ಡಿಸೆಂಬರ್ ತಿಂಗಳಲ್ಲಿ ಸುಳ್ಯದಲ್ಲಿ ಬೃಹತ್ ಕೃಷಿ ಮೇಳಕ್ಕೆ ಭರ್ಜರಿ ಸಿದ್ಧತೆ 150 ಕ್ಕೂ ಅಧಿಕ ಸ್ಟಾಲ್‌ಗಳು ; ಪಾರಂಪರಿಕ ಗ್ರಾಮ ವೈಶಿಷ್ಟ್ಯ ವಿಚಾರ ಸಂಕಿರಣ ; ಕೃಷಿಕರಿಗೆ ಗೌರವ ; ಜಾನಪದ ಸಾಂಸ್ಕ್ರತಿಕ ಸಂಭ್ರಮ

0

ಡಿಸೆಂಬರ್ ೧೬, ೧೭ ಮತ್ತು ೧೮ರಂದು ಮೂರು ದಿನಗಳ ಕಾಲ ಸುಳ್ಯಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ಬೃಹತ್ ಕೃಷಿ ಮೇಳ ನಡೆಯಲಿದ್ದು ಈಗಾಗಲೇ ಭರ್ಜರಿ ಸಿದ್ಧತೆ ನಡೆಸಲಾಗಿದೆ.


ಸುಳ್ಯದ ಜೀವನದಿ `ಪಯಸ್ವಿನಿ’ಯ ಹೆಸರಿನಲ್ಲಿ ಕೃಷಿ ಮೇಳ ನಡೆಯಲಿದ್ದು ಮೂರು ದಿನಗಳ ಈ ಉತ್ಸವದಲ್ಲಿ ೧೫೦ಕ್ಕೂ ಅಧಿಕ ಕೃಷಿಗೆ ಸಂಬಮಧಿಸಿದ ಸ್ಟಾಲ್‌ಗಳು, ಪಾರಂಪರಿಕ ಗ್ರಾಮ ವೈಶಿಷ್ಟ್ಯ, ವಿಚಾರ ಸಂಕಿರಣ, ಕೃಷಿಕರಿಗೆ ಗೌರವ, ಜಾನಪದ ಸಾಂಸ್ಕ್ರತಿಕ ಸಂಭ್ರಮ, ಶ್ವಾನ ಮೇಳ, ಹಸುಗಳ ಪ್ರದರ್ಶನ ಹೀಗೆ ವಿವಿಧ ವೈಶಿಷ್ಟ್ಯತೆಗಳು ಇರಲಿದೆ.

ಪ್ರಣವ ಸೌಹಾರ್ದ ಸಹಕಾರಿ ಸಂಘ, ಸುಳ್ಯ ರೈತ ಉತ್ಪಾದಕರ ಕಂಪೆನಿ, ಮಂಗಳೂರು ವಿಶ್ವವಿದ್ಯಾನಿಲಯ, ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು, ಸುಳ್ಯ ಸಹಕಾರಿ ಯೂನಿಯನ್ ಹಾಗೂ ಸುದ್ದಿ ಬಿಡುಗಡೆ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಕೃಷಿ ಮೇಳ ನಡೆಯಲಿದ್ದು ಈ ಕುರಿತು ಚರ್ಚಿಸಲು ನ.೧೮ರಂದು ಸುಳ್ಯ ತಾ.ಪಂ. ಸಭಾಂಗಣದಲ್ಲಿ ಸಚಿವ ಎಸ್.ಅಂಗಾರರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.


ಪ್ರಣವ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಕಾರ್ಯಕ್ರಮದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಿ.ಆರ್. ಪ್ರಸಾದ್‌ರವರು ಪ್ರಾಸ್ತಾವಿಕ ಮಾತನಾಡಿ ಮೂರು ದಿನದ ಕಾರ್ಯಕ್ರಮ ಸುಳ್ಯ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ನಡೆಯಲಿದ್ದು, ಕೃಷಿ ಸಂಬಂಧಿತ ೧೫೦ ಕ್ಕೂ ಅಧಿಕ ವಿವಿಧ ಬಗೆಯ ಸ್ಟಾಲ್ ಗಳು, ಸಾವಯವ ಮತ್ತು ಆಧುನಿಕ ಕೃಷಿ ವಿಚಾರ ಸಂಕಿರಣ, ಮಾರಾಟ ಮಳಿಗೆ, ಪ್ರಾತ್ಯಕ್ಷಿಕೆ, ಇಲಾಖೆಗಳ ಮಾಹಿತಿ, ಕಾರ್ಯಾಗಾರಗಳು, ಸರಕಾರದಿಂದ ಸಿಗುವ ಸವಲತ್ತು, ಹೊಸ ಪೀಳಿಗೆಗೆ ಕೃಷಿ ಒಲವಿಗೆ ಕಾರ್ಯಕ್ರಮ, ಪಾರಂಪರಿಕ ಗ್ರಾಮದ ವೈಶಿಷ್ಟ್ಯತೆ ಗಳ ಕುರಿತು ವಿವರ ನೀಡಿದರು.


ಬಳಿಕ ಮಾತನಾಡಿದ ಸಚಿವ ಎಸ್.ಅಂಗಾರರು, “ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಸಹಕಾರ ನೀಡಬೇಕು. ಮತ್ತು ನೆನಪಿನಲ್ಲಿ ಉಳಿಯುವ ಹಾಗೂ ಹೊಸ ಪೀಳಿಗೆಗೆ ಹಾಗೂ ಕೃಷಿಕರಿಗೆ ಸಹಾಯವಾಗುವ ನಿಟ್ಟಿನಲ್ಲಿ ಕೃಷಿ ಮೇಳ ಇರಲಿದೆ. ಸರಕಾರಿ ಇಲಾಖೆಗಳ ಮಾಹಿತಿ ಮತ್ತು ಸವಲತ್ತು ಪಡೆಯುವ ಕುರಿತು ವ್ಯವಸ್ಥೆಗಳು ಕೃಷಿ ಮೇಳದಲ್ಲಿ ಇರಲಿದೆ. ಆ ನಿಟ್ಟಿನಲ್ಲಿ ಯೋಜನೆ ರೂಪಿಸೋಣ. ಕಾರ್ಯಕ್ರಮದ ಪ್ರಯೋಜನ ಪ್ರತಿಯೊಬ್ಬರಿಗೂ ಸಿಗುವಂತ ಕಾರ್ಯಕ್ರಮ ಇದಾಗಲಿದೆ” ಎಂದು ಹೇಳಿದರು.


ಮೀನುಗಾರಿಕಾ ನಿಗಾಮಾಧ್ಯಕ್ಷ ಎ.ವಿ. ತೀರ್ಥರಾಮ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ತಾ.ಪಂ. ಇ.ಒ. ಭವಾನಿಶಂಕರ್ ವೇದಿಕೆಯಲ್ಲಿದ್ದು ಸಲಹೆ ನೀಡಿದರು.
ಸುಳ್ಯ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜು ಮಾಜಿ ಪ್ರಾಂಶುಪಾಲ ಡಾ| ಎನ್.ಎ. ಜ್ಞಾನೇಶ್, ಸುಳ್ಯ ಗೌಡರ ಯುವ ಸೇವಾ ಸಂಘದ ಮಾಜಿ ಅಧ್ಯಕ್ಷ ದಿನೇಶ್ ಮಡಪ್ಪಾಡಿ ಸಲಹೆ ನೀಡಿದರು.


ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಸುಹಾನ, ಪಶು ಸಂಗೋಪಣಾ ಇಲಾಖೆಯ ಡಾ| ಮೇಘಶ್ರೀ ಇಲಾಖೆಯಿಂದ ಹಮ್ಮಿಕೊಳ್ಳಬಹುದಾದ ಕಾರ್ಯಕ್ರಮಗಳ ವಿವರ ನೀಡಿದರು.