ಪಂಚಮಿಯಂದು 163 ಭಕ್ತರಿಂದ ಎಡೆಸ್ನಾನ

0

ಕುಕ್ಕೆ ಸುಬ್ರಹ್ಮಣ್ಯದ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಸ್ಕಂಧ ಪಂಚಮಿಯ ದಿನವಾದ ನ.28 ರಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ 163 ಭಕ್ತರು ಎಡೆಸ್ನಾನ ಸೇವೆಗೈದರು. ಗೋವು ಸೇವಿಸಿದ ಎಲೆಯ ಮೇಲೆ ಭಕ್ತರು ಉರುಳು ಸೇವೆ ನಡೆಸುವ ಮೂಲಕ ಚಂಪಾಷಷ್ಠಿಯ ಜಾತ್ರೋತ್ಸವದ ಪಂಚಮಿಯ ದಿನದಂದು ಎಡೆಸ್ನಾನ ಹರಕೆ ಸೇವೆ ಸಲ್ಲಿಸಿದರು.ಷಷ್ಠಿಯ ದಿನವಾದ ಇಂದು ಕೂಡಾ ಎಡೆಸ್ನಾನ ಸೇವೆಯನ್ನು ಭಕ್ತರು ನೆರವೇರಿಸಲಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆಯ ಶೈವಾಗಮ ಪಂಡಿತ ಗೋಪಾಲ್ ಅವರು ಎಡೆಸ್ನಾನದ ಕುರಿತು ಮಾರ್ಗದರ್ಶನ ನೀಡಿದರು.ಅದರಂತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಧ್ಯಾಹ್ನ ಮಹಾಪೂಜೆ ಬಳಿಕ ದೇವಳದ ಹೊರಾಂಗಣದ ಸುತ್ತಲೂ ಬಾಳೆಎಲೆಗಳನ್ನು ಹಾಕಿ ಅದರ ಮೇಲೆ ದೇವರ ನೈವೇಧ್ಯಗಳನ್ನು ಬಳಸಲಾಯಿತು. ಬಳಿಕ ದೇವಳದ ಗೋವುಗಳು ಆ ಎಲೆಗಳಲ್ಲಿದ್ದ ಅನ್ನಪ್ರಸಾದವನ್ನು ತಿಂದವು. ಹಸುಗಳು ತಿಂದ ಅನ್ನಪ್ರಸಾದದ ಮೇಲೆ ದೇವಳದ ಎದುರಿನ ದರ್ಪಣತೀರ್ಥ ನದಿಯಲ್ಲಿ ಸ್ನಾನ ಮಾಡಿ ನಿಂತಿದ್ದ ಎಲ್ಲಾ ವಯೋಮಾನದ ಭಕ್ತರು ಉರುಳು ಸೇವೆ ಕೈಗೊಂಡರು. ಗೋವು ತಿಂದ ಎಲೆಯ ಮೇಲೆ ಉರುಳು ಸೇವೆ ಮಾಡುತ್ತಾ ಒಂದು ಸುತ್ತು ಪ್ರದಕ್ಷಿಣೆ ಹಾಕಿದ ಬಳಿಕ ಭಕ್ತರು ದರ್ಪಣ ತೀರ್ಥ ನದಿಯಲ್ಲಿ ಸ್ನಾನ ಮಾಡಿ ಶ್ರೀ ದೇವರ ಪ್ರಸಾದ ಮತ್ತು ಪ್ರಸಾದ ಬೋಜನ ಸ್ವೀಕರಿಸಿದರು.