ಸುಳ್ಯ ಎನ್ನೆಂಸಿಯಲ್ಲಿ ಉದ್ಯೋಗ ಮೇಳ ಉದ್ಘಾಟನೆ, ಜನರ ಬೇಡಿಕೆಯಂತೆ ಗ್ರಾಮೀಣ ಭಾಗದಲ್ಲಿ ಉದ್ಯೋಗ ಮೇಳ ಆಯೋಜನೆ : ಸಚಿವ ಎಸ್.ಅಂಗಾರ

0

“ಪ್ರತೀ ಬಾರಿಯೂ ಜಿಲ್ಲಾ ಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಉದ್ಯೋಗ ಮೇಳಗಳು ನಡೆಯುತ್ತವೆ. ಅದರಲ್ಲಿ ಗ್ರಾಮೀಣ ಭಾಗದ ಜನರಿಗೆ ಭಾಗವಹಿಸಲು ಸಾಧ್ಯವಾಗದ ಇಂತ ಸಂದರ್ಭದಲ್ಲಿ ಗ್ರಾಮೀಣ ಭಾಗದ ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಸುಳ್ಯದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಇದರ ಸದುಪಯೋಗ ಎಲ್ಲರೂ ಪಡೆಯುವಂತಾಗಲಿ” ಎಂದು ಸಚಿವ ಎಸ್.ಅಂಗಾರ ಹೇಳಿದರು.

ಸುಳ್ಯದ ಎನ್ನೆಂಸಿಯಲ್ಲಿ ಸಚಿವ ಎಸ್.ಅಂಗಾರರ ನೇತೃತ್ವದಲ್ಲಿ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕೆರಿಯರ್ ಡೆಸ್ಟಿನಿ ಮಂಗಳೂರು, ಎನ್ನೆಂಸಿ ಸುಳ್ಯ ಇವರ ಸಹಯೋಗದಲ್ಲಿ ನಡೆಯುತ್ತಿರುವ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು‌ ಮಾತನಾಡಿದರು.

“ನಾನು ಶಾಸಕನಾಗಿ ಆಯ್ಕೆಯಾದ ಬಳಿಕ ಉದ್ಯೋಗಕ್ಕಾಗಿ ಹಲವು ಮಂದಿ ಪ್ರತೀ ವರ್ಷ ನನ್ನ ಬಳಿ ಬರುತ್ತಾರೆ.‌ ಇದು ಜನರ ಬೇಡಿಕೆ ಆ ನಿಟ್ಟಿನಲ್ಲಿ ಇದೀಗ ಎರಡನೇ ಬಾರಿಗೆ ಉದ್ಯೋಗ ಮೇಳ ಆಯೋಜಿಸಿದ್ದೇವೆ. ಇಲ್ಲಿ ಎಲ್ಲ ವಿಭಾಗದವರಿಗೂ ಅವಕಾಶ ಇದೆ.‌ ವಾಹನ ಚಾಲಕರಿಗೆಯೂ ಅವಕಾಶ ಇದೆ. ಅದೊಂದು ವೇಳೆ ಕೆಲಸ ಇಲ್ಲವಾದರೆ ಮುಂದಿನ ದಿನದಲ್ಲಿ ಮತ್ತೆ ಅವರಿಗೂ ಅವಕಾಶ ಕಲ್ಪಿಸಲು ಕಾರ್ಯಗಾರ ಹಮ್ಮಿಕೊಳ್ಳುವುದಾಗಿ ಹೇಳಿದರಲ್ಲದೆ, ಈ ಉದ್ಯೋಗ ಮೇಳ ಆಯೋಜನೆಗೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆತ್ಮ ನಿರ್ಭರ್ ಭಾರತ್ ಯೋಜನೆ ಪ್ರೇರಣೆ.‌ ಇಲ್ಲಿ ಉದ್ಯೋಗಕ್ಕಾಗಿ ಬಂದವರು ಆಶಾವಾದಿಗಳಾಗಿರಬೇಕು. ನಿರಂತರ ಪ್ರಯತ್ನದಿಂದ ಯಶಸ್ಸು ದೊರೆಯುವುದು” ಎಂದು ಹೇಳಿದರು.

ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ” ಬೇರೆ ಬೇರೆ ವಿದ್ಯಾಸಂಸ್ಥೆಗಳಿಂದ ನೂರಾರು ವಿದ್ಯಾರ್ಥಿಗಳು ಪ್ರತೀ ವರ್ಷ ಹೊರಗೆ ಬರುತ್ತಾರೆ. ‌ ಮುಂದಿನ ಉದ್ಯೋಗಕ್ಕೆ ಅವರಲ್ಲಿ ಕ್ವಾಲಿಟಿ ಎಜ್ಯುಕೇಶನ್ ಇದೆಯ ಎಂದು ಕಂಪೆನಿಯವರು ನೋಡುತ್ತಾರೆ. ಹೊಸ ಸ್ಕಿಲ್ ಇದ್ರೆ ಉದ್ಯೋಗ ಸಿಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಕೌಶಲ್ಯ ವೃದ್ಧಿಗೆ ಆದ್ಯತೆ ನೀಡಬೇಕು” ಎಂದು‌ ಹೇಳಿದರು.

ಮೀನುಗಾರಿಕಾ ನಿಗಮಾಧ್ಯಕ್ಷ ಎ.ವಿ. ತೀರ್ಥರಾಮರು “ಅಂಗಾರರು ತನ್ನ ಜನರಿಗೆಂದು ಉದ್ಯೋಗ ಮೇಳ ಆಯೋಜಿಸಿದ್ದಾರೆ. ಉದ್ಯೋಗ ಪಡೆದವರು ಅವರಿಗೆ ಏನೂ ಕೊಡುವುದು ಬೇಡ. ಕೆಲಸ ಸಿಕ್ಕಿದ ಬಳಿಕ ಅವರನ್ನು ನೆನಪಿಸಿಕೊಂಡರೆ ಸಾಕು” ಎಂದು ಹೇಳಿದರು.

ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಮಂಗಳೂರು ಕೆರಿಯರ್ ಡೆಸ್ಟಿನಿ ಯ ಜಯಶ್ರೀ, ಎನ್ನೆಂಸಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶಿವಪ್ರಸಾದ್ ಕಣಿಪ್ಪಿಲ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್, ವಿದ್ಯಾರ್ಥಿ ಕ್ಷೇಮಾಧಿಕಾರಿ ರತ್ನಾವತಿ ಡಿ, ತೆಂಗಿನ ನಾರಿನ ಅಭಿವೃದ್ಧಿ ನಿಗಮದ ಎಂ.ಡಿ. ಚಂದ್ರಶೇಖರ ದೊಡ್ಡಮನಿ, ಎಂ.ಎಸ್.ಎಂ.ಐ. ಜಂಟಿ ನಿರ್ದೇಶಕ ದೇವರಾಜ್ , ಉದ್ಯಮ ಶೀಲತಾ ಇಲಾಖೆಯ ಜೆ.ಡಿ. ಅರವಿಂದ ಡಿ ಬಾಳೇರಿ, ಶ್ರೀಮತಿ ವಿಜಯಲಕ್ಷ್ಮೀ ಇದ್ದರು.
ಎನ್ನೆಂಸಿ ಪ್ರಾಂಶುಪಾಲ ರುದ್ರಕುಮಾರ್ ಎಂ.ಎಂ. ಸ್ವಾಗತಿಸಿದರು. ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಹೇಮಚಂದ್ರ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ಸಂಜೀವ ಕುದ್ಪಾಜೆ ವಂದಿಸಿದರು. ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.