ಶಿಕ್ಷಣ ಸಚಿವರಿಗೆ ಡಾ. ಚಂದ್ರಶೇಖರ ದಾಮ್ಲೆಯವರಿಂದ ಸ್ಕೂಲ್ ಕಾರಿಡಾರ್ ಪ್ರಾಜೆಕ್ಟ್ ಸಲ್ಲಿಕೆ

0

ಕರ್ನಾಟಕದ ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್‌ ಅವರಿಗೆ ನವೆಂವರ್ ೧೯ ಮತ್ತು ೨೦ ರಂದು ಮಂಗಳೂರಿನಲ್ಲಿ ನಡೆದ ಮಕ್ಕಳ ಹಬ್ಬದ ಸಂದರ್ಭದಲ್ಲಿ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ಸ್ವತಃ ರೂಪಿಸಿರುವ ‘ಸ್ಕೂಲ್ ಕಾರಿಡಾರ್’ ಪ್ರಾಜೆಕ್ಟ್ ನ್ನು ಸಲ್ಲಿಸಿದ್ದಾರೆ.

ಹಿಂದೆ ಎರಡು ಮೈಲಿಗೊಂದರಂತೆ ಸ್ಥಾಪಿಸಿದ್ದ ಶಾಲೆಗಳು ಇತ್ತೀಚಿನ ವರ್ಷಗಳಲ್ಲಿ ಅನೇಕ ಕಾರಣಗಳಿಂದ ದುರ್ಬಲವಾಗಿವೆ. ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕೊರತೆ ಹಾಗೂ ತರಗತಿಗೊಬ್ಬರಂತೆ ಶಿಕ್ಷಕರಿಲ್ಲದ ಕೊರತೆಗಳೇ ಮುಖ್ಯ ಕಾರಣಗಳು. ಅವುಗಳನ್ನು ಸಂಯೋಜಿಸಿ ದೂರದ ಶಾಲೆಗಳಿಗೆ ಹೋಗಲು ಮಕ್ಕಳಿಗೆ ಬಸ್ಸುಗಳನ್ನು ಒದಗಿಸಿ ಸಬಲೀಕರಣಗೊಳಿಸುವ ಸಾಧ್ಯತೆಗಳನ್ನು ಈ ಪ್ರಾಜೆಕ್ಟ್ ನಲ್ಲಿ ಮಂಡಿಸಿದ್ದೇನೆ.

ಕಾನೂನಿನ ಪ್ರಕಾರ ಪ್ರತಿ ಮಗುವಿಗೆ ಮನೆಯಿಂದ ಒಂದು ಕಿ.ಮೀ. ದೂರದಲ್ಲಿ ಶಾಲೆ ಸಿಗಬೇಕು. ಪ್ರಸ್ತಾಪಿತ ಸಂಯೋಜನೆಯ ಪ್ರಕಾರ ಪ್ರತಿ ಮಗುವಿಗೆ ಒಂದು ಕಿ.ಮೀ. ದೂರದಲ್ಲಿ ಶಾಲೆಗೆ ಹೋಗುವ ಬಸ್ಸು ಸಿಗುತ್ತದೆ. ಯಾರೂ ಶಿಕ್ಷಣ ವಂಚಿತರಾಗುವುದಿಲ್ಲ. ಅಲ್ಲದೆ ತರಗತಿಗೊಬ್ಬರಂತೆ ಶಿಕ್ಷಕರೂ ಸಿಗುತ್ತಾರೆ. ಈ ಪ್ರಯೋಗದಿಂದ ಹಳ್ಳಿಗಳಲ್ಲಿ ಖಾಸಗಿ ಶಾಲೆಗಳಿಗೆ ಹೋಗುವ ಮಕ್ಕಳು ತಿರುಗಿ ಸರಕಾರಿ ಶಾಲೆಗಳಿಗೆ ಬರುವ ಸಾಧ್ಯತೆ ಹೆಚ್ಚಿದೆ ಎಂಬುದು ದಾಮ್ಲೆಯವರ ಪ್ರತಿಪಾದನೆಯಾಗಿದೆ. ಇದು ಕನ್ನಡ ಮಾಧ್ಯಮದ ಶಿಕ್ಷಣಕ್ಕೆ ಪುಷ್ಟಿ ನೀಡುತ್ತದೆ.

ನೂತನ ಶಿಕ್ಷಣ ನೀತಿಯ ಅಡಿಯಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವ ಸರಕಾರಿ ಶಾಲೆಗಳನ್ನು ಬಲಪಡಿಸುವ ಯೋಜನೆ ಇದೆ ಎಂಬುದಾಗಿ ಸಚಿವರು ಹೇಳಿದ್ದಾರೆ.