಳ್ಳೋಣ ಎಂದು ತಹಶೀಲ್ದಾರ್ ಹೇಳಿದರು. ಸೆ.೧೦ ನೇ ತಾರೀಕಿಗೆ ಸಭೆಯ ನಿರ್ಣಯವನ್ನು ನಮಗೆ ತಿಳಿಸುವಂತೆ ಆನಂದ ಬೆಳ್ಳಾರೆ ಕೇಳಿಕೊಂಡರು.

ಎಸ್ಸಿ-ಎಸ್ಟಿಗಳಿಗೆ ಬರುವ ಸವಲತ್ತನ್ನು ತೋಟಗಾರಿಕೆ ಇಲಾಖೆ ವತಿಯಿಂದ ಇತರರು ಪಡೆದುಕೊಳ್ಳುತ್ತಿದ್ದಾರೆ ಎಂದು ದಾಸಪ್ಪ ಬೀರಮಂಗಲ ಆರೋಪಿಸಿದರು. ತಹಶೀಲ್ದಾರ್ ಅನಿತಾಲಕ್ಷ್ಮೀಯವರು ತೋಟಗಾರಿಕಾ ಅಧಿಕಾರಿ ಸುಹಾನರನ್ನು ಪ್ರಶ್ನಿಸಿದಾಗ `ಆ ರೀತಿ ನಾವು ಯಾರಿಗೂ ಸವಲತ್ತು ಕೊಡುತ್ತಿಲ್ಲ” ಎಂದು ಹೇಳಿದರು. “ಅಂತಹ ಪ್ರಕರನವಿದ್ದರೆ ದಾಖಲೆ ಸಹಿತ ನೀಡಿ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ತಹಶೀಲ್ದಾರ್ ಹೇಳಿದರು.
ಬೆಳ್ಳಾರೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದಿರುವ ಕುರಿತು ಪ್ರಸ್ತಾಪವಾದಾಗ ತಾಲೂಕು ಆರೋಗ್ಯಾಧಿಕಾರಿ ಡಾ| ನಂದ ಕುಮಾರ್‌ರವರು ಅಲ್ಲಿ ವೈದ್ಯರಿದ್ದಾರೆ. ಸರಕಾರಿ ರಜಾದಿನದಲ್ಲಿಯೂ ಅರ್ಧದಿನ ಡ್ಯೂಟಿ ಮಾಡುತ್ತಾರೆ ಎಂದು ಅವರು ವಿವರ ನೀಡಿದರು.
ಸುಳ್ಯ ನಗರ ವ್ಯಾಪ್ತಿಯಲ್ಲಿ ಕೆಲವರು ಹೋರಿಗಳನ್ನು ತಂದು ರಸ್ತೆಯ ಬದಿಯಲ್ಲಿ ಬಿಟ್ಟು ಹೋಗುತ್ತಾರೆ. ಅಂತವರ ಕುರಿತು ಕ್ರಮ ಕೈಗೊಳ್ಳಬೇಕೆಂದು ನಂದರಾಜ ಸಂಕೇಶರು ಕೇಳಿಕೊಂಡಾಗ, ಆ ಬಗ್ಗೆ ನ.ಪಂ.ಗೆ ಅರ್ಜಿ ಕೊಡುವಂತೆ ಸಭೆಯಲ್ಲಿ ಸೂಚಿಸಲಾಯಿತು.
ಅಪಘಾತ ತಪ್ಪಿಸಿ
ಸುಳ್ಯ ಬಸ್ ನಿಲ್ದಾಣದ ಎದುರಿನ ರಸ್ತೆಯಲ್ಲಿ ಪ್ರತೀ ದಿನ ಬೆಳಗ್ಗೆ ನೂರಾರು ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ನಿಂತಿರುತ್ತಾರೆ. ಅವರು ಕೆಲಸಕ್ಕೆ ಹೋಗುವಾಗ ಪಿಕಪ್ ವಾಹನದಲ್ಲಿ ೧೫ ರಿಂದ ೨೦ ಜನರನ್ನು ತುಂಬಿಸಿ ಕೊಂಡು ಹೋಗುತ್ತಾರೆ. ಹೀಗೆ ಹೋಗುವಾಗ ಅಪಘಾತ ಆಗುವ ಸಾಧ್ಯತೆ ಇದೆ. ಆದ್ದರಿಂದ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ನಂದರಾಜ ಸಂಕೇಶರು ಒತ್ತಾಯಿಸಿದರು. “ಈ ಕುರಿತು ಪರಿಶೀಲಿಸುವುದಾಗಿ ಸುಳ್ಯ ಎಸ್.ಐ. ದಿಲೀಪ್ ಭರವಸೆ ನೀಡಿದರು.
ಬೆಳ್ಳಾರೆ ಪೋಲೀಸ್ ಠಾಣೆ ವ್ಯಾಪ್ತಿಗೆ ೨೧ ಗ್ರಾಮಗಳು ಬರುತ್ತಿದ್ದು ಪ್ರತೀ ಬೀಟ್‌ಗೆ ಪೋಲೀಸರನ್ನು ನೇಮಿಸಬೇಕು. ಮತ್ತು ಅಲ್ಲಿಗೆ ಹೆಚ್ಚುವರಿ ಎಎಸ್‌ಐ ಗಳ ನೇಮಕ ಮಾಡಬೇಕು ಎಂದು ಆನಂದ ಬೆಳ್ಳಾರೆ ಒತ್ತಾಯಿಸಿದರು.