ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಅವಭೃತೋತ್ಸವ-ನೌಕಾವಿಹಾರ, ಸಾವಿರಾರು ಮಂದಿ ಭಾಗಿ

0

ಚಂಪಾಷಷ್ಠಿ ಜಾತ್ರಾ ಮಹೋತ್ಸವ ಅಂಗವಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಮಾರ್ಗಶಿರ ಶುದ್ಧ ಸಪ್ತಮಿಯ ದಿನವಾದ ನ.30 ರಂದು ಪುಣ್ಯ ನದಿ ಕುಮಾರಾಧಾರಾದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ನೌಕಾವಿಹಾರ ಮತ್ತು ಅವಭೃತೋತ್ಸವ ನೆರವೇರಿತು.
ದೇವಸ್ಥಾನದಿಂದ ಬಂಡಿ ರಥದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ಅವಭೃತೋತ್ಸವ ಸವಾರ ಹೊರಟು ಬಿಲದ್ವಾರದ ಕಟ್ಟೆಯಲ್ಲಿ ಪೂಜೆ ಸಲ್ಲಿಸಲಾಯಿತು. ಬಳಿಕ ಅಲ್ಲಿಂದ ಬಂಡಿ ರಥದಲ್ಲಿ ಕುಮಾರಧಾರೆಗೆ ಬರಲಾಯಿತು. ತಳಿರು ತೋರಣ, ಹೂವುಗಳಿಂದ ಸಿಂಗಾರಿಸಲ್ಪಟ್ಟ ತೆಪ್ಪದಲ್ಲಿ ನೌಕವಿಹಾರ ಜರುಗಿತು.


ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯ ಅವರು ಅವಭೃತೋತ್ಸವದ ಧಾರ್ಮಿಕ ವಿದಿವಿಧಾನ ನೆರವೇರಿಸಿದರು. ಇತರ ಪುರೋಹಿತರು ಮಂತ್ರ ಘೋಷಗಳನ್ನು ಮಾಡಿದರು. ಸಹಸ್ರಾರು ಭಕ್ತರು ದೇವರ ಅವಭೃತ ಸ್ನಾನದಲ್ಲಿ ಭಾಗವಹಿಸಿ ಪುಣ್ಯ ಸ್ನಾನ ಮಾಡಿ ಕೃತಾರ್ಥರಾದರು.

ಕುಮಾರಧಾರ ನದಿಯ ಮತ್ಸ್ಯ ತೀರ್ಥದಲ್ಲಿ ಶ್ರೀ ದೇವರ ನೌಕಾವಿಹಾರ ನಡೆಯಿತು. ಸಿಂಗರಿಸಲ್ಪಟ್ಟ ತೆಪ್ಪದಲ್ಲಿ ಕುಕ್ಕೆ ಸುಬ್ರಹ್ಮಣ್ಯನ ನೌಕಾವಿಹಾರ ನಡೆಯಿತು. ಬಳಿಕ ಕುಮಾರಧಾರೆಯ ಜಳಕದ ಗುಂಡಿಯಲ್ಲಿ ವೈಧಿಕರ ಮಂತ್ರ ಘೋಷದೊಂದಿಗೆ ಶ್ರೀದೇವರ ಅವಭೃತೋತ್ಸವದ ಧಾರ್ಮಿಕ ವಿದಿವಿಧಾನವನ್ನು ಪ್ರಧಾನ ಅರ್ಚಕರು ನೆರವೇರಿಸಿದರು.

ಶ್ರೀ ದೇವರ ಜಳಕದ ಬಳಿಕ ಕುಮಾರಧಾರ ನದಿತೀರದ ಅವಭೃತಕಟ್ಟೆಯಲ್ಲಿ ವಿಶೇಷ ಕಟ್ಟೆಪೂಜೆ ನೆರವೇರಿತು.
ನಂತರ ದೇವಳಕ್ಕೆ ಶ್ರೀ ದೇವರ ಸವಾರಿ ಹೊರಟಿತು. ಅಲ್ಲಲ್ಲಿ ಭಕ್ತಾಧಿಗಳು ಆರತಿ, ಹೂ, ಹಣ್ಣುಕಾಯಿ, ಕರ್ಪೂರಾರತಿಗಳನ್ನು ದೇವರಿಗೆ ಸಮರ್ಪಿಸಿದರು. ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ನೌಕಾವಿಹಾರ ಮತ್ತು ಅವಭೃತೋತ್ಸವದ ಸಂದರ್ಭದಲ್ಲಿ ಕ್ಷೇತ್ರದ ಗಜರಾಣಿ ಯಶಸ್ವಿ ಎಲ್ಲರಂತೆ ನದಿಯಲ್ಲಿ ಸ್ನಾನ ಮಾಡಿ ಜಲಕ್ರೀಡೆಯಲ್ಲಿ ಸಂಭ್ರಮಿಸಿತು. ಶ್ರೀ ದೇವರು ಅವಭೃತ ಸ್ನಾನ ಮುಗಿಸಿ ಕುಮಾರಧಾರೆಯಿಂದ ಸುಬ್ರಹ್ಮಣ್ಯಕ್ಕೆ ಆಗಮಿಸುವ ಸಂದರ್ಭದಲ್ಲಿ ಸ್ಥಳಿಯ ಭಕ್ತಾದಿಗಳು ಶರಬತ್ತು, ಪಾನಕ, ಮಜ್ಜಿಗೆ ಎಳನೀರನ್ನು ವಿತರಿಸಿದರು.


ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಆಡಳಿತ ಮಂಡಳಿ ಸದಸ್ಯರು ಹಾಗೂ ಸಾವಿರಾರು ಭಕ್ತಾಧಿಗಳು ಉಪಸ್ಥಿರಿದ್ದರು.