ಮಂಡೆಕೋಲಿನಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ

0

ಸಾರ್ವಜನಿಕರಿಂದ ಅಹವಾಲು ಸ್ವೀಕಾರ : 115  ಅರ್ಜಿ ಸಲ್ಲಿಕೆ

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬ ಕಂದಾಯ ಇಲಾಖೆಯ ಕಾರ್ಯಕ್ರಮದ ಪ್ರಕಾರ ಇಂದು ಮಂಡೆಕೋಲಿನಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆಯೋಜನೆಯಾಯಿತು. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸಹಿತ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡವೇ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು.

ಬೆಳಿಗ್ಗೆ ಮಂಡೆಕೋಲು ಪೇರಾಲಿನಲ್ಲಿ ಸಂಜೀವಿನಿ ಕಟ್ಟಡಕ್ಕೆ ಶಿಲಾನ್ಯಾಸ ನಡೆಸಲಾಯಿತು. ಅಲ್ಲಿಂದ ಜಿಲ್ಲಾಧಿಕಾರಿಗಳು ಮಾರ್ಗ ಶಾಲೆಗೆ ಬಂದು ಪರಿಶೀಲನೆ ನಡೆಸಿ ಮಂಡೆಕೋಲು ಗ್ರಾಮ ಪಂಚಾಯತ್‌ನಗೆ ತೆರಳಿದರು. ಅಲ್ಲಿ ನೂತನ ಗ್ರಂಥಾಲಯ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿತು. ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಅಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಅಮ್ಮನಿಗೊಂಡು ಕಾರ್ಯಕ್ರಮ ರಾಜ್ಯಮಟ್ಟದಲ್ಲಿ ಸುದ್ದಿಯಾದ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು. ಪಂಚಾಯತ್ ಎದುರು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಮಂಡೆಕೋಲು ಸಹಕಾರಿ ಸದನದಲ್ಲಿ ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆಯವರೆಗೆ ಜಿಲ್ಲಾಧಿಕಾರಿಗಳು ತಮ್ಮ ತಂಡದೊಂದಿಗೆ ಇದ್ದು, ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. 115  ಅರ್ಜಿಗಳು ಬಂದಿತ್ತು. ಅಹವಾಲು ಸ್ವೀಕಾರದ ಬಳಿಕ ಊಟ ಮುಗಿಸಿದ ಜಿಲ್ಲಾಧಿಕಾರಿಗಳು ಮಂಡೆಕೋಲು ಪಂಚಾಯತ್‌ಗೆ ಹೋಗಿ ಅಲ್ಲಿಂದ ಮಂಡೆಕೋಲು ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ಇತ್ತರು.