ನ.19 ರಂದು ಮಂಗಳೂರಿನಲ್ಲಿ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಲೋಕಾರ್ಪಣೆ, ಮುಖ್ಯಮಂತ್ರಿ, ಸ್ವಾಮೀಜಿಗಳು, ಸಚಿವರು ಸಹಿತ ಹಲವು ಗಣ್ಯರು ಭಾಗಿ, ಸುಳ್ಯದ ಪ್ರತೀ ಮನೆಯಿಂದಲೂ ಜನರು ಭಾಗವಹಿಸಲು ಗೌಡರ ಯುವ ಸೇವಾ ಸಂಘ ವಿನಂತಿ

0

ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿ ನಾಯಕ ಸುಳ್ಯದ ಕೆದಂಬಾಡಿ ರಾಮಯ್ಯ ಗೌಡರ ಪುತ್ಥಳಿಯನ್ನು ಈಗಾಗಲೇ ಮಂಗಳೂರಿನ ಬಾವುಟಗುಡ್ಡೆಯಲ್ಲಿ ಸ್ಥಾಪಿಸಲಾಗಿದ್ದು, ಅದರ ಲೋಕಾರ್ಪಣೆ ಕಾರ್ಯಕ್ರಮ ನ.19 ರಂದು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸುಳ್ಯ ತಾಲೂಕಿನ ಪ್ರತೀ‌ ಮನೆಯಿಂದಲೂ ಜನರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್ ಹೇಳಿದರು.

ನ.12 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಕಾರ್ಯಕ್ರಮದ ವಿವರ ನೀಡಿದರು.

ಕೆದಂಬಾಡಿ ರಾಮಯ್ಯ ಗೌಡರು ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ‌ ಬ್ರಿಟಿಷರ ವಿರುದ್ಧ ಹೋರಾಡಿ 13 ದಿನ ರಾಜ್ಯಭಾರ ಮಾಡಿದ ಧೀಮಂತ ನಾಯಕ. ಕೆದಂಬಾಡಿ ರಾಮಯ್ಯ ಗೌಡರು ಸುಳ್ಯದ ಹೆಮ್ಮೆ. ಈಗಾಗಲೇ ಅವರ ಕಂಚಿನ ಪುತ್ಥಳಿಯನ್ನು ಅದ್ದೂರಿ‌ ಮೆರವಣಿಗೆಯೊಂದಿಗೆ ಮಂಗಳೂರಿಗೆ ಕೊಂಡೊಯ್ದು ಸ್ಥಾಪನೆ ಮಾಡಲಾಗಿದೆ. ಮೆರವಣಿಗೆಗೆ ನೀಡಿದ ಯಶಸ್ಸಿನಂತೆ ನ.19 ರ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ತಾಲೂಕಿನ ಪ್ರತೀ‌ ಮನೆಯಿಂದಲೂ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಅವರು ವಿನಂತಿಸಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರು, ರಾಜ್ಯ ಸಚಿವರು ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಸಮಾರಂಭದಲ್ಲಿ ಸುಮಾರು 50 ಸಾವಿರ ಮಂದಿ‌ ಭಾಗವಹಿಸಲಿದ್ದು, ಸುಳ್ಯದಿಂದ 10 ಸಾವಿರ ಮಂದಿ ಭಾಗವಹಿಸುತ್ತಾರೆ. ಕಾರ್ಯಕ್ರಮಕ್ಕೆ ಹೋಗಲು ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 2-3 ಬಸ್ ವ್ಯವಸ್ಥೆ ಮಾಡಲಾಗಿದೆ. ಗ್ರಾಮ ಪಂಚಾಯತ್ ಹಾಗೂ ಗ್ರಾಮ ಗೌಡ ಸಂಘದ ಪ್ರಮುಖರು ಇದರ ಜವಾಬ್ದಾರಿ ನೋಡಿಕೊಳ್ಳಲಿದ್ದಾರೆ ಎಂದು ಅವರು ವಿವರ ನೀಡಿದರು.

ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು. ಅದಕ್ಕಾಗಿ ಬಸ್ ವ್ಯವಸ್ಥೆ ಮಾಡಲಾಗುತ್ತಾದರೂ ವೈಯಕ್ತಿಕ ವಾಹನ ಇರುವವರು ತಮ್ಮ ವಾಹನದಲ್ಲೇ ಬರಬೇಕು ಎಂದು ಗೌಡರ ಯುವ ಸೇವಾ ಸಂಘದ ನಿಕಟಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಗೌಡರ ಯುವ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಬೆಳ್ಯಪ್ಪ ಗೌಡ ಬಳ್ಳಡ್ಕ, ದಾಮೋದರ ನಾರ್ಕೋಡು, ಪಿ.ಎಸ್.ಗಂಗಾಧರ್, ರಾಕೇಶ್ ಕುಂಟಿಕಾನ, ರಜತ್ ಅಡ್ಕಾರ್, ಡಾ.ಪುರುಷೋತ್ತಮ ಕೆ.ಜಿ. ಇದ್ದರು.