ಸುಳ್ಯದಲ್ಲಿ ಕೃಷಿ ಮೇಳ ಆರಂಭ, ಕೃಷಿ ಹಾಗೂ ಋಷಿ ಪರಂಪರೆ ಈ ದೇಶದ ಶಕ್ತಿ : ಮೋಹನದಾಸ ಸ್ವಾಮೀಜಿ, ಕೃಷಿ ಪದ್ಧತಿಯಿಂದ ಆರೋಗ್ಯ ಪೂರ್ಣ ಬದುಕು : ಸಚಿವ ಎಸ್.ಅಂಗಾರ

0

“ಕೃಷಿ ಹಾಗೂ ಋಷಿ ಪರಂಪರೆ ಈ ದೇಶದ ಶಕ್ತಿ.‌ ಅದನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಯುವ ಪೀಳಿಗೆ ಮುಂದೆ ಬರಬೇಕು. ಮಣ್ಣಿನ ಸತ್ವ ಉಳಿಸುವ ನಿಟ್ಟಿನಲ್ಲಿ ಸಾವಯವ ಕೃಷಿಗೆ ಆದ್ಯತೆ ನೀಡಬೇಕು” ಎಂದು ಮಾಣಿಲ ಶ್ರೀಧಾಮ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಸುಳ್ಯದ ಚೆನ್ನಕೇಶವ ದೇವಸ್ಥಾನ ವಠಾರದಲ್ಲಿ ನಡೆಯುತ್ತಿರುವ ಕೃಷಿ ಮೇಳದ ಆರಂಭೋತ್ಸವದಲ್ಲಿ ಗೋಪೂಜೆ ನೆರವೇರಿಸಿದ ಸ್ವಾಮೀಜಿಯವರು, ಬಳಿಕ ಡಾ.ಕುರುಂಜಿ ವೆಂಕಟರಮಣ ಗೌಡ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನಗೈದರು.

ಕೊರೊನಾ ಬಂದ ಸಂದರ್ಭದಲ್ಲಿ ಈ ಭಾಗದಲ್ಲಿ ಜನರು ಕೃಷಿ ಇದ್ದುದರಿಂದ ನಿಟ್ಟುಸಿರು ಬಿಡುವಂತಾಗಿದೆ ಎನ್ನುವುದನ್ನು ಮರೆಯುವಂತಿಲ್ಲ. ಆದ್ದರಿಂದ ಬರಡು ಭೂಮಿಯಲ್ಲಿ ಗಿಡಗಳನ್ನು ಬೆಳೆಸಿ ದೇಶದ ಅಂತರ್ ಸತ್ವ ಬೆಳೆಸುವಲ್ಲಿ ಎಲ್ಲರೂ ಕಠೀ ಬದ್ಧರಾಗಬೇಕೆಂದು ಅವರು ಹೇಳಿದರು.

ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಎಸ್. ಅಂಗಾರರು “ಈಗಿನ ಮಕ್ಕಳಿಗೆ ಹಿಂದಿನ ಕೃಷಿ ಪದ್ಧತಿಯ ಬದುಕಿನ ಅನುಭವ ಇಲ್ಲ. ಯಾವುದೇ ಕಷ್ಟವಿಲ್ಲದೇ ಜೀವನ ನಡೆಸುವ ಸ್ಥಿತಿ ಇದೆ. ಇಂದು ಇಲ್ಲಿ ಆಯೋಜನೆಗೊಂಡಿರುವ ಕೃಷಿ ಮೇಳದಲ್ಲಿ ಹಿಂದಿನ ಜೀವನ ಪದ್ಧತಿ ತಿಳಿಯಲು ಸೂಕ್ತ ವ್ಯವಸ್ಥೆಯಾಗಿದೆ. ಕೃಷಿ ಪದ್ಧತಿಯಿಂದ ಆರೋಗ್ಯ ಪೂರ್ಣ ಬದುಕು ನಡೆಸಲು ಸಾಧ್ಯ” ಎಂದು ಹೇಳಿದರು.

“ಈ ಭಾಗದಲ್ಲಿ ಅಡಿಕೆ ಎಲೆ ಹಳದಿ ರೋಗ ಹಾಗೂ ಎಲೆ ಚುಕ್ಕಿ ರೋಗ ವ್ಯಾಪಕವಾಗಿ ಇದೆ. ಈಗಾಗಲೇ ತೋಟಗಾರಿಕಾ ಸಚಿವರಾದ ಮುನಿರತ್ನರವರು ಬಂದು ತೋಟಗಳನ್ನು ಪರಿಶೀಲಿಸಿದ್ದಾರೆ.‌ ಇದರ ಪರಿಹಾರಕ್ಕಾಗಿ ಸಚಿವರೊಂದಿಗೆ ಚರ್ಚಿಸಿಕೊಂಡು ಅಧಿವೇಶನದಲ್ಲಿ ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಸುಳ್ಯ‌ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಅಧ್ಯಕ್ಷತೆ ವಹಿಸಿದ್ದರು. “ಕೃಷಿ ಕ್ಷೇತ್ರವನ್ನು ಕೂಡಾ ಉದ್ಯಮವೆಂದು ತಿಳಿದು, ಶ್ರಮ ಪಟ್ಟು ದುಡಿದರೆ ನಷ್ಟವಾಗಲು ಸಾಧ್ಯವೇ ಇಲ್ಲ. ಜಲ ಸಂರಕ್ಷಣೆಗೆ ಎಲ್ಲರೂ ಆದ್ಯತೆ ನೀಡಬೇಕು” ಎಂದು ಹೇಳಿದರು.

ರಾಜ್ಯ‌ ಮೀನುಗಾರಿಕಾ ನಿಗಮಾಧ್ಯಕ್ಷ ಎ.ವಿ.ತೀರ್ಥರಾಮ, ತಾ.ಪಂ. ಇ.ಒ. ಭವಾನಿಶಂಕರ್ ಮುಖ್ಯ ಅತಿಥಿಗಳಾಗಿದ್ದರು.
ಕೃಷಿ ಮೇಳ ಪ್ರಮುಖರಾದ ವೀರಪ್ಪ ಗೌಡ ಕಣ್ಕಲ್, ಸಂತೋಷ್ ಜಾಕೆ, ಸಂತೋಷ್ ಕುತ್ತಮೊಟ್ಟೆ, ಹರೀಶ್ ರೈ ಉಬರಡ್ಕ ವೇದಿಕೆಯಲ್ಲಿ ಇದ್ದರು.

ಗಾಯಕಿ ಆರತಿ ಪುರುಷೋತ್ತಮ ಪ್ರಾರ್ಥಿಸಿದರು. ಕೃಷಿ ಮೇಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಿ.ಆರ್. ಪ್ರಸಾದ್ ಸ್ವಾಗತಿಸಿ, ಪಿ.ಎಂ. ರಂಗನಾಥ್ ವಂದಿಸಿದರು.

ಶ್ರೀದೇವಿ ನಾಗರಾಜ್ ಹಾಗೂ ಮಧುರಾ ಎಂ.ಆರ್. ಕಾರ್ಯಕ್ರಮ ನಿರೂಪಿಸಿದರು.